ಅರ್ಚಕ ದೇವೇಂದ್ರಪ್ಪಜ್ಜ ಕೊಲೆ ಕೇಸ್ ಭೇದಿಸಿದ ಹುಬ್ಬಳ್ಳಿ ಪೊಲೀಸ್: 24 ಗಂಟೆಗಳಲ್ಲಿ ಆರೋಪಿ ಅರೆಸ್ಟ್
ಹುಬ್ಬಳ್ಳಿಯ ಅರ್ಚಕ ದೇವೇಂದ್ರಪ್ಪಜ್ಜ ಕೊಲೆ ಆರೋಪಿಯನ್ನು ನಿನ್ನೆ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಸುಣಗಾರ ಬಂಧಿತ ಆರೋಪಿ. 24 ಗಂಟೆಯಲ್ಲಿ ಹು-ಧಾ ಪೊಲೀಸ್ರಿಂದ ಆರೋಪಿಯನ್ನು ಬಂಧಿಸಲಾಗಿದೆ. ಸಂತೋಷ ಕಳೆದ 6 ವರ್ಷಗಳಿಂದ ದೇವೇಂದ್ರಪ್ಪಜ್ಜ ನನ್ನು ಕೊಲ್ಲಲು ಸ್ಕೇಚ್ ಹಾಕಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
ಹುಬ್ಬಳ್ಳಿ, ಜುಲೈ 23: ಹಾವಿನ ದ್ವೇಷ ಹನ್ನೆರಡು ವರ್ಷ, ನನ್ನ ರೋಷ ನೂರು ವರ್ಷ. ಇದು ನಾಗರಹಾವು ಸಿನಿಮಾದ ಒಂದು ಹಾಡು. ಅವತ್ತಿಗೂ, ಇವತ್ತಿಗೂ ಈ ಹಾಡು ತುಂಬಾ ಅರ್ಥಗರ್ಭಿತವಾಗಿದೆ. ನಾಗರ ಹಾವು ವಿಷ್ಣುವರ್ಧನ್ ಇಮೇಜ್ ಬದಲಿಸಿದ ಸಿನಿಮಾ. ಸಾಕಷ್ಟು ಹೆಸರು ತಂದು ಕೊಟ್ಟ ಸಿನಿಮಾ. ಇವಾಗ ಯಾಕೆ ಈ ಸಿನಿಮಾ ಬಗ್ಗೆ ಹೇಳತೀದಾರೆ ಅಂತೀರಾ. ಅಲ್ಲೆ ಇರೋದು ಅಸಲಿ ಕಥೆ. 26 ವರ್ಷದ ಹಿಂದಿನ ದ್ವೇಷಕ್ಕೆ ಅರ್ಚಕರೊಬ್ಬರ (Archaka) ಕೊಲೆಯಾಗಿದೆ. ಕೊಲೆ ಮಾಡಿದ ಆರೋಪಿ 26 ವರ್ಷದ ಸೇಡಿನ ಕಥೆ ಬಿಚ್ಚಿಟ್ಟಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ (Hubballi) ನಡೆದ ಅರ್ಚಕನ ಕೊಲೆಗೆ ಕಾರಣ ರೀವಿಲ್ ಆಗಿದೆ. ಆರೋಪಿನೆ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾನೆ. 26 ವರ್ಷದ ದ್ವೇಷ, ಪ್ರೀತಿ, ಮಾಟ ಮಂತ್ರ ಇವೆಲ್ಲವೂ ಅರ್ಚಕನ ಕೊಲೆಗೆ ಕಾರಣವಾಗಿದೆ.
ಕೇವಲ 24 ಗಂಟೆಯಲ್ಲಿ ಆರೋಪಿ ಬಂಧನ
ಹುಬ್ಬಳ್ಳಿಯ ಈಶ್ವರ ನಗರದಲ್ಲಿನ ನಡೆದಿದ್ದ ವೈಷ್ಣವಿ ದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪಜ್ಜನ ಕೊಲೆ ಮಾಡಿದ ಆರೋಪಿಯನ್ನು ಕೇವಲ 24 ಗಂಟೆಯಲ್ಲಿ ಬಂಧನ ಮಾಡುವಲ್ಲಿ ಹು-ಧಾ ಕಮಿಷನರೇಟ್’ನ ಪೊಲೀಸರು ಕೊನೆಗೂ ಸಕ್ಸಸ್ ಆಗಿದ್ದು ಕೊಲೆ ಆರೋಪಿ ಕಮರಿಪೇಟ್ ಏರಿಯಾದ 44 ವರ್ಷದ ಸಂತೋಷ್ ಸುಣಗಾರ. ರವಿವಾರ ಧಾರವಾಡದಲ್ಲಿ ನಡೆದ ವೀರಶೈವ ಲಿಂಗಾಯತ ಚುನಾವಣೆಯಲ್ಲಿ ಮತ ಹಾಕಿ ಈಶ್ವರ ನಗರದಲ್ಲಿನ ವೈಷ್ಣವಿ ದೇವಸ್ಥಾನಕ್ಕೆ ಬಂದಿದ್ದ ದೇವೇಂದ್ರಪ್ಪಜ್ಜ ರಾತ್ರಿ 8 ಗಂಟೆಯ ಸುಮಾರಿಗೆ ದೇವಸ್ಥಾನದ ಹಿಂಬದಿಯ ಗೇಟ್ ಹಾಕಲು ಹೋದಾಗ ಅಪರಿಚಿತ ದೇವೇಂದ್ರಪ್ಪಜ್ಜನ ಹೊಟ್ಟೆ ಹಾಗೂ ಬೆನ್ನು ಸೇರಿದಂತೆ ದೇಹದ ಐದಾರು ಕಡೆಯಲ್ಲಿ ಚಾಕು ಇರಿದು ಪರಾರಿಯಾಗಿದ್ದ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಧರ್ಮಾಧಿಕಾರಿಯ ಹೊಟ್ಟೆ ಬಗೆದ ದುಷ್ಕರ್ಮಿಗಳು: ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ?
ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ದೇವೇಂದ್ರಪ್ಪಜ್ಜನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಲೆಗರನ ಪತ್ತೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಕೊಲೆ ಮಾಡಿದ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಹಾಗೂ ವಿದ್ಯುತ್ತ ದೀಪ ಇಲ್ಲದೆ ಇರೋದ್ರಿಂದ ಆರೋಪಿಯ ಸುಳಿವನ್ನು ಹಚ್ಚೋದು ಕೂಡಾ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಆದ್ರೂ ಕೂಡಾ ಕಮಿಷನರ್ ಮಾರ್ಗದರ್ಶನದಲ್ಲಿ ಹಲವು ಆಯಾಮಗಳಿಂದ ಪೊಲೀಸರು ತನಿಖೆ ಶುರು ಮಾಡಿದಾಗ ಹಲವು, ಬೆಳಕಿನ ಸಮಯದಲ್ಲಿ ಆರೋಪಿ ಸಂತೋಷ ಓಡಾಡಿದ ದ್ರಶ್ಯ ಕೆಲವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.
ಇತ್ತ ಕೊಲೆ ಮಾಡಿದ ಆರೋಪಿ ಸಂತೋಷ ಸುಣಗಾರ ಕಮರಿಪೇಟ್ ನಲ್ಲಿನ ತನ್ನ ಮನೆಗೆ ಹೋಗಿ ಆರಾಮಾಗಿ ಮಲಗಿದ್ದ, ಮಾರನೆ ದಿನ ಎದ್ದು ತನ್ನ ಹೆಂಡತಿಗೆ ಕೂಡಾ ತಾನು ಮಾಡಿದ ಕೊಲೆಯ ಬಗ್ಗೆ ಹೇಳಿದಾಗ ಹೆಂಡತಿ ಕೂಡಾ ಯಾಕೆ ಈ ರೀತಿಯಾಗಿ ಮಾಡಿದ್ರಿ ಅಂತಾ ಬೈದಿದ್ದಾಳೆ. ಅಷ್ಟೋತ್ತಿಗಾಗಲೇ ಆರೋಪಿಯ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದರು. ಸೋಮವಾರ ಸಂಜೆ ಚೆನ್ನಮ್ಮ ಸರ್ಕಲ್ ಬಳಿ ಬಂದಿದ್ದ ಸಂತೋಷ್ ಪರಿಚಯದವರ ಬಳಿ ಹಣವನ್ನು ಪಡೆದು ಬಾರ್ಗೆ ಸಾರಾಯಿ ಕುಡಿಯಲು ಹೋದಾಗ ಪೊಲೀಸರು ಆತನನ್ನು ಬಂಧನ ಮಾಡಿದ್ದಾರೆ.
6 ವರ್ಷಗಳಿಂದ ಸ್ಕೇಚ್ ಹಾಕಿದ್ದ ಆರೋಪಿ
ಸದ್ಯ ಕೊಲೆಯ ಆರೋಪಿ ಸಂತೋಷ್ ಹೇಳುವ ಪ್ರಕಾರ ಕೊಲೆಯಾದ ದೇವೇಂದ್ರಪ್ಪಜ್ಜ ಮಾಟ, ಮಂತ್ರ ಮಾಡಿ ನಮ್ಮ ಮನೆಯನ್ನು ಹಾಳು ಮಾಡಿದ್ದ. ನನ್ನ ಅಣ್ಣಂದಿರ ಸಾವಿಗೆ ಆತ ಮಾಡಿದ ಮಾಟ, ಮಂತ್ರ ಕಾರಣ. ನಮ್ಮ ಕುಟುಂಬ ಹಾಳಾಗಲು ಈತನೇ ಕಾರಣ ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡಿದ್ದ ಸಂತೋಷ ಕಳೆದ 6 ವರ್ಷಗಳಿಂದ ದೇವೇಂದ್ರಪ್ಪಜ್ಜ ನನ್ನು ಕೊಲ್ಲಲು ಸ್ಕೇಚ್ ಹಾಕಿದ್ದ. ಅದೇ ರೀತಿ 2022 ರಲ್ಲಿ ವಿದ್ಯಾನಗರದಲ್ಲಿ ಆತನ ಮೇಲೆ ಅಟ್ಯಾಕ್ ಮಾಡಿದಾಗ ದೇವೇಂದ್ರಪ್ಪಜ್ಜ ಪಾರಾಗಿದ್ದ ಆದ್ರೆ ಕಳೆದ ರವಿವಾರ ರಾತ್ರಿ ಸಂತೋಷ್ ಹಾಕಿದ್ದ ಸ್ಕೆಚ್’ಗೆ ದೇವೇಂದ್ರಪ್ಪಜ್ಜ ಕೊಲೆಯಾಗಿದ್ದರು.
ಪ್ರೀತಿಸಿದ ಹುಡುಗಿ ದೂರ
ಅರ್ಚಕನ ಕೊಲೆ ಪ್ರಕರಣವನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿದ್ರು. ಕಳೆದ ಎರಡು ದಿನಗಳಿಂದ ಒಟ್ಟು 180 ಸಿಸಿ ಕ್ಯಾಮೆರಾಗಳನ್ನ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ನಿನ್ನೆ ರಾತ್ರಿ ಪೊಲೀಸರು ಶಂಕಿತ ವ್ಯಕ್ತಿಯ ಭಾವಚಿತ್ರ ಕೂಡಾ ಬಿಡುಗಡೆ ಮಾಡಿದ್ದರು. ಇದಾದ ಬಳಿಕ ರಾತ್ರಿ 11 ಗಂಟೆಗೆ ಪೊಲೀಸರು ಆರೋಪಿನನ್ನ ಅರೆಸ್ಟ್ ಮಾಡಿದ್ದಾರೆ. ಬಂಧನಕ್ಕೂ ಮುನ್ನ ಮಾತನಾಡಿದ ಆರೋಪಿ ಅರ್ಚಕ ದೇವೆಂದ್ರಪ್ಪಜ್ಜ ಮಾಟ ಮಂತ್ರದ ವಿಚಾರ ಬಹಿರಂಗ ಮಾಡಿದ್ದಾನೆ. ಇದಲ್ಲದೆ 1998 ರಲ್ಲಿ ಆರೋಪಿ ಒಂದು ಹುಡುಗಿಯನ್ನ ಪ್ರೀತಿ ಮಾಡ್ತಿದ್ದನಂತೆ. ಆ ಹುಡುಗಿಯನ್ನ ದೂರ ಮಾಡಿದ್ದು ಇದೇ ಅರ್ಚಕ. ಹೀಗಾಗಿ ಆರೋಪಿ ಅರ್ಚಕನ ಕೊಲೆ ಮಾಡಲು ಸ್ಕೆಚ್ ಹಾಕುತ್ತಾನೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಪೂಜಾರಿಯ ಬರ್ಬರ ಕೊಲೆ
ಕಳೆದ ಆರು ವರ್ಷಗಳಿಂದ ಆರ್ಚಕನ ಕೊಲೆ ಮಾಡಲು ಪ್ರಯತ್ನ ಮಾಡ್ತಾನೆ. 2022 ರಲ್ಲಿ ವಿದ್ಯಾನಗರದ ಅರ್ಚಕನ ಮನೆ ಮುಂದೆ ಸಂತೋಷ್ ಸ್ಕೆಚ್ ಹಾಕಿದ್ದ, ಆದ್ರೆ ಅದೃಷ್ಟವಶಾತ್ ಬಚಾವ್ ಆಗಿದ್ದು ಅದಕ್ಕೆ ಕಾರಣ ಚಾಕು. ಆ ಸಮಯದಲ್ಲಿ ಕಡಿಮೆ ದುಡ್ಡಿನಿಂದ ಚಾಕು ಖರೀದಿ ಮಾಡಿದ್ದ, ಚಾಕು ಹಾಕೋ ಸಮಯದಲ್ಲಿ ಅದು ಮುರಿದು ಹೋಗಿದೆ. ಈ ಕಾರಣಕ್ಕೆ ಅರ್ಚಕ ಬಚಾವ್ ಆಗಿದ್ದ. ಅಲ್ಲಿಂದ ಇಲ್ಲಿವರೆಗೂ ಆತನ ಫಾಲೋ ಮಾಡಿದ ಸಂತೋಷ್ ಅರ್ಚಕನ ಪ್ರತಿಯೊಂದು ಮೊಮೆಂಟ್ ಆಬ್ಸರ್ವ್ ಮಾಡಿದ್ದ, ಅದರಂತೆ ಕಳೆದ ಎರಡು ದಿನಗಳ ಹಿಂದೆ ಕೊಲೆ ಮಾಡಲು ಸ್ಕೆಚ್ ಹಾಕಿ ಆತ ದೇವಸ್ಥಾನದಿಂದ ಹೊರಗೆ ಬರುತ್ತಲೆ ಚಾಕು ಹಾಕಿ ಪರಾರಿಯಾಗಿದ್ದ. ಈ ಬಾರಿ 250 ರೂ. ಕೊಟ್ಟು ಆತ ಚಾಕು ಖರೀದಿ ಮಾಡಿದ್ದನಂತೆ. ಈ ಚಾಕು ವಿಚಾರವನ್ನ ಹು-ಧಾ ಪೊಲೀಸ್ ಕಮೀಷನರ್ ಹೇಳಿದ್ದಾರೆ.
ಆರೋಪಿ ಪತ್ತೆ ಹಚ್ಚುವಲ್ಲಿ ಮಾಧ್ಯಮದ ಪಾತ್ರ
ಅರ್ಚಕನ ಕೊಲೆಯಾದ ಬಳಿಕ ಸಾಕಷ್ಟು ಅನುಮಾನ ಹುಟ್ಟಿಕೊಂಡಿದ್ದವು. ರಿಯಲ್ ಎಸ್ಟೇಟ್, ಬ್ಲಾಕ್ ಮ್ಯಾಜಿಕ್ ಕಾರಣ ಅನ್ನೋ ಅನುಮಾನ ಇತ್ತು. ಆದರೆ ಇದೀಗ ಕೊಲೆಗೆ ನಿಖರ ಕಾರಣವನ್ನ ಆರೋಪಿ ಬಾಯಿ ಬಿಟ್ಟಿದ್ದು, ತನ್ನ ಪ್ರೀತಿಗೆ ಕೊಳ್ಳಿ ಇಟ್ಟ ಅರ್ಚಕನನ್ನ ಆರೋಪಿ ಸಂತೋಷ್ ಸಮಯ ಸಾಧಿಸಿ ಹೊಂಚು ಹಾಕಿ ಹೊಡೆದಿದ್ದಾನೆ. ಆರೋಪಿನ ಪತ್ತೆ ಹಚ್ಚುವಲ್ಲಿ ಮಾಧ್ಯಮದವರ ಪಾತ್ರವೂ ಇದೆ ಅನ್ನೋದನ್ನ ಸ್ವತಃ ಪೊಲೀಸ್ ಕಮೀಷನರ್ ಹೇಳಿದ್ದಾರೆ. ಖಾಸಗಿ ವಾಹಿನಿಯ ಕ್ಯಾಮೆರಾಮೆನ್ ಕೊಟ್ಟ ಮಾಹಿತಿ ಆರೋಪಿನ ಬಂಧನಕ್ಕೆ ನೆರವಾಗಿದೆ. ಸದ್ಯ ಕೊಲೆಯ ಆರೋಪಿಯನ್ನು ಹೆಡೆಮುರಿಗಟ್ಟಿದ್ದ ಹು-ಧಾ ಪೊಲೀಸ್ ಕಮಿಷನರ್ ಶಶಿಕುಮಾರ್ ಡಿಸಿಪಿಗಳಾದ ನಂದಗಾವಿ, ರವೀಶ್, ಎಸಿಪಿ ಶಿವಪ್ರಕಾಶ ನಾಯಕ ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯಾಚರಣೆಯಿಂದ 24 ಗಂಟೆಯಲ್ಲಿ ಬಂಧನ ಮಾಡಿದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.