ಬೆಂಗಳೂರು: ನಗರದ ವಿವಿಧೆಡೆಯಿರುವ ಓಲಾ ಮತ್ತು ಊಬರ್ ಕಚೇರಿಗಳ ಮೇಲೆ ಆರ್ಟಿಒ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದ್ದಾರೆ. ಲೈಸೆನ್ಸ್ ಪಡೆಯುವ ವಿಚಾರದಲ್ಲಿ ಲೋಪಗಳಾಗಿರುವುದು ಮತ್ತು ಪ್ರಯಾಣಿಕರಿಗೆ ಸೇವೆ ಒದಗಿಸುವ ವಿಚಾರದಲ್ಲಿ ತಪ್ಪುಗಳಾಗಿರುವ ಬಗ್ಗೆ ದಾಳಿ ನಡೆಸಿದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂಸ್ಥೆಗಳಿಗೆ ಪೂರಕ ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡಲಾಗಿದೆ.
ಕೋರಮಂಗಲದಲ್ಲಿರುವ ಓಲಾ ಕಚೇರಿ ಮೇಲೆ RTO ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ, ನಿಗದಿತ ಸ್ಥಳಕ್ಕೆ ಸೂಕ್ತ ಸಮಯಕ್ಕೆ ಬರುವುದಿಲ್ಲ, ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ವಾಹನ ಚಾಲನೆ ಮಾಡುತ್ತಿದ್ದಾರೆ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ಹೇಳಿದರು.
ದಾಳಿ ವೇಳೆ ಸಂಸ್ಥೆಯ ಸಿಬ್ಬಂದಿಗೆ ತಕ್ಷಣಕ್ಕೆ ಸೂಕ್ತ ದಾಖಲೆ ಒದಗಿಸಲು ಸಾಧ್ಯವಾಗಿಲ್ಲ. ದಾಖಲೆಗಳನ್ನು ಒದಗಿಸಲು ಕಾಲಾವಕಾಶ ಕೇಳಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲ ಮಾಲೀಕರು ಚಾಲಕರಿಗೂ ಸರಿಯಾಗಿ ಹಣ ಕೊಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು ಎಂದು ತಿಳಿಸಿದರು.
ಇಂದ್ರ ನಗರದ ಊಬರ್ ಕಚೇರಿಯ ಮೇಲೆಯೂ ಆರ್ಟಿಒ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯ ಕುರಿತು ಮಾಹಿತಿ ನೀಡಿದ ಹಿರಿಯ ಮೋಟಾರು ವಾಹನ ತನಿಖಾಧಿಕಾರಿ ನಾಸೀರ್ ಅಹಮ್ಮದ್, ಪ್ರಯಾಣಿಕರ ದೂರಿನ ಮೇರೆಗೆ ದಾಳಿ ನಡೆಸಿದ್ದೇವೆ. 100 ವಾಹನಗಳ ಸಂಚಾರಕ್ಕೆ ಅನುಮತಿ ಪಡೆದು, 10 ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿದ್ದವು. ಲಾಕ್ಡೌನ್ಗೂ ಮೊದಲು 5 ಸಾವಿರ ವಾಹನಗಳು ಓಡುತ್ತಿದ್ದವು ಎಂಬ ದೂರುಗಳು ಬಂದಿದ್ದವು. ದಾಖಲೆ ಸಲ್ಲಿಸಲು ಓಲಾ ಸಂಸ್ಥೆಯ ಸಿಬ್ಬಂದಿ ಕಾಲಾವಕಾಶ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಸಾರಿಗೆ ಇಲಾಖೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಚಾಲಕರ ವಿವರ, ವಾಹನಗಳ ವಿವರ, ವಿಮೆ, ಅರ್ಹತಾ ಪ್ರಮಾಣ ಪ್ರಮಾಣಪತ್ರ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳನ್ನು ಆರ್ಟಿಒಗೆ ಸಲ್ಲಿಸಬೇಕು ಈ ನಿಯಮಗಳ ಪಾಲನೆಯಾಗಿಲ್ಲ ಎಂಬ ದೂರುಗಳಿವೆ ಎಂದು ಅವರು ಹೇಳಿದರು.
(RTO officers raid on Ola Uber offices in Bengaluru)
ಇದನ್ನೂ ಓದಿ: ಸಾರಿಗೆ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನಕ್ಕಾಗಿ 162 ಕೋಟಿ 50 ಲಕ್ಷ ರೂ. ಅನುದಾನ ಬಿಡುಗಡೆ
ಇದನ್ನೂ ಓದಿ: ರೈತರ ಜಮೀನು ಉಳುಮೆಗೆ ಉಚಿತ ಟ್ರಾಕ್ಟರ್; ಓಲಾ, ಉಬರ್ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬುಕಿಂಗ್
Published On - 10:43 pm, Fri, 16 July 21