Rabbit Prediction: ಸಂಕ್ರಾಂತಿಗೆ ಮೊಲ ನುಡಿಯಿತು ಭವಿಷ್ಯ, ಇದು ತುಮಕೂರು ಸೀಗೆಬಾಗಿ ಗ್ರಾಮದ ಪವಾಡ!
ವರ್ಷದ ಮೊದಲ ಹಬ್ಬವಾಗಿ ಆಚರಿಸುವ ಈ ಹಬ್ಬಕ್ಕೆ ಮೂರು ದಿನದ ಮೊದಲೇ ಗ್ರಾಮದ ಕೆಲವರು ಕಾಡಿಗೆ ಹೋಗಿ ಮೊಲವನ್ನು ಜೀವಂತವಾಗಿ ಹಿಡಿದು ತರುತ್ತಾರೆ. ಹೀಗೆ ತಂದ ಮೊಲದ ಕಿವಿಗೆ ವಾಲೆ ಹಾಕುತ್ತಾರೆ.
ತುಮಕೂರು: ಇತ್ತೀಚಿಗೆ ಗೊರವಯ್ಯನ ಭವಿಷ್ಯ ಆಯ್ತು, ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾಯ್ತು. ಇವೆಲ್ಲಾ ಕಾಲಕಾಲಕ್ಕೆ ರಾಜ್ಯದಲ್ಲಿ ಸಾಕಷ್ಟು ಜನಜನಿತವಾಗಿವೆ. ಮುಂದುವರಿದು.. ಅದೇ ಧಾಟಿಯಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಸಂಕ್ರಾಂತಿ ಹಬ್ಬದ ಬಳಿಕ ಮೊಲದ ಮೂಲಕ ಭವಿಷ್ಯ (rabbit prediction) ಅಂದಾಜಿಸುವ ಪದ್ಧತಿಯೊಂದು ಚಾಲ್ತಿಯಲ್ಲಿದೆ.
ಹೌದು… ಸಂಕ್ರಾಂತಿ (sankranti) ಬಳಿಕ ಕಾಡಿನಿಂದ ಹಿಡಿದು ತಂದ ಮೊಲದ ಕಿವಿಗೆ ಓಲೆ ಹಾಕಿ ಬಳಿಕ ಪೂಜೆ ಸಲ್ಲಿಸಿ ಮತ್ತೆ ಕಾಡಿಗೆ ಬಿಡುವ ಮೂಲಕ ಗ್ರಾಮಸ್ಥರು ರಾಜ್ಯದ ಮಳೆ- ಬೆಳೆ ಭವಿಷ್ಯವನ್ನು (prediction) ಅಂದಾಜಿಸುವ ಪದ್ಧತಿಯೊಂದು ಚಾಲ್ತಿಯಲ್ಲಿದೆ! ತುಮಕೂರು ಜಿಲ್ಲೆ (chikkanayakanahalli in tumkur) ಚಿಕ್ಕನಾಯಕನಹಳ್ಳಿ ತಾಲೂಕಿನ ಸೀಗೆಬಾಗಿ (seegebagi) ಗ್ರಾಮಸ್ಥರು ಈ ಆಚರಣೆಯನ್ನು ಇನ್ನೂ ಮುಂದುವರಿಸಿಕೊಂಡು ಬರ್ತಾ ಇದ್ದಾರೆ.
ವರ್ಷದ ಮೊದಲ ಹಬ್ಬವಾಗಿ ಆಚರಿಸುವ ಈ ಹಬ್ಬಕ್ಕೆ ಮೂರು ದಿನದ ಮೊದಲೇ ಗ್ರಾಮದ ಕೆಲವರು ಕಾಡಿಗೆ ಹೋಗಿ ಮೊಲವನ್ನು ಜೀವಂತವಾಗಿ ಹಿಡಿದು ತರುತ್ತಾರೆ. ಹೀಗೆ ತಂದ ಮೊಲದ ಕಿವಿಗೆ ವಾಲೆ ಹಾಕುತ್ತಾರೆ. ಸಂಕ್ರಾಂತಿ ಹಬ್ಬದ ದಿನ ವಿಶೇಷವಾಗಿ ಪೂಜಿಸಿ, ಮೊಲವನ್ನು ಜೋಪಾನವಾಗಿ ಹಿಡಿದಿಟ್ಟಿರುತ್ತಾರೆ.
ಹಬ್ಬದ ಮರುದಿನ ಸಂಜೆ ವರದರಾಜಸ್ವಾಮಿ ದೇಗುಲದ ಆವರಣದಿಂದ ವರದರಾಜಸ್ವಾಮಿ ಹಾಗೂ ವಿವಿಧ ದೇವರುಗಳಿಗೆ ಪೂಜೆ ಸಲ್ಲಿಸಿ ನೂರಾರು ಮಂದಿ ಸಮ್ಮುಖದಲ್ಲಿ ಮೊಲಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಿವಿಗೆ ವಾಲೆ ಹಾಕಿರುವ ಮೊಲವನ್ನು ಪುನಃ ಕಾಡಿಗೆ ಬಿಡುತ್ತಾರೆ. ಅದು ಯಾವ ದಿಕ್ಕಿಗೆ ಓಡುತ್ತದೆಯೋ ಆ ದಿಕ್ಕಿನಲ್ಲಿ ಉತ್ತಮ ಬೆಳೆಯಾಗುತ್ತದೆ ಎಂಬ ಪ್ರತೀತಿ ಗ್ರಾಮಸ್ಥರಲ್ಲಿದೆ. ಇದೊಂದು ಪುಟ್ಟ ಜಾತ್ರೆಯ ರೀತಿ ನಡೆಯುತ್ತಿದ್ದು, ಅನಾದಿ ಕಾಲದಿಂದಲೂ ನಡೆದು ಬಂದಿದೆ.
ವರದಿ: ಮಹೇಶ್, ಟಿವಿ 9, ತುಮಕೂರು