ಶಿವಮೊಗ್ಗ: ಎರಡೂವರೆ ವರ್ಷದಿಂದ ಪ್ರೀತಿಸಿದ್ದ ಪ್ರಿಯತಮೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಯುವಕ
ಎರಡೂವರೆ ವರ್ಷದಿಂದ ಪ್ರೀತಿಯಲ್ಲಿದ್ದ ಸೃಜನ್ ಹಾಗೂ ಸೌಮ್ಯ ನಡುವೆ ಮದುವೆ ವಿಚಾರಕ್ಕೆ ಜಗಳವಾಗಿದ್ದು ಯುವಕ ತನ್ನ ಪ್ರಿಯತಮೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಹೂತ್ತಿಟ್ಟಿದ್ದು ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಶಿವಮೊಗ್ಗ, ಜುಲೈ.24: ಕಳೆದ ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದ (Love) ಯುವಕ ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ (Murder) ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದವಳು. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಸೌಮ್ಯ ಮದುವೆಯಾಗುವಂತೆ ಸೃಜನ್ನನ್ನು ಪೀಡಿಸುತ್ತಿದ್ದಳು. ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಕೋಪಗೊಂಡ ಸೃಜನ್ ಪ್ರಿಯತಮೆಯ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ಸೃಜನ್ ಕೊಲೆ ಮಾಡಿ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದು ವಿಚಾರ ಬೆಳಕಿಗೆ ಬಂದಿದೆ.
ತೀರ್ಥಹಳ್ಳಿಯಲ್ಲಿ ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಸೃಜನ್ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದ ಸೌಮ್ಯಾಳ ಪರಿಚಯವಾಗಿತು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರು. ಇದೇ ವೇಳೆ ಯುವತಿ ಸೌಮ್ಯ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಜುಲೈ 2 ರಂದು ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾಳೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗುಂಡು ಹಾರಿಸಿ ಅಣ್ಣ ಹಾಗೂ ಅಣ್ಣನ ಮಗನನ್ನು ಕೊಂದ ಆರೋಪಿಯ ಬಂಧನ
ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್ ಮನವೊಲಿಸಲು ಪ್ರಯತ್ನಿಸಿದ್ದಾನೆ. ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಕರೆದುಕೊಂಡು ಬಂದು ಸಮಾಧಾನದ ಮಾತುಗಳನ್ನಾಡಿದ್ದಾನೆ. ಇದರಿಂದ ಅನುಮಾನಗೊಂಡ ಸೌಮ್ಯ ನನ್ನನ್ನು ದೂರ ಮಾಡುತ್ತಿದ್ದಾನೆ. ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ ವಾದ ಮಾಡಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಕೋಪಗೊಂಡ ಸೃಜನ್ ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಕತ್ತು ಹಿಸುಕಿ ಹಲ್ಲೆ ಮಾಡಿದ ಪರಿಣಾಮ ಯುವತಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.
ಇದರಿಂದ ಗಾಬರಿಗೊಂಡ ಆರೋಪಿ ಸೃಜನ್ ಮುಂಬಾಳು ಬಳಿ ಶವವನ್ನು ಹೂತಿಟ್ಟಿದ್ದಾನೆ. ಮತ್ತೊಂದೆಡೆ ಮಗಳು ಮನೆಗೆ ಬರದಿದ್ದಕ್ಕೆ ಟೆನ್ಷನ್ ಆಗ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಯುವಕನನ್ನು ಹುಡುಕಿಕೊಂಡು ಸಾಗರಕ್ಕೆ ಬಂದಿದ್ದು ಯುವತಿಯನ್ನು ಕೊಂದು ಹೂತಿಟ್ಟ ರಹಸ್ಯವನ್ನು ಸೃಜನ್ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:19 pm, Wed, 24 July 24



