ಶಿವಮೊಗ್ಗ: ಬಿಜೆಪಿ ಮಾಜಿ ಎಂಎಲ್ಸಿ ಭಾನುಪ್ರಕಾಶ್ (Bhanuprakash) ಪುತ್ರನಿಗೆ ಸೇರಿದ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ (Shivamogga) ನಗರದ ಊರುಗಡೂರು-ಸೂಳೇಬೈಲ್ ಬಳಿ ಕಾರಿನ ಮೇಲೆ ನಿನ್ನೆ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮತ್ತೂರಿನ ನಿವಾಸಿಗಳಿಬ್ಬರು ಶಿವಮೊಗ್ಗಕ್ಕೆ ಬಂದು ಮರಳುವಾಗ ಮಾರ್ಗಮಧ್ಯ ಕಾರಿನ ಮೇಲೆ ಕಲ್ಲು ತೂರಾಟ ನಡಿದಿತ್ತು. ದುಷ್ಕರ್ಮಿಗಳ ಈ ಕೃತ್ಯದಿಂದ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪ್ರಕರಣದ ಬಗ್ಗೆ ಗಾಳಿ ಸುದ್ದಿ ಹಬ್ಬಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸ್ಥಳಕ್ಕೆ ಆಗಮಿಸಿದ್ದರು. ಆರ್‌ಎಸ್‌ಎಸ್ ಮುಖಂಡರು, ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಕಿಡಿಗೇಡಿಗಳ ಕಲ್ಲು ತೂರಾಟದಿಂದ ಕಾರಿನ ಗ್ಲಾಸ್ ಚೂರು ಚೂರಾಗಿದೆ. ಸ್ಥಳಕ್ಕೆ ಎಸ್ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್, ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್ ಸೇರಿದಂತೆ ನೂರಾರು ಪೊಲೀಸರು ತೆರಳಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಕಾರು ತಮ್ಮದಲ್ಲ ಎಂದು ಸ್ಪಷ್ಟನೆ ನೀಡಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ:
ಕಲ್ಲು ತೂರಾಟಕ್ಕೆ ಒಳಗಾಗಿರುವ ಕಾರು ಹರಿಕೃಷ್ಣ ಅವರದ್ದು ಎನ್ನಲಾಗಿತ್ತು. ಈ ಬಗ್ಗೆ ಟಿವಿ 9ಗೆ ಮಾಜಿ ಎಂಎಲ್ಸಿ ಭಾನುಪ್ರಕಾಶ್ ಪುತ್ರ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ ಹೇಳಿಕೆ ನೀಡಿದ್ದಾರೆ. ‘‘ನಿನ್ನೆ ನನ್ನ ಕಾರ್ ಮೇಲೆ ದಾಳಿ ನಡೆದಿಲ್ಲ’’ ಎಂದು ಸ್ಪಷ್ಟನೆ ನೀಡಿರುವ ಅವರು, ‘‘ಮತ್ತೂರು ಗ್ರಾಮದ ವ್ಯಕ್ತಿಗೆ ಸೇರಿದ ಕಾರ್ ಮೇಲೆ ದಾಳಿ ನಡೆದಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಉದ್ದೇಶ ಪೂರ್ವ ಕವಾಗಿ ಅನ್ಯಕೋಮೀನ ಯುವಕರು ಕಾರ್ ಮೇಲೆ ದಾಳಿ ಮಾಡಿದ್ದಾರೆ. ಪದೇ ಪದೇ ಸೂಳೆಬೈಲಿನಲ್ಲಿ ಹಿಂದೂಗಳ ಮೇಲೆ ಹಲ್ಲೆ ಮತ್ತು ದಾಳಿ ನಡೆಯುತ್ತಿವೆ. ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಪದೇ ಪದೇ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಈಗಾಗಲೇ ಘಟನೆ ಕುರಿತು ದೂರು ನೀಡಲಾಗಿದೆ’’ ಎಂದಿದ್ದಾರೆ.
ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಿದ್ದವರು ಬಂಧನ:
ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಟಿಪ್ಸ್ ನೀಡುತ್ತೇವೆಂದು ವಂಚಿಸಿ ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರೆಹಮತ್ ಉಲ್ಲಾ, ಮಲ್ಲಯ್ಯ ಸ್ವಾಮಿ, ದುರ್ಗಪ್ಪ ಬಂಧಿತರು. ಮೇಕ್ ಇನ್ ಪ್ರಾಫಿಟ್ ಎಂಬ ಕಂಪನಿ ಹೆಸರು ಹೇಳಿ ವಂಚನೆ ಮಾಡಿದ್ದಾರೆ. ಬಂಧಿತರು 2.15 ಲಕ್ಷ ರೂ. ಹಣ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾರೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ 3 ಮೊಬೈಲ್, 6 ಸಿಮ್ ಕಾರ್ಡ್ನ ವಶಕ್ಕೆ ಪಡೆದಿದ್ದಾರೆ.
ಹಾಸನ: ಮಳೆಯಿಂದ ಹಾನಿ; ಪರಿಹಾರಕ್ಕೆ ಮನವಿ
ಹಾಸನ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮನೆಯೊಂದರ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ. ಹೊಸೂರು ಗ್ರಾಮದಲ್ಲಿ ಕಳೆದ ರಾತ್ರಿ 11.30 ಸುಮಾರಿನಲ್ಲಿ ಘಟನೆ ನಡೆದಿದೆ. ಗ್ರಾಮದ ಉಮೇಶ್ ಎಂಬುವವರ ಮನೆ ಕುಸಿದು ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತ ಕುಟುಂಬ ಮನವಿ ಮಾಡಿದೆ.
ಇನ್ನಷ್ಟು ಬ್ರೇಕಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:36 am, Sat, 7 May 22