ಶಾಸಕರ ಮುನಿಸಿಗೆ ಮದ್ದರೆಯಲು ಸುರ್ಜೇವಾಲ ಸಂಧಾನ ಸೂತ್ರ: 40 ಶಾಸಕರಿಗೆ ಬುಲಾವ್, 7 ಶಾಸಕರಿಂದ ಅಭಿಪ್ರಾಯ ಸಂಗ್ರಹ

ಕಳೆದೆರಡು ವಾರದಿಂದ ರಾಜ್ಯ ಸರ್ಕಾರದ ವಿರುದ್ಧ, ಸಚಿವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಕಾಂಗ್ರೆಸ್ ಶಾಸಕರು ಸೋಮವಾರ ಹೈಕಮಾಂಡ್ ಮುಂದೆ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ. ಕಾಂಗ್ರೆಸ್ ಮನೆಯ ಅಸಮಾಧಾನದ ಬೆಂಕಿ ಹೈಕಮಾಂಡ್ ಅಂಗಳ ತಲುಪಿದೆ. ಕೆಲವು ಮಂದಿ ಶಾಸಕರ ಜತೆ ಮಾತುಕತೆ ನಡೆಸಿರುವ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಸಿಡಿದೆದ್ದ ಶಾಸಕರ ಮುನಿಸಿಗೆ ಮದ್ದರೆಯಲು ಸಂಧಾನ ಸೂತ್ರ ಅಳವಡಿಸಿದ್ದು, ಇಂದು 40 ಶಾಸಕರಿಗೆ ಬುಲಾವ್ ಕಳುಹಿಸಿದ್ದಾರೆ.

ಶಾಸಕರ ಮುನಿಸಿಗೆ ಮದ್ದರೆಯಲು ಸುರ್ಜೇವಾಲ ಸಂಧಾನ ಸೂತ್ರ: 40 ಶಾಸಕರಿಗೆ ಬುಲಾವ್, 7 ಶಾಸಕರಿಂದ ಅಭಿಪ್ರಾಯ ಸಂಗ್ರಹ
ಸುರ್ಜೇವಾಲ, ರಾಜು ಕಾಗೆ ಹಾಗೂ ಬಿಆರ್ ಪಾಟೀಲ್
Updated By: Ganapathi Sharma

Updated on: Jul 01, 2025 | 7:22 AM

ಬೆಂಗಳೂರು, ಜುಲೈ 1: ‘ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (BR Patil) ಆಡಿದ್ದ ಅಬ್ಬರದ ಮಾತು ಕಾಂಗ್ರೆಸ್ (Congress) ಮನೆಯನ್ನನ್ನು ನಡುಗಿಸಿತ್ತು. ಸರ್ಕಾರವನ್ನು ಅಲುಗಾಡಿಸಿತ್ತು. ವಸತಿ ಯೋಜನೆಯಲ್ಲಿ ಮನೆ ನೀಡಲು ಲಂಚ ಪಡೆಯಲಾಗುತ್ತಿದೆ ಎಂಬ ಬಿಆರ್ ಪಾಟೀಲ್ ಆರೋಪದಿಂದ ಶುರುವಾದ ಅಸಮಾಧಾನದ ಜ್ವಾಲೆ ಕೈಪಡೆಯನ್ನು ಬಡಿದೆಬ್ಬಿಸಿತ್ತು. ಬಿಆರ್ ಪಾಟೀಲ್ ಬೆನ್ನಲ್ಲೇ ಶಾಸಕರಾದ ರಾಜುಕಾಗೆ, ಬೇಳೂರು ಗೋಪಾಲಕೃಷ್ಣ, ವೈ.ಎನ್ ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದರು. ಶಾಸಕರ ಈ ಸಿಟ್ಟು ಯಾರನ್ನು ಎಚ್ಚರಿಸಿದೆಯೋ ಬಿಟ್ಟಿದೆಯೋ, ಆದರೆ, ಕಾಂಗ್ರೆಸ್ ಹೈಕಮಾಂಡನ್ನು ಅಲರ್ಟ್ ಮಾಡಿದೆ. ಶಾಸಕರ ಅಸಮಾಧಾನದ ಬೆನ್ನಲ್ಲೇ ಸಿಡಿದ ಕ್ರಾಂತಿ ಮಾತು, ಬದಲಾವಣೆ ಕಿಚ್ಚು ರಾಜ್ಯ ಉಸ್ತುವಾರಿ ಸುರ್ಜೇವಾಲ ಬೆಂಗಳೂರಿಗೆ ಬರುವಂತೆ ಮಾಡಿತ್ತು.

ಕಾಂಗ್ರೆಸ್ ಶಾಸಕರ ದೂರು ಆಲಿಸಲು ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲ, ಮೊದಲು ಬಿಆರ್ ಪಾಟೀಲ್​ರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಬಿಆರ್ ಪಾಟೀಲ್ ವಸತಿ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹಣ ಕೊಟ್ಟವರಿಗಷ್ಟೇ ಮನೆ ಹಂಚ್ತಾರೆ ಎಂದು ಬಹಿರಂಗವಾಗಿ ದೂರಿದ್ದರು. ಸುರ್ಜೇವಾಲ ಭೇಟಿ ವೇಳೆಯೂ ಇದೇ ವಿಚಾರದ ಬಗ್ಗೆ ಚರ್ಚಿಸಿದ್ದಾರೆ. 35 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ, ತಮ್ಮ ಆರೋಪಕ್ಕೆ ದಾಖಲೆ ಕೂಡ ನೀಡಿದ್ದಾರೆ ಪಾಟೀಲ್.

ನಿಗದಿಯಂತೆ ಸೋಮವಾರ ರಾಜುಕಾಗೆ ಜೊತೆ ಚರ್ಚೆ ನಡೆಯಬೇಕಿತ್ತು. ಆದರೆ ಹಿರಿಯ ನಾಯಕ ರಾಜುಕಾಗೆ ಬೆಳಗಾವಿ ಬಿಟ್ಟು ಬಂದಿಲ್ಲ. ಈ ಬಗ್ಗೆ ‘ಟಿವಿ9’ಗೆ ಸ್ಪಷ್ಟನೆ ಕೊಟ್ಟಿರುವ ಶಾಸಕ, ಇಂದು ಬೆಳಗ್ಗೆ 11 ಗಂಟೆಗೆ ಭೇಟಿ ಆಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ: ಭದ್ರತೆ ಹೆಚ್ಚಳ
ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್: ಮಹಿಳೆ ಶವ ಕಸದ ಲಾರಿಲಿ ಪತ್ತೆ
ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ
ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಐಶ್ವರ್ಯಾ ಮಹಾದೇವ್ ನೂತನ ಮುಖ್ಯಸ್ಥೆ

ಇಂದು 30ಕ್ಕೂ ಹೆಚ್ಚು ಶಾಸಕರ ಜೊತೆ ಸುರ್ಜೇವಾಲ ಸಭೆ

2ನೇ ದಿನವಾದ ಇಂದೂ ಕೂಡ ಸುರ್ಜೇವಾಲ 30ಕ್ಕೂ ಹೆಚ್ಚು ಶಾಸಕರಿಗೆ ಬುಲಾವ್ ಕೊಟ್ಟಿದ್ದು, ಇಡೀ ದಿನ ಪ್ರತ್ಯೇಕವಾಗಿ ಎಲ್ಲರ ಜೊತೆಗೂ ಮಾತುಕತೆ ನಡೆಸಲಿದ್ದಾರೆ.

ಇಂದು ಯಾವೆಲ್ಲ ಶಾಸಕರಿಗೆ ಬುಲಾವ್?

ಮಾಲೂರು ಶಾಸಕ ಕೆ ವೈ ನಂಜೇಗೌಡ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್, ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ, ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಆನೇಕಲ್ ಶಾಸಕ ಬಿ ಶಿವಣ್ಣ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ನೆಲಮಂಗಲ ಶಾಸಕ ಎನ್ ಶ್ರೀನಿವಾಸ್, ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್, ದಕ್ಷಿಣ ಕನ್ನಡದ ಪುತ್ತೂರಿನ ಶಾಸಕ ಅಶೋಕ್ ರೈ, ಕೊಳ್ಳೆಗಾಲ ಶಾಸಕ ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ನರಸಿಂಹರಾಜ ಶಾಸಕ ತನ್ವೀರ್ ಸೇಠ್, ಚಾಮರಾಜ ಶಾಸಕ ಕೆ. ಹರೀಶ್ ಗೌಡ, ಕೃಷ್ಣರಾಜನಗರ ಶಾಸಕ ಡಿ ರವಿಶಂಕರ್, ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾಧು, ನಂಜನಗೂಡು ಶಾಸಕ ದರ್ಶನ ಧೃವನಾರಾಯಣ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಶೃಂಗೇರಿ ಶಾಸಕ ಟಿಡಿ ರಾಜೇಗೌಡ, ಮೂಡಿಗೇರೆ ಶಾಸಕ ನಯನ ಮೋಟಮ್ಮ, ಚಿಕ್ಕಮಗಳೂರು ಶಾಸಕ ಹೆಚ್.ಡಿ ತಮ್ಮಯ್ಯ, ತರಿಕೇರೆ ಶಾಸಕ ಜಿ.ಹೆಚ್ ಶ್ರೀನಿವಾಸ್, ಕಡೂರು ಶಾಸಕ ಕೆಎಸ್ ಆನಂದ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮದ್ದೂರು ಶಾಸಕ ಕೆ.ಎಂ. ಉದಯ್, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಡಿಕೇರಿ ಶಾಸಕ ಮಂತರ್ ಗೌಡ, ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಬುಲಾವ್ ನೀಡಲಾಗಿದೆ.

ಕೋಲಾರ ಹಾಲು ಒಕ್ಕೂಟದ ಕೋಲಾಹಲ ಪ್ರಸ್ತಾಪ

ಕೋಲಾರ ಕೈ ಶಾಸಕರ ಕಿತ್ತಾಟ ವಿಚಾರವೂ ಸುರ್ಜೇವಾಲಗೆ ರವಾನೆಯಾಗಿದೆ. ಕೋಲಾರ ಕಾಂಗ್ರೆಸ್ ಶಾಸಕರ ಮಧ್ಯೆ ಕೋಲಾರ ಹಾಲು ಒಕ್ಕೂಟದ ಚುನಾವಣೆ ವಿಚಾರವಾಗಿ ಅಸಮಾಧಾನ ಸ್ಪೋಟಗೊಂಡಿದೆ. ಸಚಿವ ಭೈರತಿ ಸುರೇಶ್ ವಿರುದ್ಧ ರೂಪಾ ಶಶಿಧರ್, ಬಂಗಾರ ಪೇಟೆ ನಾರಾಯಣ ಸ್ವಾಮಿ ಅಸಮಾಧಾನಗೊಂಡಿದ್ದಾರೆ. ಇವರಿಬ್ಬರ ವಿರುದ್ಧ ಮಾಲೂರು ನಂಜೇಗೌಡ, ಕೊತ್ತೂರು ಮಂಜುನಾಥ್ ಮುನಿಸಿಕೊಂಡಿದ್ದಾರೆ. ಈ ವಿಚಾರವಾಗಿ ಸುರ್ಜೇವಾಲರನ್ನು ಭೇಟಿ ಮಾಡಿದ್ದ ಶಾಸಕಿ ರೂಪ ಶಶಿಧರ್ ಎಲ್ಲದರ ಬಗ್ಗೆ ಚರ್ಚಿಸಿದ್ದಾರೆ.

ಏತನ್ಮಧ್ಯೆ, ರಾಜ್ಯದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅವರ ಅಭಿಪ್ರಾಯದ ವರದಿ ಆಧಾರದ ಮೇಲೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಬೆಂಗಳೂರಿಗೆ ಸುರ್ಜೇವಾಲ

ಈ ಮಧ್ಯೆ, ಸುರ್ಜೇವಾಲ ಭೇಟಿಗೆ ಬಿಜೆಪಿ ಎಂಎಲ್​ಸಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಸುರ್ಜೇವಾಲ ಕಷ್ಟ ಕೇಳೋಕೆ ಬಂದಿಲ್ಲ, ಕಪ್ಪ ಕೇಳೋಕೆ ಬಂದಿದ್ದಾರೆಂದು ಲೇವಡಿ ಮಾಡಿದ್ದಾರೆ. ಒಟ್ಟಿನಲ್ಲಿ, ‘ಕೈ’ ಗಾಯಕ್ಕೆ ಹೈಕಮಾಂಡ್ ಮದ್ದು ಅರೆಯುತ್ತಿದೆ. ಸುರ್ಜೆವಾಲ ಒಬ್ಬೊಬ್ಬರೇ ಶಾಸಕರನ್ನು ಕರೆಸಿಕೊಂಡು, ಅಹವಾಲು ಸ್ವೀಕರಿಸುತ್ತಿದ್ದಾರೆ. ಶಾಸಕರ ಅಂತರಾಳದ ಪ್ರಶ್ನೆಗಳಿಗೆ ಈ ಸಭೆ ಉತ್ತರ ಕೊಡುತ್ತದೆಯಾ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ