ವಿದ್ಯುತ್ ಬಿಲ್ ಬಾಕಿ: ಖ್ಯಾತ ಗಾಯಕ ಭೀಮಸೇನ ಜೋಷಿ ರಂಗಮಂದಿರದಲ್ಲಿ ಕಗ್ಗತ್ತಲು!
ಅದು ಸಂಗೀತ ಲೋಕದಲ್ಲಿ ಅಲೆ ಎಬ್ಬಿಸಿದ ಖ್ಯಾತ ಗಾಯಕ ಭೀಮಸೇನ ಜೋಷಿ ಅವರ ನೆನಪಿಗೋಸ್ಕರ ಕಟ್ಟಿಸಿದ ರಂಗಮಂದಿರ. ರಾಜಧಾನಿ ಬೆಂಗಳೂರು ಹೊರತುಪಡಿಸಿ, ಉತ್ತರ ಕರ್ನಾಟಕ ಭಾಗದಲ್ಲಿ ಬೇರೆಲ್ಲೂ ಇರದ ಹೈಟೆಕ್ ರಂಗಮಂದಿರ ಅಂತಾನೇ ಫೇಮಸ್. ಇಂತಹ ಅತ್ಯಾಧುನಿಕ ರಂಗಮಂದಿರಕ್ಕೆ ಇದೀಗ ಗೃಹಣ ಹಿಡಿದಿದೆ. ಮಹಾನುಭಾವರ ಹೆಸರಿನಲ್ಲಿ ನಿರ್ಮಿಸಿದ ನೆನಪಿನ ಸ್ಮಾರಕ ಇದೀಗ ಕತ್ತಲಲ್ಲಿ ಮುಳಗಿದೆ. ವಿದ್ಯುತ್ ಫ್ರೀ ಸೇರಿ, ಉಚಿತ ಗ್ಯಾರಂಟಿಗಳನ್ನ ಕೊಟ್ಟಿರೋ ಸರ್ಕಾರ, ತನ್ನದೇ ಇಲಾಖೆಯ ಪವರ್ ಬಿಲ್ ಬಾಕಿ ಉಳಿಸಿಕೊಳ್ಳುವಷ್ಟು ದಿವಾಳಿ ಆಯಿತಾ?, ಎನ್ನುವ ಪ್ರಶ್ನೆ ಮೂಡುತ್ತಿದೆ. ಎರಡು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಂಗಮಂದಿರ ಕತ್ತಲಲ್ಲಿ ಮುಳುಗಿದೆ. ಇದು ಕಲಾರಸಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ, ಜು.23: ಎರಡು ತಿಂಗಳ ಹಿಂದೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಹೈಟೆಕ್ ರಂಗಮಂದಿರಲ್ಲಿ ಈಗ ಕಗ್ಗತ್ತಲು ಆವರಿಸಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಹೈಟೆಕ್ ರಂಗಮಂದಿಕ್ಕೆ ಲಕ್ಷ ಲಕ್ಷ ಆದಾಯ ಬಂದರೂ ವಿದ್ಯುತ್ ಬಿಲ್ ಕಟ್ಟದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹೌದು, ಹಿಂದೂಸ್ತಾನಿ ಸಂಗೀತದಲ್ಲಿ ಮಹಾನ್ ಸಾಧಕರೆಂದೇ ಹೆಸರು ಮಾಡಿರುವ, ಭಾರತರತ್ನ ಡಾ.ಭೀಮಸೇನ ಜೋಶಿ(Bhimsen Joshi) ಅವರು ಮುದ್ರಣ ಕಾಶಿ ಗದಗ ಜಿಲ್ಲೆಯವರು. ಇದೇ ಕಾರಣಕ್ಕೆ, ಪ್ರವಾಸೋದ್ಯಮ ಸಚಿವರೂ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೆಚ್.ಕೆ.ಪಾಟೀಲ್(HK Patil) ಅತ್ಯಂತ ಆಸಕ್ತಿ ವಹಿಸಿ, ಗದಗ ನಗರದ ಪರಿಸರ ಲೇಔಟ್ನಲ್ಲಿ, ಅವರ ಹೆಸರಿನಲ್ಲಿ ಅತ್ಯಾಧುನಿಕ ರಂಗಮಂದಿರವನ್ನ ನಿರ್ಮಿಸಿದ್ದಾರೆ.
ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹೈಟೆಕ್ ರಂಗಮಂದಿರ
ಕಳೆದ ವರ್ಷ 2023 ರ ಜೂನ್ನಲ್ಲಿ ಉದ್ಘಾಟನೆಯಾದ ಜಿಲ್ಲಾ ರಂಗಮಂದಿರ, ಒಂದೇ ವರ್ಷದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ದಾಳವಾಗಿದೆ. 8 ಕೋಟಿ 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ರಂಗಮಂದಿರ ಕಳೆದ ಹತ್ತು ತಿಂಗಳಿನಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಹಲವು ಬಾರಿ ಹೆಸ್ಕಾಂ ಅಧಿಕಾರಿಗಳು, ಸಂಬಂಧಿಸಿದ ಇಲಾಖೆಗಳಿಗೆ, ಬಿಲ್ ಕಟ್ಟುವಂತೆ ಸೂಚನೆ ನೀಡಿವೆ. ಇಷ್ಟಾಗಿಯೂ ಬಿಲ್ ಕಟ್ಟದೇ ಇರುವುದಕ್ಕೆ ರಂಗಮಂದಿರಕ್ಕೆ ಇರುವ ವಿದ್ಯುತ್ ಸಂಪರ್ಕವನ್ನ ಹೆಸ್ಕಾಂ ಇಲಾಖೆ ಕಡಿತಗೊಳಿಸಿದೆ. ಇದು ಕಲಾಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಭೀಮಸೇನ್ ಜೋಶಿ ಅವರಿಗೆ ಅವಮಾನ ಮಾಡುವ ಕೆಲಸ ಜಿಲ್ಲಾಡಳಿತ, ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಇಂದಿರಾ ಕ್ಯಾಂಟೀನ್ ಬಂದ್; ಗುತ್ತಿಗೆದಾರರಿಗೆ ಬರೋಬ್ಬರಿ 40 ಕೋಟಿ ಬಿಲ್ ಬಾಕಿ
ಇನ್ನು ರಂಗಮಂದಿರ ಹಸ್ತಾಂತರ ವಿಷಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿರ್ಮಿತಿ ಕೇಂದ್ರ ನಡುವೆ ಗುದ್ದಾಟ ನಡೆದಿದೆ. 2023ರಲ್ಲೇ ರಂಗಮಂದಿರ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಆಗಿದೆ. ನಿರ್ಮಿತಿ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಸ್ತಾಂತರ ಮಾಡಲು ಮುಂದಾಗಿದೆ. ಅದ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ವೀರಯ್ಯಸ್ವಾಮಿ ಹಸ್ತಾಂತರ ಮಾಡಿಕೊಳ್ಳದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದಾರೆ. ಇತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರು, ‘ರಂಗಮಂದಿರ ಕಾಮಗಾರಿ ಇನ್ನೂ ಪೂರ್ಣ ಆಗಿಲ್ಲ. ಪೂರ್ಣವಾದ ಬಳಿಕ ಹಸ್ತಾಂತರ ಮಾಡಿಕೊಳ್ತೀವಿ ಎಂದು ಹೇಳುತ್ತಿದ್ದಾರೆ.
ಎರಡು ಇಲಾಖೆಗಳ ಮಧ್ಯೆ ಹಗ್ಗ ಜಗ್ಗಾಟ; ವಿದ್ಯುತ್ ಬಿಲ್ ತುಂಬದೇ ಬೇಜವಾಬ್ದಾರಿ
ಕಳೆದ ಎಂಟು ತಿಂಗಳಿಂದ ಕಾರ್ಯಕ್ರಮಗಳಿಂದ ಬರುವ ಆದಾಯ ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಡೆಯುತ್ತಿದೆ. ಆದರೂ ಹೆಸ್ಕಾಂನ 1 ಲಕ್ಷ 80 ಸಾವಿರ ವಿದ್ಯುತ್ ಬಿಲ್ ತುಂಬದೇ ಬೇಜವಾಬ್ದಾರಿ ತೋರುತ್ತಿದೆ. ಈ ಎರಡು ಇಲಾಖೆಗಳ ಮಧ್ಯೆ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಗದಗ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಲ್ ಕಟ್ಟುವ ವಿಷಯದಲ್ಲೂ, ಎರಡೂ ಇಲಾಖೆಗಳು ತಿಕ್ಕಾಟ ನಡೆಸುತ್ತಿವೆಯಂತೆ. ಅಲ್ಪ ಅವಧಿಯಲ್ಲಿಯೇ, ಹೆಚ್.ಕೆ.ಪಾಟೀಲ್ರ ಕನಸಿನ ಕೂಸು ಅಧಿಕಾರಿಗಳಿಗೆ ಬೇಡವಾಯಿತಾ ಎನ್ನುವ ಮಾತು ಕೇಳಿ ಬರುತ್ತಿದೆ. ಆದ್ರೆ, ಈ ಬಗ್ಗೆ ನಿರ್ಮಿತಿ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಒಬ್ಬರ ವಿರುದ್ಧ ಒಬ್ಬರು ಬೊಟ್ಟು ಮಾಡುತ್ತಿದ್ದಾರೆ.
ಇದನ್ನೂ ಓದಿ:2 ತಿಂಗಳಿಂದ ಹಂಪಿ ಬೈ ನೈಟ್ ಪ್ರದರ್ಶನ ಸ್ಥಗಿತ, 70 ಲಕ್ಷ ರೂ ಬಿಲ್ ಬಾಕಿ
ಈ ಕುರಿತು ಮಾತನಾಡಿದ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶಿರೋಳ, ‘ರಂಗಮಂದಿರ ಕಾಮಗಾರಿ ಪೂರ್ಣವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಸ್ತಾಂತರ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಆದ್ರೆ, ಹಸ್ತಾಂತರಕ್ಕೆ ಮುಂದೆ ಬರ್ತಿಲ್ಲ. ಈ ಕುರಿತು ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರ ಗಮನಕ್ಕೂ ತರಲಾಗಿದೆ. ಸರ್ಕಾರಿ ಇಲಾಖೆ ವಿದ್ಯುತ್ ಕಟ್ ಮಾಡಬಾರದು ಆದ್ರೂ ಹೆಸ್ಕಾಂ ರಂಗಮಂದಿರದ ವಿದ್ಯುತ್ ಕಟ್ ಮಾಡಿದೆ ಎನ್ನುತ್ತಿದ್ದಾರೆ.
ಇತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವೀರಯ್ಯಸ್ವಾಮಿ ಮಾತನಾಡಿ, ‘ನಿರ್ಮಿತಿ ಕೇಂದ್ರ ನಮಗೆ ಇನ್ನೂ ಕಟ್ಟಡ ಹಸ್ತಾಂತರ ಮಾಡಿಲ್ಲ. ಒಂದು ವರ್ಷದಿಂದ ರಂಗಮಂದಿರದ ಆದಾಯ ನಾವೇ ಪಡೆಯುತ್ತಿದ್ದೇವೆ. ಆದ್ರೆ, ವಿದ್ಯುತ್ ಬಿಲ್ ಅವರೇ ಕಟ್ಟಬೇಕು. ನಮಗೆ ಹಸ್ತಾಂತರ ಆದ ಬಳಿಕ ನಾವು ವಿದ್ಯುತ್ ಬಿಲ್ ಕಟ್ತೀವಿ ಎಂದು ಹೇಳುತ್ತಿದ್ದಾರೆ.
ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ, ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಇತ್ತ ಕಾರ್ಯಕ್ರಮಕ್ಕೆ ಬಾಡಿಗೆ ಎಂದು ಬಂದವರಿಗೆ ವಿದ್ಯುತ್ ಇಲ್ಲ ಎಂದು ಪಾಪಸ್ ಕಳಿಸುವ ಸ್ಥಿತಿ ಬಂದಿದೆ. ಎಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಸೌಲಭ್ಯವುಳ್ಳ ರಂಗಮಂದಿರ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳ ಮೂಲಕ, ಸ್ಥಳೀಯ ಕಲಾವಿದರಿಗೆ ಸಹಕಾರಿಯಾಗಿ ಎಲ್ಲೆಡೆ ಗಮನ ಸೆಳೆಯಬೇಕಿತ್ತು. ಆದರೆ, ಉದ್ಘಾಟನೆ ಆದ ಒಂದೇ ವರ್ಷದಲ್ಲಿ, ಬಾಕಿ ವಸೂಲಿ ಪಟ್ಟಿಯಲ್ಲಿ ಸೇರಿರುವುದು ವಿಪರ್ಯಾಸ. ಇನ್ನಾದರೂ, ಸಚಿವರು ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ, ಮಹಾನ್ ಸಂಗೀತ ಸಾಧಕರ ಹೆಸರಿನಲ್ಲಿರುವ ಜಿಲ್ಲಾ ರಂಗಮಂದಿರಕ್ಕೆ ಬೆಳಕು ಕಲ್ಪಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ