ಶಿವಮೊಗ್ಗದಲ್ಲಿ ಆಪರೇಶನ್ ಕಮಲ: ಕೆಎಸ್ ಪ್ರಶಾಂತ್, ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ್ ಬಿಜೆಪಿ ಸೇರ್ಪಡೆ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಮಾಜಿ ಸಂಸದ ಕೆ.ಜಿ.ಶಿವಪ್ಪರ ಪುತ್ರ ಕೆ.ಎಸ್.ಪ್ರಶಾಂತ್ ಹಾಗೂ ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ್ ಸರ್ಜಿ ಬಿಜೆಪಿಗೆ ಸೇರಿದ್ದಾರೆ.
ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನಲೆ ಶಿವಮೊಗ್ಗದಲ್ಲಿ ಬಿಜೆಪಿ ಆಪರೇಶನ್ ಕಮಲ ಪ್ರಾರಂಭಿಸಿದೆ. ಸೊರಬ, ಶಿಕಾರಿಪುರ ಬಳಿಕ ಇದೀಗ ಸಾಗರ ಹಾಗೂ ಶಿವಮೊಗ್ಗ ಕ್ಷೇತ್ರದ ಪ್ರಮುಖರು ಬಿಜೆಪಿ ಸೇರಿದ್ದಾರೆ. ಸಾಗರದ ಕೆ.ಎಸ್.ಪ್ರಶಾಂತ್ ಹಾಗೂ ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ್ ಸರ್ಜಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಮಾಜಿ ಸಂಸದ ಕೆ.ಜಿ.ಶಿವಪ್ಪರ ಪುತ್ರ ಕೆ.ಎಸ್.ಪ್ರಶಾಂತ್ ಹಾಗೂ ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ್ ಸರ್ಜಿ ಬಿಜೆಪಿಗೆ ಸೇರಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಎಸ್.ರುದ್ರೇಗೌಡ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಪಸ್ಥಿತರಿದ್ದರು. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಇದನ್ನೂ ಓದಿ: Bharat Jodo: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಶಾಲಾ ಶಿಕ್ಷಕರೊಬ್ಬರ ಅಮಾನತು
ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ, ಸಾಗರದ ಯುವ ಮುಖಂಡರಾಗಿರುವ ಕೆ.ಎಸ್.ಪ್ರಶಾಂತ್ ಅವರು ಈ ಹಿಂದೆ ರಾಜಕೀಯವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ತನ್ನದೇ ಸಂಘಟನೆ ಮೂಲಕ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದರು. ಇದೀಗ ಕೆ.ಎಸ್.ಪ್ರಶಾಂತ್ ರನ್ನು ಬಿಜೆಪಿ ನಾಯಕರು ಪಕ್ಷಕ್ಕೆ ಸೆಳೆದುಕೊಂಡಿದ್ದಾರೆ. ಕಳೆದ ಕೆಲ ದಿನದಿಂದ ಬಿಜೆಪಿ ನಾಯಕರ ಜೊತೆ ಹಾಗೂ ಹಿಂದೂಪರ ಸಂಘಟನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಶಾಂತ್ ಬಿಜೆಪಿ ಸೇರಿದ್ದಾರೆ. ಪ್ರಶಾಂತ್ ಸೇರ್ಪಡೆಯಿಂದ ಸಾಗರ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ರಾಜಕೀಯ ಹಿನ್ನೆಲೆ ಜೊತೆಗೆ ಸಾಗರದಲ್ಲಿ ಈಡಿಗ ಸಮುದಾಯ ಪ್ರಬಲವಾಗಿರುವ ಹಿನ್ನೆಲೆ ಹರತಾಳು ಹಾಲಪ್ಪ ಸೊರಬ ಕ್ಷೇತ್ರಕ್ಕೆ ಹೋದರೇ ಕೆ.ಎಸ್.ಪ್ರಶಾಂತ್ ಗೆ ಟಿಕೆಟ್ ಎಂಬ ಲೆಕ್ಕಾಚಾರ ಶುರುವಾಗಿದೆ.
ಇನ್ನೊಂದೆಡೆ ಶಿವಮೊಗ್ಗ ನಗರದಲ್ಲಿ ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ್ ಸರ್ಜಿ ಬಿಜೆಪಿ ಸೇರಿದ್ದಾರೆ. ಇವರು ಕಳೆದ ಕೆಲವು ತಿಂಗಳಿಂದ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತ ಗುರುತಿಸಿಕೊಂಡಿದ್ದರು. ರಾಜಕೀಯವಾಗಿ ಗುರುತಿಸಿಕೊಳ್ಳಲು ನೆಲೆ ಹುಡುಕುತ್ತಿದ್ದ ಧನಂಜಯ್ ಸರ್ಜಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಬಿಜೆಪಿ, ಕಾಂಗ್ರೆಸ್, ಅಪ್ ಸೇರ್ಪಡೆ ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸರ್ಜಿ ಸ್ಫರ್ಧಿಸುವ ಬಗ್ಗೆ ಚರ್ಚೆಯಾಗುತ್ತಿತ್ತು. ಅಂತಿಮವಾಗಿ ಧನಂಜಯ್ ಸರ್ಜಿ ಯವರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೆಳೆದುಕೊಂಡಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:54 pm, Sun, 4 December 22