ಸದಾಶಿವನಗರ ಗೆಸ್ಟ್​ಹೌಸ್ ಗೊಂದಲ: ಜಮೀರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 10, 2021 | 5:55 PM

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಎಂಬುದನ್ನು ಮರೆತು ನಮ್ಮ ನಾಯಕರ ಬಗ್ಗೆ ಅವರು ಹಗುರವಾಗಿ ಮಾತಾಡಿದ್ದಾರೆ. ಇವತ್ತು ನಾವು ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುದನ್ನು ಯೋಚಿಸಿದಾಗ ಮನಸ್ಸಿಗೆ ನೋವಾಗುತ್ತದೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಸದಾಶಿವನಗರ ಗೆಸ್ಟ್​ಹೌಸ್ ಗೊಂದಲ: ಜಮೀರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
ನಿಖಿಲ್‌ ಕುಮಾರಸ್ವಾಮಿ (ಸಂಗ್ರಹ ಚಿತ್ರ)
Follow us on

ತುಮಕೂರು: ಬೆಂಗಳೂರಿನ ಸದಾಶಿವನಗರ ಗೆಸ್ಟ್​ಹೌಸ್​ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು ಹೆಬ್ಬೂರಿನಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಎಂಬುದನ್ನು ಮರೆತು ನಮ್ಮ ನಾಯಕರ ಬಗ್ಗೆ ಅವರು ಹಗುರವಾಗಿ ಮಾತಾಡಿದ್ದಾರೆ. ಇವತ್ತು ನಾವು ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುದನ್ನು ಯೋಚಿಸಿದಾಗ ಮನಸ್ಸಿಗೆ ನೋವಾಗುತ್ತದೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಯಾವುದೇ ವಿಷಯವನ್ನು ಕುಳಿತು ಮಾತನಾಡಬೇಕು. ಆದರೆ ಅವರು ದೂರದಲ್ಲಿ ನಿಂತು ಏಕವಚನದಲ್ಲಿ ಮಾತಾಡ್ತಾರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತೆ. ಈ ಹಿಂದೆ ಅವರು ಯಾವ ಪಕ್ಷದಲ್ಲಿದ್ದರು? ಎಲ್ಲಿಂದ ಬೆಳೆದು ಬಂದರು? ಅವರನ್ನು ಬೆಳೆಸಿದ ನಾಯಕರು ಯಾರು ಎಂಬುದನ್ನು ಇನ್ನಾದರೂ ಅರಿತುಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ನಮ್ಮ ನಾಯಕರು (ಎಚ್​ಡಿಕೆ) ಕಳೆದ ಏಳೆಂದು ವರ್ಷಗಳಿಂದ ಅಲ್ಲಿಗೆ ಕಾಲಿಟ್ಟಿಲ್ಲ. ಮೂರ್ನಾಲ್ಕು ದಿನಗಳ ಹಿಂದೆ ಭೋಜೇಗೌಡರು ಕರೆ ಮಾಡಿ, ಗೆಸ್ಟ್​ಹೌಸ್ ಬಿಟ್ಟು ಕೊಡಬೇಕು ಎಂದು ಹೇಳಿದ್ದರು. ಅಲ್ಲಿ ನನ್ನ ಶೂಟಿಂಗ್​ಗೆ ಸಂಬಂಧಿಸಿದ ವಸ್ತುಗಳು​​ ಇವೆ ತೆಗೆದುಕೊಳ್ಳುತ್ತೇನೆ ಎಂದು ಭೋಜೇಗೌಡರಿಗೆ ಹೇಳಿದ್ದೆ. ಅವರ ಜಾಗ ಅಂದಮೇಲೆ ಯಾವ ಕಾರಣಕ್ಕೂ ಅಲ್ಲಿರಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಅವರು ಮಾಧ್ಯಮಗಳಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ನಾನು ಹೇಳೋದಿಷ್ಟೆ, ನನ್ನ ಜೊತೆ ಕೆಲಸ ಮಾಡುತ್ತಿರುವ ಹುಡುಗರು ಈಗ ಯಾರೂ ಈಗ ನನ್ನ ಜೊತೆ ಇಲ್ಲ, ಎಲ್ಲರಿಗೂ ರಜೆ ಕೊಟ್ಟು ಕಳಿಸಿದ್ದೇನೆ. ಕೊವಿಡ್ ಆದ ನಂತರ ಹೊರಗೆ ಎಲ್ಲೂ ಓಡಾಡೋಕೆ ಆಗ್ಲಿಲ್ಲ. ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡೋ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ನುಡಿದರು.

ಜನಪ್ರತಿನಿಧಿಯಾದವರು ತೂಕವಾಗಿ ನಡೆದುಕೊಳ್ಳಬೇಕು. ನಾವು ಮಾತನಾಡೋ ಮಾತುಗಳು ನಮ್ಮ ಸಣ್ಣತನ ತೋರಿಸುತ್ತೆ. ಜನಪ್ರತಿನಿಧಿಗಳಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಬಹಳ ಯೋಚನೆ ಮಾಡಿ ಮಾತನಾಡಬೇಕು. ಅವರ ಪ್ರಕಾರ ಅವರು ಈಗ ರಾಜಕಾರಣದಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ಕೊಂಡಿದ್ದಾರೆ. ಅವರಿಗೆ ಒಳ್ಳೇದಾಗ್ಲಿ ಎಂದು ವ್ಯಂಗ್ಯವಾಡಿದರು.

ಏನಿದು ಪ್ರಕರಣ?
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ತಮ್ಮ ಆಪ್ತ ಸಹಾಯಕ ಫಾರೂಕ್ ಮೂಲಕ ಬೆಂಗಳೂರಿನ ಸದಾಶಿವ ನಗರ ಪೊಲೀಸ್​ ಠಾಣೆಗೆ ಈಚೆಗೆ ದೂರು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಗನ್​ಮ್ಯಾನ್​ಗಳು ಬೀಗ ಮುರಿದು ಒಳನುಗ್ಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು.

ಕುಮಾರಸ್ವಾಮಿಗೆ ಸೇರಿದ ಅಗತ್ಯ ವಸ್ತುಗಳು ಅಲ್ಲಿದ್ದವು. ಗೆಸ್ಟ್ ​​ಹೌಸ್ ಕೀಲಿ ಶಾಸಕ ಜಮೀರ್ ಅಹ್ಮದ್​ ಬಳಿಯಿತ್ತು. ಜಮೀರ್​ಗೆ ಭೋಜೇಗೌಡ ಕರೆ ಮಾಡಿ ಟೈಮ್​ ಕೇಳಿದ್ದರು. ಗಲಾಟೆ ತಾರಕ್ಕೇರಿತ್ತು. ಹಾಗಾಗಿ, ನಿಖಿಲ್ ಕುಮಾರಸ್ವಾಮಿ ಗನ್ ಮ್ಯಾನ್ ಬೀಗ ಮುರಿದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಸದಾಶಿವನಗರದ ಎಂದರೆ ಎಚ್.ಡಿ.ಕುಮಾರಸ್ವಾಮಿ ಅಥವಾ ಎಚ್.ಡಿ.ಕುಮಾರಸ್ವಾಮಿ ಎಂದರೆ ಸದಾಶಿವನಗರ ಎನ್ನುವ ಕಾಲವೊಂದಿತ್ತು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರಿಗೆ ಜಮೀರ್ ಬಹಳ ಆಪ್ತರಾಗಿದ್ದರು ಆಗ ಜಮೀನನ್ನು ಕುಮಾರಸ್ವಾಮಿಯವರಿಗೆ ಬಿಟ್ಟುಕೊಟ್ಟಿದ್ದರು. ಅದು ಎಷ್ಟರಮಟ್ಟಿಗೆ ಗುರುತಿಸಲ್ಪಟ್ಟಿತ್ತು ಎಂದರೆ ಗೆಸ್ಟ್ ಹೌಸ್ ಅನ್ನು ಕುಮಾರಸ್ವಾಮಿಯವರೇ ಕೊಂಡುಕೊಂಡಿದ್ದಾರೆ ಅವರ ಹೆಸರಿನಲ್ಲಿಯೇ ಇದೆ ಎಂದು ಜನ ನಂಬಿದ್ದರು ಆದರೆ ಕುಮಾರಸ್ವಾಮಿ ಮತ್ತು ಜಮೀರ್ ಅವರ ನಡುವೆ ಬಿರುಕು ಬಿಟ್ಟು ಕಾಂಗ್ರೆಸ್ಸಿಗೆ ಹೋಗಿದ್ದರೂ ಸಹ ವಿಚಾರ ಇಷ್ಟು ಕೆಳಕ್ಕೆ ಇದ್ದಿರಲಿಲ್ಲ ಬಿದ್ದಿರಲಿಲ್ಲ. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಸಂಧಾನ ನಡೆದು ಜಮೀರ್ ದೂರು ಹಿಂಪಡೆದಿದ್ದರು.

(Sadashivanagar Guest House Row JDS Leader Nikhil Kumaraswamy Replies to Zameer Ahmad Allegations)

ಇದನ್ನೂ ಓದಿ: ನಿಖಿಲ್ ಶೂಟಿಂಗ್ ಸಾಮಾನ್ ಇದೆ ಅಂದ್ರೆ ನನಗೆ ಕೇಳ್ಬೇಕಿತ್ತು, ಮನೆ ಬಾಗಿಲು ಮುರಿಯೋದಾ ಕುಮಾರಸ್ವಾಮಿ: ಜಮೀರ್ ಅಹಮದ್​ ಪ್ರಶ್ನೆ

ಇದನ್ನೂ ಓದಿ: Zameer Ahmed: ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು; ಗೆಸ್ಟ್​ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಆರೋಪ