
ಬೆಂಗಳೂರು, ಆಗಸ್ಟ್ 13: ಕಳೆದ ಲೋಕಸಭಾ ಚುನಾವಣೆ (Lok Sabha Election) ಸಂದರ್ಭದಲ್ಲಿ ವೋಟ್ಗಾಗಿ ನೋಟು ಹಂಚಿಕೆ ಮಾಡಲಾಗಿದೆ ಎಂಬ ಶಾಸಕ ಶಿವಲಿಂಗೇಗೌಡ (Shivalinge gowda) ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
“2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಸಂಸದ ಶ್ರೇಯಸ್ ಎಮ್ ಪಟೇಲ್ ಪರವಾಗಿ ಜಿಲ್ಲೆಯಲ್ಲಿ ಹಣ ಹಂಚಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯಸಭಾ ಸದಸ್ಯ ಎನ್ ಚಂದ್ರಶೇಖರ್ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ” ಎಂದು ಶಾಸಕ ಶಿವಲಿಂಗೇಗೌಡ ಅವರು ಫೋನಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.
ವೈರಲ್ ಆದ ಆಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಇವರುಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಲು ನಿಯಮಾನುಸಾರ ಪ್ರಾಸಿಕ್ಯೂಷನ್ ದಾಖಲಿಸಲು ಅನುಮತಿ ನೀಡಬೇಕೆಂದು ವಕೀಲ ದೇವರಾಜೇಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ.
“ಆರಸೀಕೆರೆಯ ಶಾಸಕ ಕೆ.ಎಮ್ ಶಿಲಿಂಗೇಗೌಡ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೇಯಸ್ ಎಮ್ ಪಟೇಲ್ ಪರವಾಗಿ ಜಿಲ್ಲೆಯ ಮತದಾರರಿಗೆ ತಲಾ 500
ರೂಪಾಯಿ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಜ್ಯಸಭಾ ಸದಸ್ಯರಾದ ಎನ್ ಚಂದ್ರಶೇಖರ್ ಸಮ್ಮುಖದಲ್ಲಿ ತೀರ್ಮಾನವಾಗಿದೆ.
ಇವರ ನಿರ್ದೇಶನದಂತೆ ಶ್ರೇಯಸ್ ಎಮ್ ಪಟೇಲ್ 5 ಕೋಟಿ ರೂ., ಗೋಪಾಲಸ್ವಾಮಿ 1 ಕೋಟಿ ರೂ. ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಶಿವರಾಮು 1 ಕೋಟಿ ರೂ. ಒಟ್ಟು 7 ಕೋಟಿ ರೂಪಾಯಿಗಳ ಹಣವನ್ನು ಮತದಾರರಿಗೆ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆ ಮಾಡಬೇಕು. ಒಟ್ಟು ಮತದಾರರ ಪೈಕಿ ಶೇ. 70 ರಷ್ಟು ಹಂಚಲು ಸಾದ್ಯವಾಗದಿದ್ದರೆ ಶೇ. 68 ರಷ್ಟು ಹಣವನ್ನು ಮತದಾರರಿಗೆ ಈ ದಿನ ರಾತ್ರಿಯೇ ಹಂಚಿಕೆ ಮಾಡಬೇಕೆಂದು ಬೇಲೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚನೆ ನೀಡಿರುವ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಕೋಟಿ ಕೋಟಿ ಹಣ ಹಂಚಿಕೆ: ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ವೈರಲ್
ಅದೇ ಸಂದರ್ಭದಲ್ಲಿ ಬೇಲೂರಿನಲ್ಲಿ ನೆಡೆಯುವ ಪ್ರಚಾರ ಕಾರ್ಯ ಕ್ರಮಕ್ಕೆ 1.5 ಕೋಟಿ ರೂ. ಖರ್ಚು ಮಾಡಿರುವ ಬಗ್ಗೆ ಮಾತನಾಡಿರುವ ಸ್ಪಷ್ಟವಾದ ಧ್ವನಿಸುರಳಿಯು ಎಲ್ಲಾ ಮಾಧ್ಯಮಗಳಲ್ಲಿ ಬಿಡುಗಡೆಗೊಂಡಿದೆ. ಆಡಿಯೋದಲ್ಲಿನ ಧ್ವನಿಯೂ ಕೂಡ ಸ್ಪಷ್ಟವಾಗಿ ಕೆ.ಎಂ ಶಿವಲಿಂಗೇಗೌಡರಷ್ಟೇ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿಯಮಾನುಸಾರ ಪ್ರಜಾಪ್ರತಿನಿಧಿ ಖಾಯ್ದೆ 1951 ಕಲಂ 123 ಮತ್ತು 77 ರ ಅಡಿಯಲ್ಲಿ ಹಾಗೂ ಭ್ರಷ್ಟಾಚಾರ ಖಾಯ್ದೆಯ ಅಡಿಯಲ್ಲಿ ಮತ್ತು ಇನ್ನಿತರೆ ಖಾಯ್ದೆಯ ಅಡಿಯಲ್ಲಿ ಸಕ್ಷಮ ತನಿಖಾ ಸಂಸ್ಥೆ / ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿಯಮಾನುಸಾರ ಪ್ರಾಸಿಕ್ಯೂಸೆನ್‌ಗೆ/ ಮೊಕದೊಮೆ ದಾಖಲಿಸಲು ತಾವುಗಳು ಅನುಮತಿ ನೀಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ” ದೂರಿನಲ್ಲಿ ಇದೆ.
Published On - 5:27 pm, Wed, 13 August 25