ಚಿಕ್ಕಬಳ್ಳಾಪುರ: ಗುಂಡು ಹಾರಿಸಿ ಅಣ್ಣ ಹಾಗೂ ಅಣ್ಣನ ಮಗನನ್ನು ಕೊಂದ ಆರೋಪಿಯ ಬಂಧನ
ಗುಂಡಿನದಾಳಿ ನಡೆಸಿ ಹಾಗೂ ಮಚ್ಚಿನಿಂದ ಹಲ್ಲೆ ಮಾಡಿ ಅಣ್ಣ ಮತ್ತು ಅಣ್ಣನ ಮಗನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ. ಗುಡಿಬಂಡೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಚಿಕ್ಕಬಳ್ಳಾಪುರ, ಜುಲೈ 24: ಜಮೀನು ವಿವಾದ ಹಾಗೂ ಕೌಟುಂಬಿಕ ಕಲಹದಿಂದ ಹತಾಶನಾದ ವ್ಯಕ್ತಿ ತನ್ನ ಅಣ್ಣ ಹಾಗೂ ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಬಷೀರ್ ಅಹ್ಮದ್ (60) ಕೊಲೆ ಮಾಡಿದ ಆರೋಪಿ. ನಜೀರ್ ಸಾಬ್, ಮಹಬೂಬ್ ಸಾಬ್ ಮೃತ ದುರ್ದೈವಿಗಳು.
ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ನಿವಾಸಿ, ಆರೋಪಿ ಬಷೀರ್ ಅಹ್ಮದ್ನನ್ನು ತೊರೆದು ಪತ್ನಿ ಶಾಹೀದ್ ಕಳೆದ ಏಳು ವರ್ಷಗಳಿಂದ ಮಕ್ಕಳೊಂದಿಗೆ ಬಾಗೇಪಲ್ಲಿ ಪಟ್ಟಣದಲ್ಲಿ ವಾಸವಾಗಿದ್ದಾಳೆ. ಇದರಿಂದ ಆರೋಪಿ ಬಷೀರ್ ಅಹ್ಮದ್ ಕೋಪಗೊಂಡಿದ್ದಾನೆ. ಪತ್ನಿ ಶಾಹೀದ್ ದೂರವಾಗಲು ಅಣ್ಣ ಮಹಬೂಬ್ ಸಾಬ್ ಮತ್ತು ಆತನ ಮಗ ನಜೀರ್ ಸಾಬ್ ಕಾರಣ ಎಂದು ಅನುಮಾನಿಸಿದ್ದಾನೆ.
ಇದೇ ಅನುಮಾನದಿಂದ ಬಷೀರ್ ಅಹ್ಮದ್ ಇಂದು (ಜು.24) ಬೆಳಗಿನ ಜಾವ 5.30ರ ಸಮಯದಲ್ಲಿ ನಮಾಜ್ಗೆ ಹೊರಟಿದ್ದ ತನ್ನ ಅಣ್ಣನ ಮಗ ನಜೀರ್ ಸಾಬ್ ಮೇಲೆ ಗುಂಡಿನ ದಾಳಿ ನಡೆಸಿ ಮಚ್ಚಿನಿಂದ ಹಲ್ಲೆ ಕೊಲೆ ಮಾಡಿದ್ದಾನೆ. ಬಳಿಕ ಮನೆಯ ವರಾಂಡಾದಲ್ಲಿ ಮಲಗಿದ್ದ ಅಣ್ಣ ಮಹಬೂಬ್ ಸಾಬ್ಗೆ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು. ಇದರಿಂದ ಗಂಭಿರವಾಗಿ ಗಾಯಗೊಂಡ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಬೂಬ್ ಸಾಬ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಅರ್ಚಕ ದೇವೇಂದ್ರಪ್ಪಜ್ಜ ಕೊಲೆ ಕೇಸ್ ಭೇದಿಸಿದ ಹುಬ್ಬಳ್ಳಿ ಪೊಲೀಸ್: 24 ಗಂಟೆಗಳಲ್ಲಿ ಆರೋಪಿ ಅರೆಸ್ಟ್
ಎರಡು ಕೊಲೆಗಳನ್ನು ಮಾಡಿದ ಬಳಿಕ ಬಾಗೆಪಲ್ಲಿದ್ದ ಪತ್ನಿ ಮನೆಗೆ ಬಷೀರ್ ಅಹ್ಮದ್ ಹೋಗಿದ್ದಾನೆ. ಅಲ್ಲಿ ಪತ್ನಿಗೆ ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಾನೆ. ಅಷ್ಟೊತ್ತಿಗೆ ಹಂಪಸಂದ್ರ ಗ್ರಾಮದಿಂದ ಸಂಬಂಧಿಕರು ಶಾಹಿದಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಭಯಭೀತಳಾದ ಆರೋಪಿ ಪತ್ನಿ ಶಾಹಿದಾ ಮನೆ ಬಾಗಿಲು ತೆಗೆದಿಲ್ಲ. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಬಾಗೇಪಲ್ಲಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದರಿಂದ ಆರೋಪಿಯ ಪತ್ನಿ ಶಾಹಿದಾ ಜೀವ ಉಳಿದಿದೆ.
ಮೆಹಬೂಬ್ ಸಾಬ್ ಹಾಗೂ ಆರೋಪಿ ಬಷೀರ್ ಅಹ್ಮದ್, ಮದ್ಯೆ ಆಸ್ತಿ ವಿವಾದ, ಇದೇ ವಿಚಾರದಲ್ಲಿ ಆರೋಪಿಯ ಜೊತೆ ಮೃತರು ಪತ್ನಿಯನ್ನ ದೂರ ಮಾಡಿದ್ದಾರೆ ಎಂಬ ಕೋಪ ಬಷೀರ್ ಅಹ್ಮದ್ಗೆ ಇತ್ತು. ಜಮೀನು ವಿವಾದ ಹಾಗೂ ಕೌಟುಂಬಿಕ ದ್ವೇಷದಿಂದ ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಸದ್ಯಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ