ಕೊನೆ ಕ್ಷಣದಲ್ಲಿ ವೃಕ್ಷಮಾತೆ ಭಾವುಕ: ಸಾಯುವ ಮುನ್ನ ಸಾಲುಮರದ ತಿಮ್ಮಕ್ಕ ಜನತೆಗೆ ಕೊಟ್ಟ ಸಂದೇಶವೇನು?

ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಮರಗಳನ್ನು ನೆಡುವ ಮತ್ತು ಪೋಷಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿದ್ದ ಅವರು ಇನ್ನು ನೆನಪು ಮಾತ್ರ. ಆದರೆ ಅವರು ನಾಡಿನ ಜನತೆಗೆ ಭಾವನಾತ್ಮಕ ಸಂದೇಶವೊಂದನ್ನು ನೀಡಿದ್ದಾರೆ. ಸಾಲುಮರದ ತಿಮ್ಮಕ್ಕ ಅವರು ನೀಡಿದ ಕೊನೆಯ ಸಂದೇಶ ಏನು ಎಂಬ ಮಾಹಿತಿ ಇಲ್ಲಿದೆ.

ಕೊನೆ ಕ್ಷಣದಲ್ಲಿ ವೃಕ್ಷಮಾತೆ ಭಾವುಕ: ಸಾಯುವ ಮುನ್ನ ಸಾಲುಮರದ ತಿಮ್ಮಕ್ಕ ಜನತೆಗೆ ಕೊಟ್ಟ ಸಂದೇಶವೇನು?
ಸಾಲುಮರದ ತಿಮ್ಮಕ್ಕ

Updated on: Nov 14, 2025 | 3:21 PM

ಬೆಂಗಳೂರು, ನವೆಂಬರ್​ 14: ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (Saalumarada Thimmakka) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. 114 ವರ್ಷದ ಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಜಯನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ತಮ್ಮ ಅಂತಿಮ ಕ್ಷಣದಲ್ಲಿ ಭಾವುಕರಾಗಿದ್ದ ವೃಕ್ಷಮಾತೆ, ಕರ್ನಾಟಕ ರಾಜ್ಯದ ಜನತೆಗೆ ಭಾವನಾತ್ಮಕ ಸಂದೇಶವೊಂದನ್ನು ನೀಡಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರ ಕೊನೆಯ ಸಂದೇಶ ಏನು?

ಪ್ರೀತಿಯ ನನ್ನ ನಾಡಿನ ಜನತೆಗೆ ನಿಮ್ಮ ಪ್ರೀತಿಯ ಅಜ್ಜಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮಾಡುವ ನಮಸ್ಕಾರಗಳು. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇರುವಷ್ಟು ದಿನ ಯಾರಿಗೂ ತೊಂದರೆ ಕೊಡದೆ, ಹಿಂಸೆಯಾಗದಂತೆ, ಬಡವ, ಶ್ರೀಮಂತ, ಭಿಕ್ಷುಕ, ಅಸಹಾಯಕ ಎನ್ನದೆ ಎಲ್ಲರೂ ಒಂದೇ ತರಹ ಬದುಕಿ. ಎಲ್ಲರನ್ನು ಗೌರವಿಸಿ, ಪ್ರೀತಿಸಿ, ದೇಶವನ್ನು ಪ್ರೀತಿಸಿ, ದೇಶ ಚೆನ್ನಾಗಿದ್ದರೆ ಎಲ್ಲರೂ ಚಂದ.

ಇದನ್ನೂ ಓದಿ: Saalumarada Thimmakka Death: ಸಾಲುಮರದ ತಿಮ್ಮಕ್ಕ ನಿಧನ; ಮರೆಯಾದ ವೃಕ್ಷಮಾತೆ

ಚಿಕ್ಕವರಾಗಲಿ, ದೊಡ್ಡವರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ, ಗಿಡ ನೆಟ್ಟು ಮರಗಳನ್ನಾಗಿ ಬೆಳೆಸಿ, ಗೋ ಕಟ್ಟೆಗಳನ್ನು ಕಟ್ಟಿಸಿ, ಕೆರೆ ಕಟ್ಟಿಸುವುದರ ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿಸಿ. ಹಣ್ಣು ಬಿಡುವ ಮರಗಳನ್ನು ಬೆಳೆಸಿ ಹಕ್ಕಿಪಕ್ಷಿಗಳ ಆಧಾರವಾಗಲಿ. ದೇಶದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲಿ. ದೇಶ ಚೆನ್ನಾಗಿರಲಿ. ಬಡವನನ್ನು ಕಂಡು ಭಿನ್ನ ಭೇದ ಮಾಡಬೇಡಿ. ಮನುಷ್ಯರೆಲ್ಲ ಒಂದೇ, ಹಸಿದವರಿಗೆ ಅನ್ನ ಕೊಡಿ. ನಾನು ಮಾಡಿದ ಗಿಡ ನೆಡುವ ಉಳಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ ಮತ್ತು ನನ್ನ ಮಗನಾದ ಉಮೇಶ ದೇಶದಲ್ಲೆಲ್ಲಾ ಗಿಡ ನೆಡುವ ಮತ್ತು ನೆಡೆಸುವ ಕಾರ್ಯ ಮಾಡುತ್ತಾ ಸಾಗು.

ಇದನ್ನೂ ಓದಿ: Saalumarada Thimmakka Death: ತಿಮ್ಮಕ್ಕ ಸಾಲುಮರದ ತಿಮ್ಮಕ್ಕನಾಗಿದ್ದು ಹೇಗೆ ಗೊತ್ತಾ?

ಮತ್ತೊಮ್ಮೆ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ, ಎಲ್ಲರಿಗೂ ಸತಿವತಿ ಭಾಗ್ಯ ಇರಲಿ. ಮಕ್ಕಳ ಭಾಗ್ಯವಿರಲಿ, ನಿಮ್ಮ ಮನೆ ಚೆನ್ನಾಗಿರಲಿ, ದೇಶ ಚೆನ್ನಾಗಿರಲಿ, ಮಕ್ಕಳಿಗೆಲ್ಲ ಒಳ್ಳೆಯ ವಿದ್ಯೆ ಬರಲಿ, ಎಲ್ಲರೂ ಗಿಡ ಮರಗಳನ್ನು ಬೆಳೆಸಿ. ನನ್ನ ಪತಿ ದೇವರ ಆಶೀರ್ವಾದ ಮತ್ತು ನನ್ನ ಆಶೀರ್ವಾದ ನನ್ನ ಮಗನ ಮೇಲಿರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಾಲುಮರದ ತಿಮ್ಮಕ್ಕ ಅವರು ಭಾವನಾತ್ಮಕ ಸಂದೇಶ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಸಾಲುಮರದ ತಿಮ್ಮಕ್ಕ ಅವರ ನಿಧನದ ಕುರಿತು ಎಕ್ಸ್ ಅಕೌಂಟ್​ನಲ್ಲಿ ಪೊಸ್ಟ್​ ​ ಮಾಡಿರುವ ಸಿಎಂ ಸಿದ್ದರಾಮಯ್ಯ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್

ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಅಗಲಿದ ಮಹಾಚೇತನಕ್ಕೆ ನನ್ನ ನಮನಗಳು. ಸಾಲುಮರದ ತಿಮ್ಮಕ್ಕನವರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ ಟಿವಿ9 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:12 pm, Fri, 14 November 25