ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಮನಸ್ತಾಪ ತೀವ್ರವಾಗಿದೆ. ಸುಮಲತಾ ಅನುಕಂಪದಿಂದ ಗೆದ್ದಿದ್ದಾರೆ, ಅನುಕಂಪ ಹೆಚ್ಚು ದಿನ ಉಳಿಯಲ್ಲ. ನನ್ನ ಹೇಳಿಕೆಯಿಂದಲೂ ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಜನರನ್ನು ಹೆಚ್ಚು ದಿನ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಚುನಾವಣೆ ಬಂದಾಗ ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ ಎಂದಿದ್ದ ಹೆಚ್.ಡಿ.ಕುಮಾರಸ್ವಾಮಗೆ ತಿರುಗೇಟು ನೀಡಿರುವ ಸುಮಲತಾ, ನಾನು ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಆಡಿಯೋ ಬಾಂಬ್ ಅಂತಾರೆ. ಅವರ ಬಳಿ ಯಾವುದೇ ಆಡಿಯೋ ಇದ್ದರೂ ಬಿಡುಗಡೆ ಮಾಡಲಿ. ಇವರ ಬೆದರಿಕೆಗಳಿಗೆ ನಾನು ಹೆದರೋದಿಲ್ಲ ಎಂದು ಹೇಳಿದ್ದಾರೆ.
ಮೈ ಶುಗರ್ ಕಂಪನಿ ಶುರುಮಾಡುವ ಬಗ್ಗೆ ಏನೂ ಹೇಳೋದಿಲ್ಲ. ಅದು ಶುರುವಾದಲ್ಲಿ ಮಂಡ್ಯದ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಓಪನ್ ಮಾಡೋಕೆ ಬಿಡುತ್ತಿಲ್ಲ. ಕುಮಾರಸ್ವಾಮಿಯವರ ಎಂತಹ ಸವಾಲನ್ನೂ ಎದುರಿಸೋಕೆ ನಾನು ಸಿದ್ಧ ಎಂದು ಸಂಸದೆ ಸುಮಲತಾ ಅಂಬರೀಶ್ ಟಾಂಗ್ ಕೊಟ್ಟಿದ್ದಾರೆ. ಗಣಿಗಾರಿಕೆಯಿಂದ ಬರಬೇಕಾದ ಸಾವಿರಾರು ಕೋಟಿ ರಾಜಧನ ಸರ್ಕಾರಕ್ಕೆ ಬರುತ್ತಿಲ್ಲ. ಇದೆಲ್ಲ ಎಲ್ಲಿ ಹೋಗುತ್ತಿದೆ ಎಂದು ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವರು ಆಡಿಯೋ ಬಾಂಬ್ ಅಂತಾರೆ. ಜನ ಅವರಿಗೆ ಬುದ್ದಿ ಕಲಿಸಿದ್ರೂ ಇನ್ನೂ ಬುದ್ದಿ ಬಂದಿಲ್ಲ. ಅಧಿಕಾರಿಗಳನ್ನ ಹೆದರಿಸುತ್ತಾರೆ. ಆಡಿಯೋ ಬಾಂಬ್ ಅಂತಾರಲ್ಲಾ ಅದನ್ನ ಈಗಲೇ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿದ್ದಾರೆ.
ಮಂಡ್ಯ ಕ್ಷೇತ್ರದ ಸ್ವಾಭಿಮಾನದ ಮತವನ್ನು ಸುಮಲತಾ ಏನು ಮಾಡುತ್ತಿದ್ದಾರೆ. ಅವರು ಯಾವಾಗ ಯಾರ ಜತೆ ಏನೇನು ನಡೆಸಿದ್ದಾರೆ ಗೊತ್ತಿದೆ. ನನ್ನ ಸ್ನೇಹಿತನ ಅಗಲಿಕೆ ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ. ಜನರನ್ನು ಹೆಚ್ಚು ದಿನ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಚುನಾವಣೆ ಬಂದಾಗ ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ. ಸುಮಲತಾರಿಂದ ನಾನು ಸಂಸ್ಕೃತಿ ಬಗ್ಗೆ ಕಲಿಯಬೇಕಾಗಿಲ್ಲ. ಅವರ ಸಂಸ್ಕೃತಿ ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಅವರ ಪತಿ ನಿಧನರಾದಾಗ ಹೇಗೆ ನಡೆದುಕೊಂಡರೆಂದು ಗೊತ್ತಿದೆ ಎಂದು ಹಾಗೂ ಇನ್ನೂ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಆರೋಪಿಸಿದ ಹೆಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸುಮಲತಾ, ಜನ ಅವರಿಗೆ ಬುದ್ದಿ ಕಲಿಸಿದ್ರೂ ಇನ್ನೂ ಬುದ್ಧಿ ಬಂದಿಲ್ಲ ಎಂದು ಟೀಕಿಸಿದ್ದಾರೆ.
ಒಂದೆಡೆ ಕನ್ನಂಬಾಡಿ ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವಿಷಯವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಧ್ಯೆ ಪರಸ್ಪರ ನಿಂದನೆ ತಾರಕಕ್ಕೆ ತಲುಪಿರುವಾಗ ಕೆ.ಆರ್.ಎಸ್. ಡ್ಯಾಮ್ನಲ್ಲಿ ಯಾವುದೇ ಲೀಕೇಜ್ ಇಲ್ಲ, ಆತಂಕ ಬೇಡ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ. ಮುಂಜಾಗ್ರತೆಯಾಗಿ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನೋಟಿಸ್ ಕೊಟ್ಟು ಮುಚ್ಚಿಸಲಾಗಿದೆ. ಕಳೆದ 3-4 ದಿನಗಳಿಂದ ಅಲ್ಲಿ ಯಾವುದೇ ಗಣಿಗಾರಿಕೆ ನಡೆದಿಲ್ಲ ಎಂದು ಸಚಿವ ನಿರಾಣಿ ಹೇಳಿರುವುದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ಬಿ ಎಸ್ ಯಡಿಯೂರಪ್ಪ ಭೇಟಿಯಾದ ಸಂಸದೆ ಸುಮಲತಾ; ಮೈಶುಗರ್ ಕಾರ್ಖಾನೆ, ಅಕ್ರಮ ಗಣಿಗಾರಿಕೆ ವಿಚಾರ ಚರ್ಚೆ