ನವದೆಹಲಿ, ಏಪ್ರಿಲ್ 8: ರಾಜ್ಯದ ಪಠ್ಯಕ್ರಮ (Karnataka State Curriculum) ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ತಡೆಯಾಜ್ಞೆ ನೀಡಿದೆ. 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾರ್ಚ್ 22ರಂದು ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿತ್ತು.
ಸದ್ಯ ಯಾವುದೇ ಶಾಲೆಗಳು ಸಹ ಫಲಿತಾಂಶ ಪ್ರಕಟಿಸಬಾರದು. ಮುಂದಿನ ಆದೇಶದ ವರೆಗೆ ಕಾಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಾರ್ಚ್ನಲ್ಲಿ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಆದೇಶ ನೀಡಿದ್ದ ಹೈಕೋರ್ಟ್, ಸ್ಥಗಿತಗೊಂಡಿರುವ ಪರೀಕ್ಷೆ ಮುಂದುವರಿಸಲು ಸೂಚನೆ ನೀಡಿತ್ತು. ಅದರಂತೆ ಬಳಿಕ ಶಾಲೆಗಳು ಪರೀಕ್ಷೆಗಳನ್ನು ನಡೆಸಿದ್ದವು. ಇದೀಗ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬಂದಿದೆ.
ಇದನ್ನೂ ಓದಿ: 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅಸ್ತು
ಏನಿದು ಪ್ರಕರಣ?
2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5, 8, 9ನೇ ಹಾಗೂ 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅನುದಾನ ರಹಿತ ಶಾಲೆಗಳ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸರ್ಕಾರದ ಪರ ಎಎಜಿ ವಿಕ್ರಮ್ ಹುಯಿಲಗೋಳ್ ಅವರು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದರು. ಬಳಿಕ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Mon, 8 April 24