ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್‌ ಹೋರಾಟಕ್ಕೂ ಮುನ್ನ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ದಿಢೀರ್ ಎಂಟ್ರಿ!

ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಿಂದ ಲೋಕಭವನದತ್ತ ಮೆರವಣಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಬೆಂಗಳೂರಿಗೆ ದಿಢೀರ್ ಎಂಟ್ರಿ ಕೊಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್‌ ಹೋರಾಟಕ್ಕೂ ಮುನ್ನ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ದಿಢೀರ್ ಎಂಟ್ರಿ!
ರಣದೀಪ್ ಸುರ್ಜೇವಾಲ

Updated on: Jan 27, 2026 | 6:31 AM

ಬೆಂಗಳೂರು, ಜನವರಿ 27: ಕೇಂದ್ರ ಸರ್ಕಾರ ಮನ್​ರೇಗಾ (NREGA) ಯೋಜನೆಯ ಹೆಸರನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ (Congress) ಪಕ್ಷದಿಂದ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಭಾಗವಹಿಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ದಿಢೀರ್ ಆಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಸುರ್ಜೇವಾಲ, ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ನಡೆಯಲಿರುವ ಪ್ರತಿಭಟನೆಯಲ್ಲಿ ಅವರು ಭಾಗವಹಿಸಲಿದ್ದಾರೆ.

ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ವಹಿಸಲಿದ್ದು, ಬೆಳಗ್ಗೆ 10.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಆರಂಭವಾಗಲಿದೆ. ಬಳಿಕ ಕಾಂಗ್ರೆಸ್ ನಾಯಕರು ಲೋಕಭವನದತ್ತ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಲಿದ್ದಾರೆ.

ಈ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನರೇಗಾ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಜೊತೆಗೆ, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 5 ಕಿಲೋಮೀಟರ್ ಪಾದಯಾತ್ರೆ ನಡೆಸುವಂತೆ ಸೂಚಿಸಲಾಗಿದೆ.

ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಮೂಲ ಆತ್ಮವನ್ನು ಉಳಿಸಿಕೊಳ್ಳುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದು ಡಿಕೆ ಶಿವಕುಮಾರ್ ಸೋಮವಾರ ಸ್ಪಷ್ಟಪಡಿಸಿದ್ದರು.

ಇನ್ನು, ಈ ಪ್ರತಿಭಟನೆಗೆ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷವೇ ಮುತ್ತಿಗೆ ಹಾಗೂ ಮೆರವಣಿಗೆ ನಡೆಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮೆರವಣಿಗೆ ಹಾಗೂ ಮುತ್ತಿಗೆಗಳಿಗೆ ನಿಷೇಧ ಇದ್ದು, ಈ ಬಗ್ಗೆ ಹೈಕೋರ್ಟ್ ನಿರ್ದೇಶನವಿದೆ. ಕಾನೂನು ಉಲ್ಲಂಘನೆಗೆ ಆಡಳಿತ ಪಕ್ಷವೇ ಮುಂದಾಗಿರುವುದು ಸರಿಯೇ? ಆಡಳಿತ ಪಕ್ಷಕ್ಕೆ ಅವಕಾಶ ನೀಡಿದರೆ, ಇತರ ಪಕ್ಷಗಳಿಗೂ ಇದೇ ಅವಕಾಶ ನೀಡಲಾಗುತ್ತದೆಯೇ ಎಂದು ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಎತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ ಲೋಕಭವನ ಚಲೋಗೆ ಆಕ್ಷೇಪ: ಶಾಸಕ ಸುರೇಶ್​​ ಕುಮಾರ್​​ರಿಂದ ಸಾಲು ಸಾಲು ಪ್ರಶ್ನೆ

ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಕಾಂಗ್ರೆಸ್‌ ಪ್ರತಿಭಟನೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 am, Tue, 27 January 26