ಮಂಡ್ಯ, ಡಿಸೆಂಬರ್ 11: ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಸಿಎಂ ಎಸ್ಎಂ ಕೃಷ್ಣ ಮಂಗಳವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ಸಂಜೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕಾಫಿ ಡೇ ಆವರಣದಲ್ಲಿ ನಡೆಯಲಿದೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಿಂದ ರಸ್ತೆ ಮಾರ್ಗವಾಗಿ ಎಸ್ಎಂ ಕೃಷ್ಣ ಅಂತಿಮ ಯಾತ್ರೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ, ಎಸ್ಎಂ ಕೃಷ್ಣ ಅವರ ವಿವಾಹದ ಆಮಂತ್ರಣ ಪತ್ರಿಕೆ ಈಗ ವೈರಲ್ ಆಗುತ್ತಿದೆ!
ಎಸ್ಎಂ ಕೃಷ್ಣ 1966 ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಪ್ರೇಮರನ್ನು ವಿವಾಹವಾಗಿದ್ದರು. ಇವರಿಬ್ಬರ ವಿವಾಹ 1966 ರ ಏಪ್ರಿಲ್ 29 ರಂದು ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್ನಲ್ಲಿ ನೆರವೇರಿತ್ತು.
ಒಕ್ಕಲಿಗ ಸಮುದಾಯದ ಪ್ರಸಿದ್ಧ ಮನೆತನದ ಪ್ರೇಮ ಜತೆ ವಿವಾಹವಾಗುವ ಮೂಲಕ ಎಸ್ಎಂ ಕೃಷ್ಣ ತೀರ್ಥಹಳ್ಳಿಯ ಅಳಿಯನಾಗಿದ್ದರು. ಮಂಡ್ಯಕ್ಕೂ ಮಲೆನಾಡಿಗೂ ಮೊದಲ ಸಂಬಂಧ ಇದಾಗಿತ್ತು ಎಂದು ‘ಟಿವಿ9’ಗೆ ಪ್ರೇಮಾ ಸಂಬಂಧಿ ಪದ್ಮನಾಭ ತಿಳಿಸಿದ್ದಾರೆ. ಕೃಷ್ಣ ತುಂಬಾ ಸರಳ, ಸಜ್ಜನಿಕೆಯ ವ್ಯಕ್ತಿ. ಮಾಜಿ ಸಿಎಂ ಕಡಿದಾಳ ಮಂಜಪ್ಪ ಅವರ ಮೂಲಕ ಕೃಷ್ಣ ಜೊತೆ ಸಂಬಂಧಕ್ಕೆ ಮಾತುಕತೆ ನಡೆದಿತ್ತು. ಬಳಿಕ ಬೆಂಗಳೂರಿನ ಕ್ಲಬ್ನಲ್ಲಿ ಪ್ರೇಮಾ ಅವರನ್ನು ತೋರಿಸಿದ್ದರು. ಮೊದಲ ನೋಟದಲ್ಲೇ ಕೃಷ್ಣ ಅವರು ಮಲೆನಾಡಿನ ಯುವತಿಗೆ ಮನಸೋತಿದ್ದರು ಎಂದು ಪದ್ಮನಾಭ ತಿಳಿಸಿದ್ದಾರೆ.
‘‘ಸೋಮನಹಳ್ಳಿ ಎಸ್ಸಿ ಮಲ್ಲಯ್ಯನವರ ಕುಟುಂಬ ಮತ್ತು ಬಂಧು ವರ್ಗದವರು ತಾ 29-4-1966 ನೇ ಶುಕ್ರವಾರ ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್ನಲ್ಲಿ ನಡೆಯುವ ಚಿರಂಜೀವಿ ಎಸ್ಎಂ ಕೃಷ್ಣ (ದಿವಂಗತ ಎಸ್ಸಿ ಮಲ್ಲಯ್ಯನವರ ಪುತ್ರ) ಹಾಗೂ ಸೌಭಾಗ್ಯವತಿ ಪ್ರೇಮ (ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಕೆಆರ್ ಚನ್ನಪ್ಪಗೌಡರ ಪುತ್ರಿ) ಇವರುಗಳ ವಿವಾಹಕ್ಕೆ ತಾವು ದಯಮಾಡಿಸಿ ವಧೂವರರನ್ನು ಆಶೀರ್ವದಿಸಬೇಕಾಗಿ ಆಹ್ವಾನಿಸುತ್ತಾರೆ’’ ಎಂದು ಲಗ್ನಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಸದ್ಯ ಎಸ್ಎಂ ಕೃಷ್ಣ ವಿವಾಹದ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಎಸ್ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ಯಾತ್ರೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಸಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಮಂದಿ ಅಂತಿಮ ದರ್ಶನ ಪಡೆದಿದ್ದಾರೆ. ರಾಮನಗರದಲ್ಲಿ ಹೆದ್ದಾರಿಯ ಎರಡೂ ಬದಿ ನಿಂತಿರುವ ಸಾರ್ವಜನಿಕರು, ಕಟ್ಟಡಗಳ ಮೇಲೆ ಏರಿ ಅಗಲಿದೆ ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Wed, 11 December 24