ಲೇಡಿಸ್ ಪಿಜಿಯಲ್ಲಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್.. ಕೊಲೆಗಾರನ ಸುಳಿವು ಪತ್ತೆ, ಯಾರು ಗೊತ್ತಾ?
ಬೆಂಗಳೂರಿನ ಕೋರಮಂಗಲದ ವಿ.ಆರ್ ಲೇಔಟ್‌ನ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಮಾಡಲಾಗಿದೆ. ನಿನ್ನೆ (ಜುಲೈ 23) ರಾತ್ರಿ 11.10 ರಿಂದ 11.30 ಸುಮಾರಿಗೆ ಯುವತಿಯ ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಮೃತ ಯುವತಿಯನ್ನು ಬಿಹಾರ ಮೂಲದ ಕೃತಿ ಕುಮಾರಿ ಎಂದು ಗುರುತಿಸಲಾಗಿದೆ. ಇನ್ನು ಮಧ್ಯರಾತ್ರಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿದ್ಯಾರು ಎನ್ನುವ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಬೆಂಗಳೂರು, (ಜುಲೈ 24): ಬೆಂಗಳೂರಿನ ಕೋರಮಂಗಲದಲ್ಲಿರುವ ಲೇಡಿಸ್ ಪಿಜಿಗೆ ನುಗ್ಗಿದ ವ್ಯಕ್ತಿಯೊಬ್ಬ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಚ್ಚಿ ಬೀಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಕೊಲೆಗಾರನ ಮಹತ್ವದ ಸುಳಿವು ಸಿಕ್ಕಿದೆ. ನಿನ್ನೆ(ಜುಲೈ 23) ಮಧ್ಯರಾತ್ರಿ ಕೋರಮಂಗಳದ ಪಿಜಿಯಲ್ಲಿ ಕೃತಿ ಕುಮಾರಿ (24) ಎನ್ನುವ ಬಿಹಾರದ ಯುವತಿಯ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಎಂದು ತಿಳಿದುಬಂದಿದೆ.
ನಿನ್ನೆ (ಜುಲೈ 23) ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ಲೇಡಿಸ್ ಪಿಜಿಯಲ್ಲಿ ಕತ್ತು ಕೊಯ್ದು ಯುವತಿಯ ಕೊಲೆ, ಆರೋಪಿಗಾಗಿ ಹುಡುಕಾಟ
ಇನ್ನು ಕೃತಿಯ ರೂಮ್ಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ. ಕೊರಮಂಗಲ ಪೊಲೀಸರು ಸದ್ಯ ಆರೋಪಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕೃತಿ ಪಿಜಿಗೆ ಸೇರಿದ್ದರು. ಆಕೆ ಪಿಜಿಗೆ ಆಗಮಿಸುವ ವೇಳೆಯೂ ಈ ಯುವಕ ಲಗೇಜ್ ತೆಗದುಕೊಂಡು ಬಂದಿದ್ದ. ಆಗ ಯುವಕನನ್ನು ಒಳ ಬಿಡುವುದಿಲ್ಲ ಎಂದು ಪಿಜಿ ಸೆಕ್ಯೂರಿಟಿ ತಡೆದಿದ್ದರು. ಪಿಜಿ ಸೆಕ್ಯುರಿಟಿ ಬಳಿ, ಆತ ತನ್ನ ಸಹೋದರ ಎಂದು ಹೇಳಿ ಬೇಗ ಕಳುಹಿಸುತ್ತೇನೆ ಎಂದು ಕೃತಿ ಒಳ ಕರೆದುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಯುವತಿ ಕೃತಿ ಕುಮಾರಿ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಆಕೆಯ ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಕೃತಿ ಕುಮಾರಿ ಯಾರಿಗೆ ಕಾಲ್ ಮಾಡಿದ್ದರು. ಯಾವ, ಯಾವ ನಂಬರ್‌ನಿಂದ ಈಕೆಗೆ ಕಾಲ್ ಬಂದಿದೆ. ಇದರ ಜೊತೆಗೆ ಪಿಜಿಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಕೊಲೆಯಾದ ಯುವತಿ ಎಲ್ಲಿ ಹೋಗಿದ್ದಾಳೆ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಕೊಲೆಗಾರನ ಬಂಧನಕ್ಕೆ ಕೋರಮಂಗಲ ಪೊಲೀಸರು ಮೂರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.