ಒಂದು ಆಂಬುಲೆನ್ಸ್​ನಲ್ಲಿ​ 3 ಕೊರೊನಾ ಸೋಂಕಿತರ ಮೃತದೇಹ: ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ

|

Updated on: May 18, 2021 | 1:34 PM

ಶವಾಗರದಲ್ಲಿರುವ ಸಿಬ್ಬಂದಿಗಳು ಪಿಪಿಇ ಕಿಟ್, ಗ್ಲೌಸ್ ಮತ್ತು ಮಾಸ್ಕ್ ಧರಿಸದೇ ಕೊರೊನಾ ಸೋಂಕಿತರ ಶವವನ್ನು ಆಂಬುಲೆನ್ಸ್​ಗೆ ಶೀಪ್ಟ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಅಂತ್ಯಕ್ರಿಯೆಗೆಂದು ಇರುವ ಒಂದೇ ವಾಹನದಲ್ಲಿ ಮೂರು ಶವ ಹಾಕುವ ಮೂಲಕ ಸಿಬ್ಬಂದಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ಒಂದು ಆಂಬುಲೆನ್ಸ್​ನಲ್ಲಿ​ 3 ಕೊರೊನಾ ಸೋಂಕಿತರ ಮೃತದೇಹ: ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ
ಆಂಬುಲೆನ್ಸ್​
Follow us on

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟುತ್ತಿದೆ. ನಿತ್ಯ 10 ರಿಂದ 15 ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಇತ್ತ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದರೆ, ಅತ್ತ ಸಾವಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಈ ನಡುವೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಕೊರೊನಾದಿಂದ ಮೃತಪಟ್ಟವರ ಶವ ಹಸ್ತಾಂತರ ಮತ್ತು ಅಂತ್ಯಕ್ರಿಯೆ ವೇಳೆ ಸಿಬ್ಬಂದಿಗಳು ಅವಾಂತರಗಳನ್ನು ಮಾಡುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರುವ ಸಿಬ್ಬಂದಿಗಳು ಮತ್ತು ಆಂಬುಲೆನ್ಸ್ ಚಾಲಕರು ಬಿಡುವಿಲ್ಲದ ಕೆಲಸದಲ್ಲಿ ನಿರತರಾಗಿದ್ದಾರೆ. ಒಂದೇ ದಿನ ಹತ್ತಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾದ ಶವಗಳು ಬರುತ್ತಿವೆ. ಕೊವಿಡ್ ನಿಯಮಗಳ ಪ್ರಕಾರ ಶವವನ್ನು ಪೂರ್ಣವಾಗಿ ಪ್ಯಾಕ್ ಮಾಡಿ ಕುಟುಂಬಸ್ಥರಿಗೆ ರವಾನಿಸಬೇಕು. ಬಳಿಕ ಈ ಶವವನ್ನು ಆಂಬ್ಯುಲೇನ್ಸ್​ನಲ್ಲಿ ತೆಗೆದುಕೊಂಡು ಹೋಗಿ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಬೇಕು. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಮೋಕ್ಷ ವಾಹಿನಿಯಲ್ಲಿ ದೊಡ್ಡ ಯಡವಟ್ಟು ನಡೆದಿದೆ.

ಶವಾಗರದಲ್ಲಿರುವ ಸಿಬ್ಬಂದಿಗಳು ಪಿಪಿಇ ಕಿಟ್, ಗ್ಲೌಸ್ ಮತ್ತು ಮಾಸ್ಕ್ ಧರಿಸದೇ ಕೊರೊನಾ ಸೋಂಕಿತರ ಶವವನ್ನು ಆಂಬುಲೆನ್ಸ್​ಗೆ ಶೀಪ್ಟ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಅಂತ್ಯಕ್ರಿಯೆಗೆಂದು ಇರುವ ಒಂದೇ ವಾಹನದಲ್ಲಿ ಮೂರು ಶವ ಹಾಕುವ ಮೂಲಕ ಸಿಬ್ಬಂದಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರ ಜತೆಗೆ ಮೋಕ್ಷ ವಾಹನದಲ್ಲಿ ಮೂರು ಶವ ಹಾಕಿದ ಬಳಿಕ ಅವರ ಸಂಬಂಧಿಕರು ಯಾವುದೇ ಪಿಪಿಇ ಕಿಟ್, ಗ್ಲೌಸ್ ಧರಿಸದೇ ವಾಹನದಲ್ಲಿ ಕುಳಿತು ಕೊಳ್ಳುತ್ತಿದ್ದಾರೆ.

ಕೊರೊನಾದಿಂದ ಮೃತಪಟ್ಟಿರುವ ಶವವನ್ನು ಹೇಗೆ ಅಂತ್ಯಕ್ರಿಯೆ ಮಾಡಬೇಕು ಎನ್ನುವುದನ್ನು ತಿಳಿದು, ಕೊವಿಡ್​ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸದ್ಯ ಈ ವ್ಯವಸ್ಥೆಯಿಂದ ಮಲೆನಾಡಿನಲ್ಲಿ ಕೊರೊನಾ ನಿಯಂತ್ರಣವಾಗುವ ಬದಲು ಇನ್ನೂ ಹೆಚ್ಚಾಗಿ ಎಲ್ಲೆಡೆ ಹರಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ದೇವೇಂದ್ರಪ್ಪ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ ಬಳಿಕ ಅವರ ಅಂತ್ಯಸಂಸ್ಕಾರ ಮಾಡುವುದೇ ಒಂದು ಸವಾಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಕುಟುಂಬಸ್ಥರು ಈಗಾಗಲೇ ಶವ ಸಂಸ್ಕಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಶಿವಮೊಗ್ಗದಲ್ಲಿನ ಖಾಸಗಿ ಆಂಬುಲೆನ್ಸ್​ಗಳು ಕೊರೊನಾ ಮೃತದೇಹಗಳನ್ನು ಅವರ ಗ್ರಾಮಕ್ಕೆ ಹಾಗೂ ಶವಾಗಾರಕ್ಕೆ ತೆಗೆದುಕೊಂಡು ಹೋಗಲು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ.

ಈ ಕುರಿತು ನಿನ್ನೆ ನಡೆದ ಕೊವಿಡ್ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ ಆಂಬುಲೇನ್ಸ್​ಗಳ ನಿರ್ಲಕ್ಷ್ಯ ಗಮನಕ್ಕೆ ಬಂದಿದೆ. ಈ ಆಂಬುಲೆನ್ಸ್ ಮತ್ತು ವ್ಯವಸ್ಥಿತವಾಗಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ವಿಧಿ ವಿಧಾನದಂತೆ ಗೌರವಯುತವಾಗಿ ಮೃತರ ಅಂತ್ಯಕ್ರಿಯೆಗಳು ನಡೆಯುತ್ತಿಲ್ಲ. ಬೇಕಾಬಿಟ್ಟಿಯಾಗಿ ಮೃತದೇಹ ತುಂಬಿಕೊಂಡು ಅಂತ್ಯಕ್ರಿಯೆಗೆ ಹೋಗುತ್ತಿರುವುದು ಸೋಂಕಿತರ ಕುಟುಂಬಗಳಿಗೆ ಮತ್ತಷ್ಟು ಹೆಚ್ಚು ನೋವು ನೀಡುವಂತಾಗಿದೆ. ಕೊವಿಡ್​ಗೆ ಬಲಿಯಾದವರ ಶವ ಸಂಸ್ಕಾರಗಳನ್ನು ಕೊವಿಡ್ ನಿಯಮಗಳಂತೆ ಉತ್ತಮ ವ್ಯವಸ್ಥೆಗೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಜನರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ‘ಸ್ವತಃ ವೈದ್ಯೆಯಾಗಿಯೂ ಆ್ಯಂಬುಲೆನ್ಸ್ ಹಿಂದೆ ಹುಚ್ಚಿಯಂತೆ ಓಡಿದ್ದೆ’

ಆಂಬುಲೆನ್ಸ್​  ಬದಲು ಬೇರೆ ವಾಹನದಲ್ಲಿ ಶವ ಸಾಗಣೆಗೆ ಅವಕಾಶ; ಶವಸಂಸ್ಕಾರಕ್ಕೆ ಕಂಟ್ರೋಲ್ ರೂಂ ಓಪನ್: ಸಚಿವ ಅಶೋಕ್

 

Published On - 1:30 pm, Tue, 18 May 21