AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಮರ್ಥತೆ, ಅದಕ್ಷತೆ, ಅನಾರೋಗ್ಯ ಕಾರಣ ಮೋದಿ ಸಂಪುಟದಿಂದ ಅನೇಕರಿಗೆ ಗೇಟ್ ಪಾಸ್‌; ಸದಾನಂದ ಗೌಡ ಔಟ್​ ಏಕೆ?

ಕೇಂದ್ರದ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ನೀರೀಕ್ಷೆಯಂತೆ ಕೇಂದ್ರದ ಆರೋಗ್ಯ ಖಾತೆ ಸಚಿವ ಡಾಕ್ಟರ್ ಹರ್ಷವರ್ಧನ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಆರೋಗ್ಯ ಖಾತೆ ರಾಜ್ಯ ಸಚಿವರಾಗಿದ್ದ ಅಶ್ವಿನ್ ಚೌಬೆ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಕೊರೊನಾದ 2ನೇ ಅಲೆ ಎದುರಿಸಲು ಅಗತ್ಯ ಪೂರ್ವ ಸಿದ್ದತೆಯನ್ನು ಕೇಂದ್ರ ಆರೋಗ್ಯ ಇಲಾಖೆ ನಡೆಸಿರಲಿಲ್ಲ. ದೇಶಕ್ಕೆ ಮೆಡಿಕಲ್ ಆಕ್ಸಿಜನ್ ಕೊರತೆಯಾಗುತ್ತೆ ಎಂಬ ಪೂರ್ವ ಮುನ್ಸೂಚನೆಯನ್ನು ನೀಡಿರಲಿಲ್ಲ.

ಅಸಮರ್ಥತೆ, ಅದಕ್ಷತೆ, ಅನಾರೋಗ್ಯ ಕಾರಣ ಮೋದಿ ಸಂಪುಟದಿಂದ ಅನೇಕರಿಗೆ ಗೇಟ್ ಪಾಸ್‌; ಸದಾನಂದ ಗೌಡ ಔಟ್​ ಏಕೆ?
ನರೇಂದ್ರ ಮೋದಿ
S Chandramohan
| Updated By: ಸಾಧು ಶ್ರೀನಾಥ್​|

Updated on:Jul 07, 2021 | 4:50 PM

Share

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟವನ್ನು ಸಂಪೂರ್ಣ ಪುನರ್ ರಚನೆ ಮಾಡುತ್ತಿದ್ದಾರೆ. ಅಸಮರ್ಥ, ಅದಕ್ಷ ಸಚಿವರಿಗೆ ಕ್ಯಾಬಿನೆಟ್ ನಿಂದ ಗೇಟ್ ಪಾಸ್ ನೀಡಿದ್ದಾರೆ. ಶಿಕ್ಷಣ, ಆರೋಗ್ಯ ಖಾತೆಗಳು ಸಂಪೂರ್ಣ ಪುನರ್ ರಚನೆಯಾಗುತ್ತಿದೆ.

ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟ ಪುನರ್ ರಚನೆಯಲ್ಲಿ ಅನೇಕರಿಗೆ ಗೇಟ್ ಪಾಸ್ ನೀಡಿದ್ದಾರೆ. ಕೆಲ ಇಲಾಖೆಗಳ ಕ್ಯಾಬಿನೆಟ್, ರಾಜ್ಯ ಖಾತೆ ಸಚಿವರಿಬ್ಬರ ರಾಜೀನಾಮೆಯನ್ನು ಪಡೆದಿದ್ದಾರೆ. ಪ್ರಧಾನಿ ಮೋದಿ ಸಚಿವ ಸಂಪುಟ ಪುನರ್ ರಚನೆಯ ಹಿಂದೆ ಅನೇಕ ಲೆಕ್ಕಾಚಾರಗಳಿವೆ. ಅನೇಕ ಕಾರಣಗಳಿವೆ. ಕೇಂದ್ರ ಸರ್ಕಾರದ ಆಡಳಿತವನ್ನು ಚುರುಕುಗೊಳಿಸುವ ಪ್ಲ್ಯಾನ್ ಇದೆ. ಶಿಕ್ಷಣ, ಆರೋಗ್ಯ ಖಾತೆಯ ಕ್ಯಾಬಿನೆಟ್, ರಾಜ್ಯ ಖಾತೆಯ ಮಂತ್ರಿಗಳಿಬ್ಬರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಶಿಕ್ಷಣ, ಆರೋಗ್ಯ ಖಾತೆಗೆ ಈಗ ಸಂಪೂರ್ಣವಾಗಿ ಕ್ಯಾಬಿನೆಟ್, ರಾಜ್ಯ ಖಾತೆ ಮಂತ್ರಿಗಳಾಗಿ ಹೊಸಬರ ನೇಮಕ ಮಾಡಲಾಗುತ್ತೆ.

ಕೇಂದ್ರದ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ನೀರೀಕ್ಷೆಯಂತೆ ಕೇಂದ್ರದ ಆರೋಗ್ಯ ಖಾತೆ ಸಚಿವ ಡಾಕ್ಟರ್ ಹರ್ಷವರ್ಧನ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಆರೋಗ್ಯ ಖಾತೆ ರಾಜ್ಯ ಸಚಿವರಾಗಿದ್ದ ಅಶ್ವಿನ್ ಚೌಬೆ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಕೊರೊನಾದ 2ನೇ ಅಲೆ ಎದುರಿಸಲು ಅಗತ್ಯ ಪೂರ್ವ ಸಿದ್ದತೆಯನ್ನು ಕೇಂದ್ರ ಆರೋಗ್ಯ ಇಲಾಖೆ ನಡೆಸಿರಲಿಲ್ಲ. ದೇಶಕ್ಕೆ ಮೆಡಿಕಲ್ ಆಕ್ಸಿಜನ್ ಕೊರತೆಯಾಗುತ್ತೆ ಎಂಬ ಪೂರ್ವ ಮುನ್ಸೂಚನೆಯನ್ನು ನೀಡಿರಲಿಲ್ಲ. ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಇದು ಪ್ರಧಾನಿ ಮೋದಿ ಕೋಪಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಆರೋಗ್ಯ ಇಲಾಖೆಯ ಸಭೆಯಲ್ಲೇ ಪ್ರಧಾನಿ ಮೋದಿ ಸಚಿವರು, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ಹರ್ಷವರ್ಧನ್ ಗೆ ಆರೋಗ್ಯ ಇಲಾಖೆಯಿಂದ ಗೇಟ್ ಪಾಸ್ ನೀಡಬೇಕೆಂಬ ಒತ್ತಾಯ ಇತ್ತು. ಡಾಕ್ಟರ್ ಹರ್ಷವರ್ಧನ್ ಡೆಂಟಲ್ ಡಾಕ್ಟರ್. ಆದರೇ, ವೈದ್ಯ ಹಿನ್ನಲೆಯಿಂದ ಬಂದರೂ, ದೇಶದ ಆರೋಗ್ಯ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂಬ ವ್ಯಾಪಕ ಟೀಕೆ ಇತ್ತು. ಹೀಗಾಗಿ ಈ ಬಾರಿಯ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ಹರ್ಷವರ್ಧನ್ ಗೆ ಗೇಟ್ ಪಾಸ್ ನೀಡಬಹುದೆಂಬ ನಿರೀಕ್ಷೆ ನಿಜವಾಗಿದೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9) ಶಿಕ್ಷಣ ಖಾತೆ ಕ್ಯಾಬಿನೆಟ್ ಮಂತ್ರಿಯಾಗಿದ್ದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅನಾರೋಗ್ಯದ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಮುಂದೂಡುವ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಕೊರೊನಾ ಪಾಸಿಟಿವ್ ಆಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಈಗ ಹೊಸ ಶಿಕ್ಷಣ ನೀತಿಯನ್ನು ತ್ವರಿತಗತಿಯನ್ನು ಜಾರಿಗೊಳಿಸುವ ಕೆಲಸವನ್ನು ಕೇಂದ್ರ ಶಿಕ್ಷಣ ಖಾತೆ ಸಚಿವರು ಮಾಡಬೇಕಾಗಿದೆ. ಹೀಗಾಗಿ ಈ ಖಾತೆಗೆ ಉತ್ಸಾಹಿ ಸಂಸದರನ್ನು ಸಚಿವರನ್ನಾಗಿ ನೇಮಿಸುವ ಉದ್ದೇಶದಿಂದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಇನ್ನೂ ಶಿಕ್ಷಣ ಖಾತೆ ರಾಜ್ಯ ಸಚಿವರಾಗಿದ್ದ ಸಂಜಯ ದೋತ್ರೆ ಕೂಡ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆಯ ಕ್ಯಾಬಿನೆಟ್, ರಾಜ್ಯ ಖಾತೆ ಮಂತ್ರಿಗಳಾಗಿ ಹೊಸಬರ ನೇಮಕವಾಗಲಿದೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಕಾರ್ಮಿಕ ಖಾತೆ ಸಚಿವರಾಗಿ ಸಂತೋಷ್ ಗಂಗ್ವಾರ್ ಕಾರ್ಯನಿರ್ವಹಿಸುತ್ತಿದ್ದರು. ಆದರೇ, ಸಂತೋಷ್ ಗಂಗ್ವಾರ್ ಗೆ ಈಗಾಗಲೇ 72 ವರ್ಷ ವಯಸ್ಸು. ವಯಸ್ಸು ಮತ್ತು ಕಾರ್ಮಿಕ ಇಲಾಖೆಯಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಸಂತೋಷ್ ಗಂಗ್ವಾರ್ ರಿಂದ ರಾಜೀನಾಮೆ ಪಡೆಯಲಾಗಿದೆ.

ಇನ್ನೂ ಪಶ್ಚಿಮ ಬಂಗಾಳದ ಬಾಬುಲ್ ಸುಪ್ರಿಯೋ ಕೇಂದ್ರದಲ್ಲಿ ಪರಿಸರ, ಅರಣ್ಯ, ಹವಾಮಾನ ಬದಲಾವಣೆಯ ರಾಜ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು. ಬಾಬುಲ್ ಸುಪ್ರಿಯೋ ಕೂಡ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಹಾಗೂ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರಮಣಕಾರಿ ಹೋರಾಟ ನಡೆಸುವ ಮನೋಭಾವ ಬಾಬುಲ್ ಸುಪ್ರಿಯೋಗೆ ಇದೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಬಾಬುಲ್ ಸುಪ್ರೀಯೋ ಬಳಸಿಕೊಳ್ಳುವ ಆಲೋಚನೆ ಬಿಜೆಪಿಗೆ ಇದೆ.

ಒರಿಸ್ಸಾದ ಪ್ರತಾಪ್ ಚಂದ್ರ ಸಾರಂಗಿ ಕೂಡ ಪಶುಸಂಗೋಪನೆ, ಡೈರಿ, ಮೀನುಗಾರಿಕೆ ಹಾಗೂ ಎಂಎಸ್ಎಂಇ ರಾಜ್ಯ ಖಾತೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಾಪ್ ಚಂದ್ರ ಸಾರಂಗಿ ಸರಳತೆಗೆ ಹೆಸರಾದವರು.ಆದರೇ, ಮೋದಿ ನಿರೀಕ್ಷಿಸಿದ್ದಂತೆ, ಇಲಾಖೆ ನಿರ್ವಹಿಸದ ಕಾರಣಕ್ಕೆ ಈಗ ಪ್ರತಾಪ್ ಚಂದ್ರ ಸಾರಂಗಿ ತಲೆದಂಡವಾಗಿದೆ.

ಕರ್ನಾಟಕದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ.ಸದಾನಂದಗೌಡ, ಕೇಂದ್ರದ ರಸಾಯನಿಕ, ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದಾನಂದಗೌಡರ ರಾಜೀನಾಮೆ ಪಡೆಯುತ್ತಾರೆ ಎಂಬ ಮಾತು ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿತ್ತು. ಅದು ಈಗ ನಿಜವಾಗಿದೆ. ಕೇಂದ್ರದ ಫಾರ್ಮಾಸೂಟಿಕಲ್ಸ್ ಇಲಾಖೆ ಕೂಡ ಸದಾನಂದಗೌಡರ ಬಳಿಯೇ ಇತ್ತು.

ದೇಶದಲ್ಲಿ ಕೊರೊನಾ ರೋಗಿಗಳಿಗೆ ನೀಡುವ ರೆಮಿಡಿಸಿವಿರ್ ಇಂಜೆಕ್ಷನ್, ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಕೊರತೆ ತೀವ್ರವಾಗಿ ತಲೆದೋರಿತ್ತು. ಈ ಡ್ರಗ್ಸ್ ಗಳ ಉತ್ಪಾದನೆ ಹೆಚ್ಚಳಕ್ಕೆ ಸದಾನಂದಗೌಡ ಕ್ರಮ ಕೈಗೊಂಡಿದ್ದರು. ಆದರೇ, ಪ್ರಾರಂಭದ ಕೆಲ ದಿನಗಳ ಮಟ್ಟಿಗೆ ರೆಮಿಡಿಸಿವಿರ್ ಇಂಜೆಕ್ಷನ್ ಹಾಗೂ ಅಂಪೋಟೆರಿಸಿನ್ ಬಿ ಡ್ರಗ್ಸ್ ಗೆ ತೀವ್ರ ಕೊರತೆಯಿಂದ ರೋಗಿಗಳು ಪರದಾಡಿದ್ದರು. ಇವುಗಳ ಉತ್ಪಾದನೆಯನ್ನ ಹೆಚ್ಚಿಸಲು ಏನೇ ಕ್ರಮ ಕೈಗೊಂಡರೂ, ಬೇಗ ಉತ್ಪಾದನೆ ಹೆಚ್ಚಳ ಸಾಧ್ಯವಿಲ್ಲ.

ಇಲಾಖೆಯಲ್ಲಿ ಸದಾನಂದಗೌಡರ ಜ್ಯೂನಿಯರ್ ಮಂತ್ರಿ ಗುಜರಾತ್‌ನ ಮನುಸುಖ್ ಮಾಂಡವೀಯಾ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರು. ಕೇಂದ್ರದ ಫಾರ್ಮಾಸೂಟಿಕಲ್ಸ್ , ರಸಾಯನಿಕ, ರಸಗೊಬ್ಬರ ಖಾತೆ ಪ್ರಮುಖ ಖಾತೆಯಾದ್ದರಿಂದ ಇನ್ನೂ ಹೆಚ್ಚಿನ ಸಮರ್ಥರನ್ನು ಈ ಇಲಾಖೆಗೆ ನೇಮಿಸುವ ಉದ್ದೇಶದಿಂದ ಈಗ ಸದಾನಂದಗೌಡರಿಂದ ರಾಜೀನಾಮೆ ಪಡೆಯಲಾಗಿದೆ. ರಾಜ್ಯ ಖಾತೆ ಮಂತ್ರಿಯಾಗಿದ್ದ ಮನಸುಖ್ ಮಾಂಡವಿಯಾಗೆ ಈಗ ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಸದಾನಂದಗೌಡ ರಾಜೀನಾಮೆಯಿಂದ ಕೇಂದ್ರದ ಕ್ಯಾಬಿನೆಟ್ ನಲ್ಲಿ ತೆರವಾದ ಒಕ್ಕಲಿಗ ಕೋಟಾಕ್ಕೆ ಶೋಭಾ ಕರಂದ್ಲಾಜೆ ಎಂಟ್ರಿ ಕೊಡುತ್ತಿದ್ದಾರೆ.

ಇನ್ನೂ ಕರ್ನಾಟಕದಿಂದ ಲಿಂಗಾಯತ ಕೋಟಾದಲ್ಲಿ ಬಿ.ವೈ.ರಾಘವೇಂದ್ರ, ಶಿವಕುಮಾರ್ ಉದಾಸಿ, ಪಿ.ಸಿ.ಗದ್ದಿಗೌಡರ್ ಮಂತ್ರಿಯಾಗುವ ನಿರೀಕ್ಷೆ ಹುಸಿಯಾಗಿದೆ. ಬೀದರ್‌ನ ಸಂಸದ ಭಗವಂತ್ ಖೂಬಾಗೆ ಪ್ರಧಾನಿ ಕಾರ್ಯಾಲಯದಿಂದ ದೆಹಲಿಗೆ ಬರುವಂತೆ ಸೂಚನೆ ಬಂದಿದೆ. ಹೀಗಾಗಿ ಭಗವಂತ್ ಖೂಬಾ ಹೈದರಾಬಾದ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ವಿದ್ಯಾವಂತರು, ಅನುಭವಿಗಳಿಗೆ ಮಣೆ: ಪ್ರಧಾನಿ ಮೋದಿ ಕ್ಯಾಬಿನೆಟ್ ನಲ್ಲಿ ಈ ಭಾರಿ ಯುವಜನತೆ, ವಿದ್ಯಾವಂತರು, ಅನುಭವಿಗಳು, ವಿವಿಧ ಕ್ಷೇತ್ರಗಳ ಪರಿಣಿತರಿಗೆ ಮಣೆ ಹಾಕಲಾಗಿದೆ. ಕ್ಯಾಬಿನೆಟ್ ನಲ್ಲಿ ಈಗ ನಾಲ್ವರು ಮಾಜಿ ಸಿಎಂಗಳಿರಲಿದ್ದಾರೆ. 18 ಮಂದಿ ಈ ಹಿಂದೆ ರಾಜ್ಯಗಳಲ್ಲಿ ಮಂತ್ರಿಗಳಾಗಿ ಕೆಲಸ ಮಾಡಿದ ಅನುಭವ ಇರುವವರು. 39 ಮಂದಿ ಈ ಹಿಂದೆ ಶಾಸಕರಾಗಿ ಕೆಲಸ ಮಾಡಿದ ಅನುಭವ ಇರುವವರು. 13 ಮಂದಿ ವಕೀಲ ವೃತ್ತಿ ಹಿನ್ನಲೆಯವರು.

6 ಮಂದಿ ವೈದ್ಯರು. 5 ಮಂದಿ ಇಂಜಿನಿಯರ್ ಗಳು, 7 ಮಂದಿ ನಾಗರಿಕ ಸೇವೆಯ ಹಿನ್ನೆಲೆಯಿಂದ ಬಂದವರಾಗಿದ್ದಾರೆ. 7 ಸಚಿವರು ವಿವಿಧ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದಿದ್ದಾರೆ. 3 ಮಂದಿ ಎಂಬಿಎ ಪದವಿಧರರು. 68 ಮಂದಿ ಪದವಿಧರರಾಗಿದ್ದಾರೆ. 25 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಂದ ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಜಾತೀವಾರು ಪ್ರಾತಿನಿಧ್ಯ: ಮೋದಿ ಸಂಪುಟ ವಿಸ್ತರಿಸುವಾಗ, ಜಾತಿ ಸಮೀಕರಣಕ್ಕೂ ಒತ್ತು ನೀಡಿದ್ದಾರೆ. ಕ್ಯಾಬಿನೆಟ್ ನಲ್ಲಿ 12 ಮಂದಿ ಎಸ್‌.ಸಿ. ಸಮುದಾಯಕ್ಕೆ ಸೇರಿದವರು ಇದ್ದು, ಇದರಲ್ಲಿ ಇಬ್ಬರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗುತ್ತಿದೆ. 8 ಮಂದಿ ಎಸ್‌.ಟಿ. ಸಮುದಾಯಕ್ಕೆ ಸೇರಿದ್ದು, ಇವರಲ್ಲಿ ಮೂವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗುತ್ತಿದೆ. ಇನ್ನೂ 27 ಮಂದಿ ಓಬಿಸಿ ಸಮುದಾಯದವರಾಗಿದ್ದು, 5 ಕ್ಯಾಬಿನೆಟ್ ದರ್ಜೆ ನೀಡಲಾಗುತ್ತಿದೆ.

ಐದು ಮಂದಿ ಅಲ್ಪಸಂಖ್ಯಾತ ಸಮುದಾಯವದವರಾಗಿದ್ದು, ಮೂವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗುತ್ತಿದೆ. 11 ಮಹಿಳೆಯರಿದ್ದು, ಇಬ್ಬರಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತಿದೆ. 50 ವರ್ಷ ಕೆಳಗಿನ 14 ಮಂದಿ ಮೋದಿ ಸಚಿವಸಂಪುಟದಲ್ಲಿರಲಿದ್ದಾರೆ. ಇವರ ಪೈಕಿ 6 ಮಂದಿ ಕ್ಯಾಬಿನೆಟ್ ದರ್ಜೆ ಸಚಿವರು. ಇನ್ನೂ ಮೋದಿ ಕ್ಯಾಬಿನೆಟ್ ನ ಸರಾಸರಿ ವಯಸ್ಸು 58 ವರ್ಷ.

(Reasons for pm narendra modi dropping many ministers from his cabinet )

Published On - 4:47 pm, Wed, 7 July 21