ಒನ್ ನೇಷನ್ ಒನ್ ಕಮಿಷನ್ ನೀಡುವಂತೆ ಕಲಬುರಗಿ ಪಡಿತರ ವಿತರಕರಿಂದ ಸರ್ಕಾರಕ್ಕೆ ಆಗ್ರಹ

ಒನ್ ನೇಷನ್ ಒನ್ ಕಮಿಷನ್ ನೀಡುವಂತೆ ಕಲಬುರಗಿ ಪಡಿತರ ವಿತರಕರಿಂದ ಸರ್ಕಾರಕ್ಕೆ ಆಗ್ರಹ
ಕಲಬುರಗಿ ನ್ಯಾಯ ಬೆಲೆ ಅಂಗಡಿ

ಕನಿಷ್ಟ ಪ್ರತಿ ಕ್ವಿಂಟಲ್​ಗೆ 150 ರೂಪಾಯಿ ಕಮಿಷನ್ ನಿಗದಿ ಮಾಡಬೇಕು. ಇದರಿಂದ ಪಡಿತರ ವಿತರಣೆ ವ್ಯವಸ್ಥೆ ಅಕ್ರಮಗಳನ್ನು ಕಡಿಮೆ ಮಾಡಬಹುದು ಎನ್ನುವುದು ಪಡಿತರ ವಿತರಕರ ಆಗ್ರಹವಾಗಿದೆ.

preethi shettigar

|

Feb 14, 2021 | 3:33 PM

ಕಲಬುರಗಿ: ರಾಜ್ಯದಲ್ಲಿ ಪಡಿತರ ಧಾನ್ಯಗಳನ್ನು ಸರಿಯಾಗಿ ಹಂಚಿಲ್ಲ. ಕಾಳಸಂತೆಯಲ್ಲಿ ಪಡಿತರ ಧಾನ್ಯಗಳ ಮಾರಾಟ, ಪಡಿತರ ವಿತರಕರ ವಿರುದ್ಧ ಪಡಿತರ ಫಲಾನುಭವಿಗಳ ಆಕ್ರೋಶ. ಹೀಗೆ ಅನೇಕ ರೀತಿಯ ಸುದ್ದಿಗಳನ್ನು ಮೇಲಿಂದ ಮೇಲೆ ನೋಡುತ್ತಲೇ ಇದ್ದೇವೆ. ಇದರಲ್ಲಿ ಕೆಲವಷ್ಟು ವಾಸ್ತವಾಂಶ ಕೂಡ ಇದೆ. ಆದರೆ ಇದೀಗ ಪಡಿತರ ವಿತರಕರು ನಮಗೆ ಅನ್ಯಾಯವಾಗುತ್ತಿದೆ. ಅದನ್ನು ಸರಿ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದು, ನ್ಯಾಯಯುತವಾಗಿ ಬದಕಲು ಸರ್ಕಾರ ನಮಗೆ ದಾರಿ ತೋರಿಸಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ದೇಶಾದ್ಯಂತ ಪಡಿತರದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಒನ್ ನೇಷನ್ ಒನ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ. ಆದರೆ ಪಡಿತರ ವಿತರಕರಿಗೆ ಮಾತ್ರ ಒನ್ ನೇಷನ್ ಒನ್ ಕಮಿಷನ್ ಜಾರಿಗೆ ತಂದಿಲ್ಲ. ಹೀಗಾಗಿ ದೇಶಾದ್ಯಂತ ಪಡಿತರ ವಿತರಕರಿಗೆ ಕೂಡ ಒಂದೇ ರೀತಿಯ ಕಮಿಷನ್ ಜಾರಿಗೆ ತರಬೇಕು. ಜೊತಗೆ ಪಡಿತರ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಹೆಚ್ಚಿನ ಆಹಾರ ಧಾನ್ಯಗಳನ್ನು ಮತ್ತು ರಾಜ್ಯದ ಪಡಿತರ ವಿತರಕರಿಗೆ ನಾಲ್ಕೈದು ತಿಂಗಳ ಕಮಿಷನ್ ಹಣವನ್ನೇ ನೀಡಿಲ್ಲಾ. ಹೀಗಾಗಿ ಕೂಡಲೇ ಬಾಕಿ ಇರುವ ಕಮಿಷನ್ ಹಣವನ್ನು ನೀಡಬೇಕು ಎನ್ನುವುದು ಪಡಿತರ ವಿತರಕರ ಆಗ್ರಹವಾಗಿದೆ.

ರಾಜ್ಯದಲ್ಲಿ ಸದ್ಯ 20,000 ಪಡಿತರ ವಿತರಕರು ಇದ್ದಾರೆ. ಇವರೆಲ್ಲರು ಹೆಚ್ಚು ಕಡಿಮೆ ಪಡಿತರ ವಿತರಣೆ ಕೆಲಸವನ್ನು ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ನೀಡುತ್ತಿರುವ ಕಮಿಷನ್ ಮಾತ್ರ ತುಂಬಾ ಕಡಿಮೆಯಾಗಿದೆ. ಗೋವಾದಲ್ಲಿ ಪ್ರತಿ ಕ್ವಿಂಟಲ್ ಪಡಿತರ ಧಾನ್ಯಗಳಿಗೆ 250 ರೂಪಾಯಿ ಕಮಿಷನ್ ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಲ್ ಪಡಿತರ ಧಾನ್ಯಗಳಿಗೆ 150 ರೂಪಾಯಿ ಕಮಿಷನ್ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಪ್ರತಿ ಕ್ವಿಂಟಲ್ ಪಡಿತರ ಧಾನ್ಯಗಳಿಗೆ ಕೇವಲ 100 ರೂಪಾಯಿ ಮಾತ್ರ ಕಮಿಷನ್ ನೀಡಲಾಗುತ್ತಿದೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರ ಒನ್ ನೇಷನ್ ಒನ್ ಕಾರ್ಡ್ ಜಾರಿಗೊಳಿಸಿದಂತೆ, ದೇಶಾದ್ಯಂತ ಏಕರೂಪದ ಕಮಿಷನ್ ವ್ಯವಸ್ಥೆ ಪಡಿತರ ವಿತರಕರಿಗೆ ಸಿಗುವಂತಹ ವ್ಯವಸ್ಥೆ ಮಾಡಬೇಕು. ಕನಿಷ್ಠ ಪ್ರತಿ ಕ್ವಿಂಟಲ್​ಗೆ 150 ರೂಪಾಯಿ ಕಮಿಷನ್ ನಿಗದಿ ಮಾಡಬೇಕು. ಇದರಿಂದ ಪಡಿತರ ವಿತರಣೆ ವ್ಯವಸ್ಥೆ ಅಕ್ರಮಗಳನ್ನು ಕಡಿಮೆ ಮಾಡಬಹುದು ಎನ್ನುವುದು ಪಡಿತರ ವಿತರಕರ ಆಗ್ರಹವಾಗಿದೆ.

one nation one commission

ಕಲಬುರಗಿ ನ್ಯಾಯ ಬೆಲೆ ಅಂಗಡಿಯ ಚಿತ್ರ

ಈ ಹಿಂದೆ ಪಡಿತರ ಅಂಗಡಿ ಮೂಲಕವೇ ಪಡಿತರದಾರರಿಗೆ ಸರ್ಕಾರ ಅಕ್ಕಿ, ಗೋದಿ, ಸಕ್ಕರೆ, ಎಣ್ಣೆ, ಟೀ ಪುಡಿ, ಗಂದದ ಕಡ್ಡಿ, ಸೋಪು, ಕೆಲ ಬಟ್ಟೆಗಳು ಸೇರಿದಂತೆ ಅನೇಕ ವಸ್ತುಗಳನ್ನು ಮಾರಾಟ ಮಾಡುತ್ತಿತ್ತು. ನಂತರ ಅದಕ್ಕೆ ಬ್ರೇಕ್ ಹಾಕಿದ್ದ ಸರ್ಕಾರ ಇದೀಗ ಅಕ್ಕಿ, ಗೋಧಿ, ಸಕ್ಕರೆ ಮಾತ್ರ ವಿತರಣೆ ಮಾಡುತ್ತಿದೆ. ಇದೀಗ ಓರ್ವ ಪಡಿತರದಾರನಿಗೆ ಮಾಸಿಕ ಕೇವಲ 5 ಕಿಲೋ ಅಕ್ಕಿ, ಒಂದು ಕಿಲೋ ಗೋಧಿಯನ್ನು ಮಾತ್ರ ವಿತರಿಸಲಾಗುತ್ತಿದೆ.

ಇದರಿಂದ ಆಹಾರ ಧಾನ್ಯಗಳು ಕಡಿಮೆ ಬರುವುದರಿಂದ, ಪಡಿತರ ವಿತರಕರಿಗೆ ಕೂಡ ಕಮಿಷನ್ ಕಡಿಮೆ ಬರುತ್ತಿದೆ. ಹೀಗಾಗಿ ಹೆಚ್ಚಿನ ಆಹಾರ ಧಾನ್ಯಗಳನ್ನು ಸರ್ಕಾರ, ಪಡಿತರದಾರರಿಗೆ, ಪಡಿತರ ಅಂಗಡಿ ಮೂಲಕ ನೀಡುವ ವ್ಯವಸ್ಥೆ ಮಾಡಬೇಕು. ಪಡಿತರ ವಿತರಕರು ಸರ್ಕಾರಕ್ಕೆ ಹಣ ನೀಡಿ ವಸ್ತುಗಳನ್ನು ಖರೀದಿಸಿ, ಪಡಿತರದಾರರಿಗೆ ನೀಡುತ್ತಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಇದರಿಂದ ಪಡಿತರದಾರರಿಗೆ ಮತ್ತು ಪಡಿತರ ವಿತರಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಸ್ಪಂದಿಸಬೇಕು ಎಂದು ಪಡಿತರ ವಿತರಕರು ಹೇಳಿದ್ದಾರೆ.

ರಾಜ್ಯದಲ್ಲಿ ಅನೇಕ ಪಡಿತರ ವಿತರಕರು ಸಂಕಷ್ಟದಲ್ಲಿದ್ದಾರೆ. ಕಡಿಮೆ ಕಮಿಷನ್​ನಿಂದ ಜೀವನ ನಡೆಸಲು ಪರದಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಪಡಿತರ ವಿತರಕರಾಗಿ, ಅದರ ಮೇಲೆ ಜೀವನ ನಡೆಸುತ್ತಿರುವ ಪಡಿತರ ವಿತರಕರಿಗೆ ಸರ್ಕಾರ ನೆರವಾಗಬೇಕಿದೆ. ರಾಜ್ಯದಲ್ಲಿ ನೀಡುತ್ತಿರುವ ಕಮಿಷನ್​ಅನ್ನು ಹೆಚ್ಚಿಗೆ ಮಾಡಬೇಕು. ಸರ್ಕಾರ ಹೆಚ್ಚಿನ ಆಹಾರ ಧಾನ್ಯಗಳನ್ನು ನೀಡಬೇಕು. ಆಗ ಮಾತ್ರ ಪಡಿತರ ವಿತರಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇನ್ನು ಕಾಳಸಂತೆಯಲ್ಲಿ ಪಡಿತರ ಆಹಾರ ಧಾನ್ಯಗಳನ್ನು ಮಾರಾಟ ಮಾಡುವ ವಿತರಕರ ಬೆನ್ನಿಗೆ ನಮ್ಮ ಸಂಘ ನಿಲ್ಲವುದಿಲ್ಲ ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: Sedam District: ವಿಜಯನಗರ ಆಯ್ತು, ಈಗ ಸೇಡಂ ಸರದಿ! ನೂತನ ಜಿಲ್ಲೆ ರಚನೆಗೆ ಆಗ್ರಹ; ಪಕ್ಷಾತೀತ ವೇದಿಕೆ ಸಿದ್ಧ

Follow us on

Most Read Stories

Click on your DTH Provider to Add TV9 Kannada