ಕಾರವಾರ, ಅಕ್ಟೋಬರ್ 07: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ (Shiruru Hill Collapse) ಸಂಬಂಧಿಸಿದಂತೆ ಇತ್ತೀಚೆಗೆ ಕೇರಳ ಮೂಲಕ ಲಾರಿ ಚಾಲಕ ಅರ್ಜನ್ ಶವ ಪತ್ತೆ ಆಗಿತ್ತು. ಬಳಿಕ ಮಾನವನ ದೇಹದ 2 ಮೂಳೆಗಳು ಪತ್ತೆ ಆಗಿದ್ದವು. ಬಳಿಕ ಅದನ್ನು ಡಿಎನ್ಎ ಟೆಸ್ಟ್ಗೆ ರವಾನೆ ಮಾಡಲಾಗಿತ್ತು. ಆದರೆ ಇದೀಗ ಒಂದು ವಾರ ಕಳೆದರೂ ಡಿಎನ್ಎ ವರದಿ ಬಂದಿಲ್ಲ. ಹೀಗಾಗಿ ವೈದ್ಯ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಜಿಲ್ಲಾಡಳಿತಕ್ಕೆ ಸಂಕಷ್ಟ ಎದುರಾಗಿದೆ.
ಸೆಪ್ಟೆಂಬರ್ 30 ರಂದು ಕಾರ್ಯಾಚರಣೆ ವೇಳೆ ಮೂಳೆಗಳು ಪತ್ತೆಯಾಗಿದ್ದವು. ಡಿಎನ್ಎ ಪರೀಕ್ಷೆಗೆ ಕಳುಹಿಸುವಾಗ ಹೆಚ್ಚಿನ ಕೆಮಿಕಲ್ ಬಳಕೆ ಮಾಡಲಾಗಿದೆ. ಇದರಿಂದ ಡಿಎನ್ಎ ವರದಿ ನೆಗೆಟಿವ್ ಬರುತ್ತಿದೆ. ಹುಬ್ಬಳ್ಳಿಯ ಎಫ್ಎಸ್ಎಲ್ ಲ್ಯಾಬ್ನಲ್ಲಿ ಕಳೆದ ಐದು ದಿನದಿಂದ ತಜ್ಞರು ನಿರಂತರ ಟೆಸ್ಟ್ ಮಾಡುತ್ತಿದ್ದಾರೆ. ಮೂಳೆಯ ಡಿಎನ್ಎ ವರದಿ ಬರುವುದು ಇನ್ನಷ್ಟು ವ್ಯತ್ಯಯ ಆಗುವ ಸಾಧ್ಯತೆ ಇದೆ. ಕೆಮಿಕಲ್ ಹೆಚ್ಚಿಗೆ ಬಳಕೆಯಿಂದ ಡಿಎನ್ಎ ವರದಿ ಬರುವುದ ಕಷ್ಟ ಎಂದು ಕೆಲವು ತಜ್ಞರು ಹೇಳುತ್ತಿದ್ದಾರೆ. ಕಣ್ಮರೆಯಾದವರ ಕುಟುಂಬಸ್ಥರ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರಿಸಲಾಗದೆ ಸಂಕಷ್ಟಕ್ಕೆ ಸಿಲುಕೊಂಡಿದೆ.
ಇದನ್ನೂ ಓದಿ: ಶಿರೂರು ಭೂಕುಸಿತ ಪ್ರಕರಣ: ಗಂಗಾವಳಿ ನದಿಯಲ್ಲಿ ಮಾನವ ದೇಹದ 2 ಮೂಳೆ ಪತ್ತೆ
ಕಣ್ಮರೆಯಾದವರ ಶೋಧಕ್ಕಾಗಿ 91 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋವಾ ಮೂಲದ ಡ್ರೆಜರ್ ಹಾಗೂ ಬಾರ್ಜ್ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಕಣ್ಮರೆಯಾದ ಜಗನ್ನಾಥ್ ನಾಯ್ಕ್ ಮತ್ತು ಲೊಕೇಶ್ ನಾಯ್ಕ್ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿದೆ.
ಕಣ್ಮರೆಯಾದ ಜಗನ್ನಾಥ್ ನಾಯ್ಕ್ ಪುತ್ರಿ ಮನಿಷಾ ಪ್ರತಿಕ್ರಿಯಿಸಿದ್ದು, ನಮ್ಮ ತಂದೆ ಕಣ್ಮರೆಯಾಗಿ ಎರಡು ತಿಂಗಳು ಕಳೆಯಿತು. ತಂದೆಯ ಶೋಧಕ್ಕಾಗಿ ಜಿಲ್ಲಾಡಳಿತ ಪ್ರಾಮಾಣಿಕವಾಗಿ ಬಹಳಷ್ಟು ಪ್ರಯತ್ನ ಮಾಡಿದೆ. ಆದರೆ ನಮ್ಮ ತಂದೆಯ ಸಾವಿನ ಬಗ್ಗೆ ಅಧಿಕೃತವಾಗಿ ಏನೂ ಸಿಕ್ಕಿಲ್ಲ. ಕಳೆದ ವಾರ ಶೋಧ ಕಾರ್ಯ ವೇಳೆ ಎರಡು ಮೂಳೆ ಪತ್ತೆ ಆಗಿತ್ತು. ಪತ್ತೆಯಾದ ಮೂಳೆಯ ಕುರಿತು ಇದುವರೆಗೂ ಡಿಎನ್ಎ ವರದಿ ಕೂಡ ಬಂದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನದಿಯಲ್ಲಿ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ
ಮನೆಯಲ್ಲಿ ನಾವು ಮೂವರು ಹೆಣ್ಣು ಮಕ್ಕಳು ಇದ್ದೇವೆ. ಜಿಲ್ಲಾಡಳಿತಕ್ಕೆ ನಾನು ಕೈ ಮುಗಿದು ಮನವಿ ಮಾಡುತ್ತೇನೆ ತಂದೆಯ ಸಾವು ದೃಢ ಆಗದ ಹಿನ್ನೆಲೆ ಸರಕಾರದ ಯೋಜನೆ ಲಾಭ ನಮಗೆ ಸಿಗುತ್ತಿಲ್ಲ. ಜಿಲ್ಲಾಡಳಿತ ನಮ್ಮ ತಂದೆಯ ಮರಣ ಪ್ರಮಾಣಪತ್ರ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.