
ಕಲಬುರಗಿ, (ಅಕ್ಟೋಬರ್ 16): ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ಎಸ್ (RSS) ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಮನವಿ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಇದೇ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಕರೆ ಮಾಡಿದ ವ್ಯಕ್ತಿಯನ್ನು ಮಹಾರಾಷ್ಟ್ರದ (Maharashtra) ಸೋಲಾಪುರ (Solapur) ಮೂಲದ ದಾನಪ್ಪ ಅಲಿಯಾಸ್ ದಾನೇಶ್ ಎಂದು ಗುರುತಿಸಲಾಗಿದ್ದು, ಬೆಂಗಳೂರು ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಾನಪ್ಪ ನನ್ನು ಲಾತೂರ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಕ್ಕೆ ದಾನಪ್ಪ ಅಲಿಯಾಸ್ ದಾನೇಶ್ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರ ಬದಲಿಗೆ ಕಾಂಗ್ರೆಸ್ ಮುಖಂಡ ಮನೋಹರ್ ಎನ್ನುವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸರು ಮತ್ತು ಕಲಬುರಗಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ದಿನೇಶ್ ನನ್ನು ಲಾತೂರ್ ನಲ್ಲಿ ಬಂಧಿಸಿದ್ದು, ಇಂದು ರಾತ್ರಿ ದಿನೇಶನನ್ನು ಸದಾಶಿವನಗರ ಠಾಣೆಗೆ ಕರೆತರುವ ಸಾಧ್ಯತೆಗಳಿವೆ.
ಸರ್ಕಾರಿ ಶಾಲೆ, ಕಾಲೇಜು ಆವರಣಗಳಲ್ಲಿ ಆರ್‌ಎಸ್ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೇ ವಿವಾದ ಭುಗಿಲೆದ್ದಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಬರುತ್ತಿವೆ. ಕರೆ ಮಾಡಿದವರು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ದಿನೇಶ್ ಧಮ್ಕಿ ಹಾಕಿರುವುದನ್ನು ಸ್ವತಃ ಪ್ರಿಯಾಂಕ್ ಖರ್ಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
RSS ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ..
ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ.
ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ… pic.twitter.com/KqnSsiLWl6
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 15, 2025
ಈ ಕುರಿತಾಗಿ ಅವರು ಟ್ವೀಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ ಎಂದು ವಿಡಿಯೋ ಹಂಚಿಕೊಂಡಿದ್ದರು.
ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ.ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ? ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಆರ್ ಅಶೋಕ್, ಸಿಟಿ ರವಿ, ಸುನೀಲ್ ಕುಮಾರ್ ಮುಂತಾದ ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದ್ದರು.