ಲೋಕ ಅದಾಲತ್​ ಮೂಲಕ ಒಂದೇ ದಿನ 25 ಲಕ್ಷ ಪ್ರಕರಣಗಳ ಇತ್ಯರ್ಥ

| Updated By: Rakesh Nayak Manchi

Updated on: Dec 12, 2023 | 7:20 PM

ಲೋಕ್ ಅದಾಲತ್ ಮೂಲಕ ಒಂದೇ ದಿನ 25 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿ ನೀಡಿದ್ದು, ಡಿಸೆಂಬರ್ 9 ರಂದು 25.14 ಲಕ್ಷ ಕೇಸ್​ಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಪೈಕಿ 1358 ವೈವಾಹಿಕ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದೆ.

ಲೋಕ ಅದಾಲತ್​ ಮೂಲಕ ಒಂದೇ ದಿನ 25 ಲಕ್ಷ ಪ್ರಕರಣಗಳ ಇತ್ಯರ್ಥ
ಲೋಕ್ ಅದಾಲತ್​ ಮೂಲಕ ಒಂದೇ ದಿನ 25 ಲಕ್ಷ ಪ್ರಕರಣಗಳ ಇತ್ಯರ್ಥ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಡಿ.12: ಲೋಕ ಅದಾಲತ್ (Lok Adalat) ಮೂಲಕ ಒಂದೇ ದಿನ 25 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮಾಹಿತಿ ನೀಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ಪಿ.ಎಸ್.ದಿನೇಶ್ ಕುಮಾರ್, ಡಿಸೆಂಬರ್ 9 ರಂದು ಲೋಕ ಅದಾಲತ್ ಮೂಲಕ 25.14 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು.

ಇತ್ಯರ್ಥಗೊಳಿಸಲಾಗಿರುವ ಒಟ್ಟು ಪ್ರಕರಣಗಳಲ್ಲಿ ಕೋರ್ಟ್​ಗಳಲ್ಲಿ ಬಾಕಿ ಇದ್ದ 2.24 ಲಕ್ಷ ಪ್ರಕರಣಗಳು ಸೇರಿವೆ. ಉಳಿದಂತೆ, 22.90 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು 1,569 ಕೋಟಿ ರೂಪಾಯಿ ಪರಿಹಾರ ಮೊತ್ತದೊಂದಿಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.

ಇದನ್ನೂ ಓದಿ: ಮಹಿಳೆಯನ್ನ ವಿವಸ್ತ್ರಗೊಳಿಸಿದ ಪ್ರಕರಣ: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ‌ ಹೈಕೋರ್ಟ್

ಅಲ್ಲದೆ, ಇತ್ಯರ್ಥಗೊಳಿಸಿದ ಪ್ರಕರಣಗಳಲ್ಲಿ 1,358 ವೈವಾಹಿಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಸಂಧಾನದ ಮೂಲಕ 262 ದಂಪತಿಗಳನ್ನ ಒಟ್ಟುಗೂಡಿಸಲಾಗಿದೆ. 3,125 ವಿಭಾಗ ದಾವೆ ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ದಿನೇಶ್ ಕುಮಾರ್ ತಿಳಿಸಿದರು.

4031 ಅಪಘಾತ ಪ್ರಕರಣಗಳಲ್ಲಿ 209 ಕೋಟಿ ಪರಿಹಾರ ನೀಡಲಾಗಿದೆ. 10513 ಚೆಕ್ ಬೌನ್ಸ್ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. 28 ರೇರಾ, 88 ಗ್ರಾಹಕರ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ನ್ಯಾ.ದಿನೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ