ಶುಲ್ಕ ಪಾವತಿಗೆ ಖಾಸಗಿ ಶಾಲೆಗಳ ಒತ್ತಡ: ಶಿಕ್ಷಣ ಇಲಾಖೆ ಮೌನ ಖಂಡಿಸಿ ಪೋಷಕರ ಪ್ರತಿಭಟನೆ
ಖಾಸಗಿ ಶಾಲೆಗಳು ಪೂರ್ಣ ಶುಲ್ಕ ವಿಧಿಸುವಂತೆ ಒತ್ತಡ ಹೇರುತ್ತಿವೆ. ಆದರೆ ಈ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ವಿದ್ಯಾರ್ಥಿಗಳ ಪೋಷಕರು ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಶುಲ್ಕ ಪಾವತಿಗೆ ಖಾಸಗಿ ಶಾಲೆಗಳ ಒತ್ತಡ ವಿಚಾರವಾಗಿ ಶಿಕ್ಷಣ ಇಲಾಖೆ ಮೌನ ತಾಳಿರುವುದನ್ನು ಖಂಡಿಸಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪೋಷಕರು ಧರಣಿ ಆರಂಭಿಸಿದ್ದಾರೆ.
ಖಾಸಗಿ ಶಾಲೆಗಳು ಪೂರ್ಣ ಶುಲ್ಕ ವಿಧಿಸುವಂತೆ ಒತ್ತಡ ಹೇರುತ್ತಿವೆ. ಆದರೆ ಈ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ವಿದ್ಯಾರ್ಥಿಗಳ ಪೋಷಕರು ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವರು ತಮ್ಮ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಶಿಕ್ಷಣ ಸಚಿವರು ಫೇಸ್‌ಬುಕ್ ನೋಡಿಕೊಳ್ಳುತ್ತಿದ್ದಾರೆ. ಇಂತಹ ನಾಲಾಯಕ್ ಸಚಿವರು ನಮಗೆ ಬೇಡವೆಂದು ಪೋಷಕರು ಕಿಡಿಕಾರಿದ್ದಾರೆ.
ಹೊರ ರಾಜ್ಯದ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದು ನೋಡಿ. ಅಲ್ಲಿಗೆ ಹೋಗಿ ಪಾಠ ಕೇಳಿಕೊಂಡು ಬನ್ನಿ ಎಂದು ಪೋಷಕರು ಸರ್ಕಾರವನ್ನು ಟೀಕಿಸಿದ್ದಾರೆ. ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರವೇ ನಿಗದಿ ಮಾಡಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಸತ್ತು ಹೋಗಿದೆ. ಶಿಕ್ಷಣ ಸಚಿವರು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹೀಗೆ ಆದರೆ, ಬಿಬಿಎಂಪಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಧರಣಿ ನಿರತ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ತೆರಿಗೆಯಲ್ಲೇ ನಿಮಗೆ ಸಂಬಳ, ಕಾರ್ ಕೊಟ್ಟಿದ್ದೇವೆ. ಸಾರ್ವಜನಿಕ ಸೇವೆ ಮಾಡುತ್ತೇವೆ ಎಂದು ಅಧಿಕಾರ ಸ್ವೀಕಾರ ಮಾಡಿದ್ದೀರಿ. ಈಗ ನಮ್ಮ ಬೇಡಿಕೆ ಈಡೇರಿಸದಿದ್ದರೆ ನಿಮ್ಮ ಪರಿಸ್ಥಿತಿ ಹೀನಾಯವಾಗುತ್ತದೆ. ಮನೆಯಲ್ಲಿ ಕಸ ಗುಡಿಸಬೇಕಾಗುತ್ತದೆ. ಪಾತ್ರೆ ತೊಳಿಯಬೇಕಾಗುತ್ತದೆ ಹುಷಾರ್ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಪೋಷಕರು ಎಚ್ಚರಿಕೆ ನೀಡಿದ್ದಾರೆ. ಪೋಷಕರ ಸಂಘಟನೆ ಹೇಗಿದೆ ಎಂದು ಮಂಗಳವಾರ ತೋರಿಸುತ್ತೇವೆ ಎಂದೂ ಹೇಳಿದ್ದಾರೆ.
ಪೂರ್ತಿ ಶುಲ್ಕ ಪಾವತಿಗೆ ಒತ್ತಡ ಹೇರಬೇಡಿ ಎಂದು ಖಾಸಗಿ ಶಾಲೆಗಳ ಒಕ್ಕೂಟದಿಂದ ಮನವಿ: ಸಚಿವ ಸುರೇಶ್ ಸ್ವಾಗತ
Published On - 1:15 pm, Sun, 10 January 21