ಸಮಾಜ ಕಲ್ಯಾಣ ಇಲಾಖೆ ವೈಫಲ್ಯದಿಂದ ಕೂಡಿದೆ: ಕಾಂಗ್ರೆಸ್​ ಶಾಸಕ ನಾಗೇಂದ್ರ ಸ್ವಾಮಿ

ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್​ ಶಾಸಕ ನರೇಂದ್ರ ಸ್ವಾಮಿ ಸಮಾಜ ಕಲ್ಯಾಣ ಇಲಾಖೆ ಆಡಳಿತ ವೈಫಲ್ಯದಿಂದ ಕೂಡಿದೆ ಎಂದು ಸದನದಲ್ಲಿ ಬಹಿರಂಗವಾಗಿ ಹೇಳಿದರು. ಇದರಿಂದ ಸರ್ಕಾರಕ್ಕೆ ಇರಿಸುಮುರಿಸಾಯಿತು.

ಸಮಾಜ ಕಲ್ಯಾಣ ಇಲಾಖೆ ವೈಫಲ್ಯದಿಂದ ಕೂಡಿದೆ: ಕಾಂಗ್ರೆಸ್​ ಶಾಸಕ ನಾಗೇಂದ್ರ ಸ್ವಾಮಿ
ಕಾಂಗ್ರೆಸ್​ ಶಾಸಕ ನಾಗೇಂದ್ರಸ್ವಾಮಿ
Follow us
ಕಿರಣ್​ ಹನಿಯಡ್ಕ
| Updated By: ವಿವೇಕ ಬಿರಾದಾರ

Updated on: Jul 24, 2024 | 2:58 PM

ಬೆಂಗಳೂರು, ಜುಲೈ 24: ಕರ್ನಾಟಕ ವಿಧಾನಮಂಡಲ ಅಧಿವೇಶನ (Karnataka Legislature Session) ನಡೆಯುತ್ತಿದ್ದು, ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್​​ ಶಾಸಕರೇ (Congress MLA) ಸರ್ಕಾರದ ಇಲಾಖೆಯೊಂದರ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಸಚಿವರು ಮುಜುಗುರ ಪಡುವಂತಾಯಿತು. ಸಮಾಜ ಕಲ್ಯಾಣ ಇಲಾಖೆ (Karnataka Social Welfare Department) ಆಡಳಿತ ವೈಫಲ್ಯದಿಂದ ಕೂಡಿದೆ ಎಂದು ಕಾಂಗ್ರೆಸ್​ ಶಾಸಕ ನರೇಂದ್ರ ಸ್ವಾಮಿ (P. M. Narendraswamy) ಸದನದಲ್ಲಿ ಬಹಿರಂಗವಾಗಿ ಹೇಳಿದರು. ಇದರಿಂದ ಸರ್ಕಾರಕ್ಕೆ ಇರಿಸುಮುರಿಸಾಯಿತು.

ಸರ್ಕಾರದ ವಿರುದ್ಧ ಕಾಂಗ್ರೆಸ್​ ಶಾಸಕರಿಂದಲೇ ಅಸಮಾಧಾನ

ವಸತಿ ಶಾಲೆಗಳ ನಿರ್ವಹಣೆ ಕುರಿತು ಕೆಜಿಎಫ್ ವಿಧಾನಸಭಾ ಕ್ಷೇತ್ರ ಶಾಸಕಿ ರೂಪಕಲಾ ಬೇಸರ ವ್ಯಕ್ತಪಡಿಸಿದರು. ವಸತಿ ಶಾಲೆಗಳಲ್ಲಿ ವಾರ್ಡನ್​ಗಳಿಲ್ಲ, ಸಿಬ್ಬಂದಿಗಳಿಲ್ಲ. ಹಾಸ್ಟೆಲ್​ಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಈ ಬಗ್ಗೆ ತಹಶೀಲ್ದಾರ್​ಗಳು ಜಿಲ್ಲಾಧಿಕಾರಿಗಳಿಗೆ ಸರಿಯಾಗಿ ವರದಿ ನೀಡುತ್ತಿಲ್ಲ. ಹೆಣ್ಣು ಮಕ್ಕಳು ಇರುವ ವಸತಿ ಶಾಲೆಗಳಿಗೆ ಸುರಕ್ಷತೆಯೇ ಇಲ್ಲ. ಗುಣಮಟ್ಟದ ಆಹಾರವೂ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಆಡಳಿತದಲ್ಲಿನ ಲೋಕಪದೋಷಗಳ ಬಗ್ಗೆ ಸದನಕ್ಕೆ ತಿಳಿಸಿದರು.

ಸಮುದಾಯ ಭವನಕ್ಕೆ 1300 ಕೋಟಿ ಕೊಟ್ಟಿದ್ದಾರೆ, ಆದರೆ ವಸತಿ ಶಾಲೆಗಳ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಇದರಲ್ಲಿ ಸರ್ಕಾರದಿಂದ ಮಲತಾಯಿ ಧೋರಣೆ ಮಾಡುತ್ತಿದೆ. ಜಿಲ್ಲಾ ಹಂತದಲ್ಲೇ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಬಡವರ ಮಕ್ಕಳ ಮೇಲೆ ಅಧಿಕಾರಿಗಳಿಗೆ ಗೌರವ ಇಲ್ಲ. ಬಾಡಿಗೆ ಕಟ್ಟಡಗಳಲ್ಲಿ ವಸತಿ ನಿಲಯಗಳಿವೆ. ಸರ್ಕಾರಿ ನಿವೇಶನಗಳಲ್ಲಿ ವಸತಿ ಶಾಲೆಗಳಿರಬೇಕು. ಸುರಕ್ಷಿತ ಕಟ್ಟಡ ಬೇಕೆಂದು ಶಾಸಕಿ ರೂಪಕಲಾ ಆಗ್ರಹಿಸಿದರು.

ಇದನ್ನೂ ಓದಿ: ಅಮಾನತಿನಲ್ಲಿದ್ದ ಅಧಿಕಾರಿಯಿಂದ ಇಡಿ ವಿರುದ್ಧ ದೂರು ಕೊಡಿಸಿ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಇನ್ನಿಲ್ಲದ ಸಾಹಸ: ಬಿಜೆಪಿ 

ಈ ವೇಳೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತನಾಡಿ, 20 ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಹಾವೇರಿ ಕ್ಷೇತ್ರದಲ್ಲೂ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಆಘಾತಕಾರಿ ಸಂಗತಿ. ಮಕ್ಕಳ ತಲೆಯಲ್ಲಿ ಆತ್ಮಹತ್ಯೆಯಂತಹ ವಿಚಾರಗಳು ಬರುವುದು ಕೆಟ್ಟ ಸಂಗತಿ. ಇದನ್ನು ತಡೆಯಬೇಕು. ಇದನ್ನು ತಡೆಯಲು ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಬೇಕು. ಆ ವಯಸ್ಸಲ್ಲಿ ಮಕ್ಕಳು ಆತ್ಮಹತ್ಯೆ ಹಂತಕ್ಕೆ ಹೋಗುತ್ತಾರೆ ಅಂದರೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಡಿಡಿಗಳೇ ಕಂಟ್ರಾಕ್ಟರ್ ಆಗಿದ್ದಾರೆ, ಹಣ ಹೊಡೆಯಲು ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್​ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಇದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ವರದಿ ಮಂಡನೆ ಮಾಡುತ್ತಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಡಳಿತ ವೈಫಲ್ಯತೆ ಇದೆ ಎಂದು ಅಸಮಾಧಾನ ಹೊರ ಹಾಕಿದರು.

ಐದು ವರ್ಷಗಳಲ್ಲಿ 92 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಆಗ್ರಹಿಸಿದರು.

ನಮ್ಮ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಸತಿ ಶಾಲೆಗಳಿಲ್ಲ. ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಹಾಕಿದ್ದಾರೆ, ಆದರೆ ನಾನು ಶಾಸಕನಾಗಿ ಒಂದು ಸೀಟು ಕೊಡಿಸಲು ಆಗಿಲ್ಲ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸದನದಲ್ಲಿ ಬೇಸರ ವ್ಯಕ್ತಪಡಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಉತ್ತರ

ಸಮಾಜ ಕಲ್ಯಾಣ ಇಲಾಖೆಯನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಹಿಂದೆ ನಾನು ಸಚಿವನಾಗಿ, ಕಮಿಟಿ ರಚಿಸಿ ಆಡಳಿತ ಹೇಗಿರಬೇಕೆಂದು ನೋಡಿಕೊಂಡಿದ್ದೆ. ಸದನ ಎಲ್ಲ ಸದಸ್ಯರು ಒಂದು ತೀರ್ಮಾನಕ್ಕೆ ಬನ್ನಿ, ನಮಗೆ ಸಮುದಾಯ ಭವನಗಳು ಬೇಡ, ಸಮುದಾಯಕ್ಕೆ ಕೊಡುವ ಹಣವನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡೋಣ ಎಂದು ತೀರ್ಮಾನ ಮಾಡಿ. ನೀವು ಎಲ್ಲರೂ ಓಕೆ ಎಂದರೆ ಸಮುದಾಯಕ್ಕೆ ಹೋಗುವ ಹಣವನ್ನು ವಸತಿ ನಿಲಯಗಳಿಗೆ ನೀಡೋಣ ಎಂದು ಹೇಳಿದರು.

ನಾನು ಹಿಂದೆ ಸಚಿವನಾಗಿದ್ದಾಗ 14 ಸಾವಿರ ಸಮುದಾಯ ಭವನ ಕ್ಯಾನ್ಸಲ್ ಮಾಡಿ ಅದನ್ನೆಲ್ಲ ಎಸ್ಸಿ, ಎಸ್ಟಿ ವಸತಿ ನಿಲಯಗಳಿಗೆ ನೀಡಿದ್ದೇನೆ. ಸಮುದಾಯ ಭವನಕ್ಕೆ ನಾವು ತಗೆದುಕೊಂಡು ಹೋಗುವುದು ಬರೀ ನಮ್ಮ ರಾಜಕೀಯ ಅನುಕೂಲಕ್ಕಷ್ಟೇ. ಅದಕ್ಕಾಗಿ ಈ ನಿರ್ಧಾರವನ್ನು ತೋರುವ ಧೈರ್ಯ ಸದನ ಮಾಡುತ್ತಾ ಎಂದು ಪ್ರಶ್ನಿಸಿದರು.

ಮೊನ್ನೆ ಎಸ್ ಸಿಇಪಿ ಟಿಎಸ್ಪಿ ಸಭೆಯಲ್ಲಿ ಬಾಡಿಗೆ ಬಿಲ್ಡಿಂಗ್​ಗಳಲ್ಲಿರುವ ವಸತಿ ವಸತಿ ನಿಲಯಗಳನ್ನು ಸರ್ಕಾರಿ ನಿವೇಶನಗಳಲ್ಲಿ ನಡೆಸುವ ಬಗ್ಗೆ ತೀರ್ಮಾನ ಆಗಿದೆ. ಸಿಬ್ಬಂದಿಗಳ ನೇಮಕಾತಿ ಬಗ್ಗೆ ಕ್ರಮ ವಹಿಸುತ್ತೇವೆ. ಸಿಇಒಗಳಿಗೆ ಫೀಲ್ಡ್ ವಿಸಿಟ್​ಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳು ಕೂಡ ವಸತಿ ವಸತಿ ನಿಲಯಕ್ಕೆ ಭೇಟಿ ನೀಡಿದ್ದರು. ಣಮಟ್ಟದ ಶಿಕ್ಷಣ ಸಿಗುತ್ತಿರುವುದರಿಂದ ಮೊನ್ನೆ ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಆರೋಗ್ಯ, ಸುರಕ್ಷತೆ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಅಗತ್ಯ ಕ್ರಮ ವಹಿಸುತ್ತೇವೆ ಎಂದು ಉತ್ತರ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ