- Kannada News Photo gallery Saalumarada Thimmakka Death: How she became The Tree Mother of Karnataka, India, Know here
Saalumarada Thimmakka Death: ತಿಮ್ಮಕ್ಕ ಸಾಲುಮರದ ತಿಮ್ಮಕ್ಕನಾಗಿದ್ದು ಹೇಗೆ ಗೊತ್ತಾ?
ಸಾಲುಮರದ ತಿಮ್ಮಕ್ಕ ನಿಧನ: ಸಾಲು ಸಾಲು ನೂರಾರು ಮರಗಳನ್ನು ನೆಟ್ಟು, ಪೋಷಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಮ್ಮನ್ನಗಲಿದ್ದಾರೆ. ತುಮಕೂರಿನಲ್ಲಿ ಜನಿಸಿದ ಸಾಲುಮರದ ತಿಮ್ಮಕ್ಕ ಮರಗಳನ್ನೇ ಮಕ್ಕಳೆಂದು ಪೋಷಿಸಿದ್ದಾರೆ. ತಮ್ಮ ಜೀವನದುದ್ದಕ್ಕೂ ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ತಿಮ್ಮಕ್ಕ ವೃಕ್ಷಮಾತೆ ಆಗಿದ್ದು ಹೇಗೆ ಎಂಬುದು ಇಲ್ಲಿದೆ ನೋಡಿ.
Updated on: Nov 14, 2025 | 1:36 PM

ಸಾಲುಮರದ ತಿಮ್ಮಕ್ಕನವರು 1911 ರ ಜೂನ್ 30 ರಂದು ಆಗಿನ ಮೈಸೂರು ಸಂಸ್ಥಾನದ (ಈಗಿನ ತುಮಕೂರು) ಗುಬ್ಬಿ ತಾಲ್ಲೂಕಿನಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತರಾಗಿರುವ ಇವರು ತಮ್ಮ ಜೀವನದುದ್ದಕ್ಕೂ ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅಕ್ಷರ ಜ್ಞಾನವಿಲ್ಲದಿದ್ದರೂ, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಮಕ್ಕಳಿಲ್ಲದ ಕೊರಗನ್ನು ಮರೆತು, ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ, ತಾಯಿಯ ವಾತ್ಸಲ್ಯದಿಂದ ಬೆಳೆಸಿದ್ದಾರೆ.

ತಿಮ್ಮಕ್ಕ ಮತ್ತು ಅವರ ಪತಿ ಚಿಕ್ಕಯ್ಯನವರು ಸೇರಿ ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವಿನ 4.5 ಕಿ.ಮೀ. ಹೆದ್ದಾರಿಯ ಇಕ್ಕೆಲಗಳಲ್ಲಿ 385ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಬಡತನದ ನಡುವೆಯೂ, ದಿನಗೂಲಿ ಕೆಲಸದಿಂದ ಬಂದ ಅಲ್ಪ ಹಣದಲ್ಲಿ, ಮರಗಳಿಗೆ ನಾಲ್ಕು ಕಿಲೋಮೀಟರ್ ದೂರದಿಂದ ನೀರು ಹೊತ್ತು ತಂದು, ಮುಳ್ಳಿನ ಬೇಲಿ ಹಾಕಿ ಜಾನುವಾರುಗಳಿಂದ ರಕ್ಷಿಸಿ ಪೋಷಿಸಿದ್ದಾರೆ.

ಸಾಲುಮರದ ತಿಮ್ಮಕ್ಕನವರ ಈ ಮಹಾನ್ ಕಾರ್ಯಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. 2019 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ, 1996ರ ರಾಷ್ಟ್ರೀಯ ನಾಗರಿಕ ಪ್ರಶಸ್ತಿ, 2006ರ ಗಾಡ್ಫ್ರೇ ಫಿಲಿಪ್ಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಲಭಿಸಿವೆ.

ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರವು ಸಾಲುಮರದ ತಿಮ್ಮಕ್ಕ ಅವರನ್ನು 'ಪರಿಸರ ರಾಯಭಾರಿ'ಯಾಗಿ ನೇಮಿಸಿದೆ ಮತ್ತು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನೂ ನೀಡಿದೆ. ಇದು ಅವರ ಪರಿಸರ ಕಾಳಜಿ ಮತ್ತು ಸಮಾಜದ ಮೇಲಿನ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ಉದ್ಯಾನವನಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ(114)ಬೆಂಗಳೂರಿನ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತಿಮ್ಮಕ್ಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.




