ಚಿದಾನಂದ ಸವದಿ ಕಾರು ಚಾಲನೆ ಮಾಡುತ್ತಿರಲಿಲ್ಲ: ಬಾಗಲಕೋಟೆ ಎಸ್​ಪಿ ಪ್ರತಿಕ್ರಿಯೆ

ಅಪಘಾತದ ಸಂದರ್ಭದಲ್ಲಿ ಚಿದಾನಂದ ಸವದಿ ವಾಹನ ಚಲಾಯಿಸುತ್ತಿರಲಿಲ್ಲ ಎಂದು ಬೆಳಗಾವಿ ಎಸ್​ಪಿ ಲೋಕೇಶ್ ಜಗಲಾಸರ್ ಪ್ರತಿಕ್ರಿಯಿಸಿದ್ದಾರೆ. ಮಂತ್ರಿ ಮಗ ಅಂದಾಗ ಇಂತಹ ಊಹಾಪೋಹಗಳು ಸಹಜ ಎಂದು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಚಿದಾನಂದ ಸವದಿ ಅಥಣಿಯಲ್ಲಿ ಮಾತನಾಡಿ ನಾನೇನು ದೇಶ ಬಿಟ್ಟು ಓಡಿ ಹೋಗಿಲ್ಲ ಎಂದಿದ್ದಾರೆ. ಈ ನಡುವೆ ಮೃತ ಕೂಡೆಲಪ್ಪ ಅವರ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆದಿದೆ.

ಚಿದಾನಂದ ಸವದಿ ಕಾರು ಚಾಲನೆ ಮಾಡುತ್ತಿರಲಿಲ್ಲ: ಬಾಗಲಕೋಟೆ ಎಸ್​ಪಿ ಪ್ರತಿಕ್ರಿಯೆ
ಚಿದಾನಂದ ಸವದಿ (ಫೈಲ್ ಚಿತ್ರ)
TV9kannada Web Team

| Edited By: shivaprasad.hs

Jul 06, 2021 | 10:55 AM

ಬೆಳಗಾವಿ: ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಪ್ರತಿಕ್ರಿಯೆ ನೀಡಿದ್ದಾರೆ. ಅಪಘಾತವಾಗುವ ವೇಳೆ ಚಿದಾನಂದ ಸವದಿ ಕಾರು ಚಾಲನೆ ಮಾಡುತ್ತಿರಲಿಲ್ಲ. ಅವರ ಚಾಲಕ ಹನಮಂತಸಿಂಗ್ ರಜಪೂತ್ ಚಾಲನೆ ಮಾಡ್ತಾ ಇದ್ದರು. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಐಪಿಸಿ ಸೆಕ್ಷನ್  304ರ ಪ್ರಕಾರ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ವ್ಯಾಪ್ತಿಯ ದೇವಲಾಪುರ ಕ್ರಾಸ್ ಬಳಿ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡ್ರಿಂಕ್ ಆಂಡ್ ಡ್ರೈವ್ ಅನ್ನೋದು ಸತ್ಯಕ್ಕೆ ದೂರವಾದದ್ದು. ಎಲ್ಲಾ ಪರೀಕ್ಷೆಯನ್ನು ನಡೆಸಲಾಗಿದೆ. ಜೊತೆಗೆ ವಾಹನ ಚಾಲನೆ ಮಾಡ್ತಾ ಇದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನಾ ಸ್ಥಳದಲ್ಲಿ ಇದ್ದ ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಸಂಬಂಧಿಗಳ ವೀಡಿಯೊ ಸ್ಟೇಟಮೆಂಟ್ ತೆಗೆದುಕೊಳ್ಳಲಾಗಿದೆ ಎಂದು ಲೋಕೇಶ್ ಜಗಲಾಸರ್ ಹೇಳಿದ್ದಾರೆ.

ಒಂದು ವೇಳೆ ಇಂಥವರೆ (ಚಿದಾನಂದ) ವಾಹನ ಚಾಲನೆ ಮಾಡ್ತಿದ್ದರು ಎಂಬ ಸಾಕ್ಷಾಧಾರಗಳಿದ್ದರೆ ಅದನ್ನು ಪೊಲೀಸರಿಗೆ ಸಲ್ಲಿಸಬಹುದು. ಅದನ್ನೂ ಪರಿಗಣಿಸಿ ತನಿಖೆಯನ್ನು ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಉಳಿದಂತೆ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಮಂತ್ರಿ ಮಗ ಅಂದಾಗ ಇಂತಹ ಊಹಾಪೋಹಗಳು ಸಹಜ: ಡಿಸಿಎಂ ಲಕ್ಷಣ ಸವದಿ

ತಮ್ಮ ಮಗನ ಕಾರು ಅಪಘಾತದ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನನ್ನ ಮಗ ಆತನ ಸ್ನೇಹಿತರೊಂದಿಗೆ ಹಲವು ದಿನಗಳಿಂದ ಕಿಟ್ ಹಂಚಿಕೆ ಮಾಡುತ್ತಿದ್ದ. ಹೀಗಾಗಿ ಕೊಪ್ಪಳದ ಆಂಜನೇಯ ದೇಗುಲಕ್ಕೆ ತೆರಳಿದ್ದರು. ವಾಪಸಾಗುವಾಗ ಚಿದಾನಂದ ಮುಂದಿನ ಗಾಡಿಯಲ್ಲಿದ್ದ. ಆತ ಇದ್ದ ಕಾರು ಅಪಘಾತವಾಗಿಲ್ಲ ಎಂದು ಸವದಿ ಹೇಳಿದ್ದಾರೆ.

ಮೃತನ ಕುಟುಂಬಸ್ಥರ ಜೊತೆ ನಾವಿದ್ದೇವೆ. ನಾಳೆ ನಾನೇ ಖುದ್ದಾಗಿ ಅವರ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ. ಅಪಘಾತದ ಬಳಿಕ ಚಿದಾನಂದನೇ ಆಸ್ಪತ್ರೆಗೆ ಸೇರಿಸಿದ್ದು. ಆದರೆ ಮಂತ್ರಿ ಮಗ ಅಂದಾಗ ಇಂತಹ ಊಹಾಪೋಹಗಳು ಸಹಜ. ಸುಳ್ಳು ಯಾಕೆ ಹೇಳಬೇಕು, ನನ್ನ ಮಗ ಡ್ರೈವಿಂಗ್ ಮಾಡಲ್ಲ. ಚಾಲಕ ಹನುಮಂತ ಕಾರು ಚಲಾಯಿಸುತ್ತಾನೆ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ಎಸ್ಕೇಪ್ ಆಗಿದ್ದೇನೆ ಅನ್ನುತ್ತಾರಲ್ಲಾ, ನಾನೇನು ದೇಶ ಬಿಟ್ಟು ಹೋಗಿದ್ದೀನಾ?:  ಚಿದಾನಂದ ಸವದಿ

ಅಪಘಾತ ಆದ ಸುದ್ದಿ ತಿಳಿದ ಕೂಡಲೇ ಮುಂದಿನ ಕಾರಿನಲ್ಲಿದ್ದ ನಾನು ಮೊದಲು ಸ್ಪಾಟ್ಗೆ ಹೋದೆ. ನಂತರ ಆಸ್ಪತ್ರೆಗೆ ಹೋದೆ. ಕುಟುಂಬಸ್ಥರ ಸಂಪರ್ಕ ಮಾಡಲು ಅವರ ಪೋನ್ ನಂಬರ್ ಸಿಗಲಿಲ್ಲ‌‌. ನಮ್ಮ ಸ್ನೇಹಿತರೇ ಆಸ್ಪತ್ರೆಗೆ ಸೇರಿಸಿ ಆಸ್ಪತ್ರೆ ಬಿಲ್ ಕೂಡ ಅವರೇ ಕಟ್ಟಿದ್ದಾರೆ. ನಾನು ಸ್ಪಾಟ್ ನಲ್ಲಿ ಇರಲಿಲ್ಲ ಬೇರೆ ಕಾರಿನಲ್ಲಿ ಹೋಗಿದ್ದೆ. ಹೆತ್ತ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಡಿಸಿಎಂ ಮಗ ಎಂದು ಧಮಕಿ ಹಾಕಿಲ್ಲ ಎಂದು ಅಥಣಿಯಲ್ಲಿ ಟಿವಿ9ಗೆ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹೇಳಿಕೆ ನೀಡಿದ್ದಾರೆ.

ಕಾರಿನ ಮುಂದಿನ ನಂಬರ್ ಪ್ಲೇಟ್ ಅಪಘಾತದಿಂದ ಕಿತ್ತು ಹೋಗಿದೆ. ಆದರೆ ಹಿಂದಿನ ನಂಬರ್ ಪ್ಲೇಟ್ ಹೇಗೆ ಹೋಗಿದೆ ಗೊತ್ತಿಲ್ಲ. ನಾನು ಎಸ್ಕೇಪ್ ಆಗೊದಾಗಿದ್ರೇ ಕಾರು ಅಲ್ಲಿ ಯಾಕೆ ಬಿಟ್ಟು ಬರ್ತಿದ್ದೆ? ಇದ್ರಲ್ಲಿ ಸಾಕ್ಷಿ ಮುಚ್ಚಿ ಹಾಕುವ ಪ್ರಯತ್ನ ಮಾಡಿಲ್ಲ, ಯಾರಿಗೂ ಧಮಕಿ ಹಾಕಿಲ್ಲ. ಎಸ್ಕೇಪ್ ಆಗಿದ್ದಾರೆ ಅಂತಿದ್ದಾರಲ್ಲಾ, ನಾನೇನು ದೇಶ ಬಿಟ್ಟು ಹೋಗಿದ್ದೀನಾ? ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಥಳದಲ್ಲಿದ್ದವರು ನಾನು ಕಾರಿನಲ್ಲಿದ್ದೆ ಅಂತಾ ಗುರುತಿಸಿದರೆ ಅವರು ಹೇಳಿದಂತೆ ಕೇಳುತ್ತೇನೆ. ಇವತ್ತು ಅಥವಾ ನಾಳೆ ಕೂಡೆಲಪ್ಪ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ. ಅವರಿಗೆ ಏನು ಸಹಾಯ ಬೇಕು ಅದನ್ನ ಖಂಡಿತವಾಗಿ ಮಾಡುತ್ತೇನೆ. ನಾನು ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿಲ್ಲ ಬೇಕಾದರೆ ನನ್ನ ಪೋನ್ ಕಾಲ್ ರೆಕಾರ್ಡ್ ತೆಗೆಸಿ. ನಮ್ಮದು ರೈತ ಕುಟುಂಬ, ಅವರದ್ದು ರೈತ  ಕುಟುಂಬ. ಎನೋ ಅಚಾತುರ್ಯ ಆಗಿದೆ ಹೀಗಾಗಬಾರದಿತ್ತು. ಅವರು ಹೆಲ್ಮೆಟ್ ಹಾಕಿರಲಿಲ್ಲ, ಅಚಾನಕ್ಕಾಗಿ ರಸ್ತೆಗೆ ಬಂದ್ರೂ ಅಂತಾ ಸ್ನೇಹಿತರು ಹೇಳಿದ್ದಾರೆ. ಈ ಆರೋಪದಿಂದ ಮುಕ್ತ ಆಗುತ್ತೇನೆ ಎಂಬ ವಿಶ್ವಾಸ ಇದೆ‌ ಎಂದು ಚಿದಾನಂದ ಸವದಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಕೂಡೆಲಪ್ಪ ಅವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ:

ಅಪಘಾತದಲ್ಲಿ ಮೃತಪಟ್ಟ ಕೂಡಲೆಪ್ಪ ಅವರ ಶವವನ್ನು ಚಿಕ್ಕಹಂಡರಗಲ್ ಗ್ರಾಮಕ್ಕೆ ಕೊಂಡೊಯ್ಯಲಾಗಿದ್ದು ಅವರ ಹೊಲದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶವ ಹೊಲಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೂಡೆಲಪ್ಪ ಅವರು ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ: ಅಪಘಾತವಾದ ತಕ್ಷಣ ತಂದೆ ಲಕ್ಷ್ಮಣ ಸವದಿಯನ್ನ ಸಂಪರ್ಕಿಸಿದ ಪುತ್ರ; ತಕ್ಷಣ ಬಾಗಲಕೋಟೆ ಎಸ್‌ಪಿಗೆ ಕರೆ ಮಾಡಿದ ಸಚಿವ ಸವದಿ

ಇದನ್ನೂ ಓದಿ: DCM Laxman Savadi Son: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು

(Chidananda Savadi was not driving in the time of accident says Bagalakote SP Lokesh Bagalasar)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada