AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಇಂದಿರಾ ಕ್ಯಾಂಟೀನ್​ ಬಂದ್; ಗುತ್ತಿಗೆದಾರರಿಗೆ ಬರೋಬ್ಬರಿ 40 ಕೋಟಿ ಬಿಲ್ ಬಾಕಿ

ಅದು ಬಡವರ ಪಾಲಿನ ಅಕ್ಷಯ ಪಾತ್ರೆ. ಕಾರ್ಮಿಕರು, ಶ್ರಮಿಕರ ಪಾಲಿನ ಫೈವ್ ಸ್ಟಾರ್ ಹೊಟೇಲ್, ಕಡಿಮೆ ದುಡ್ಡಿಗೆ ಹೊಟ್ಟೆ ತುಂಬ ಊಟ ಕೊಡ್ತಿದ್ದ ಇಂದಿರಾ ಕ್ಯಾಂಟೀನ್​ಗಳು ಈಗ ಮೌನತಾಳಿವೆ. ಸಿದ್ದರಾಮಯ್ಯ ಕನಸಿನಕೂಸಾಗಿದ್ದ ಇಂದಿರಾ ಕ್ಯಾಂಟೀನ್​ಗೆ ಬಿಬಿಎಂಪಿ ಅಧಿಕಾರಿಗಳು ಎಳ್ಳುನೀರು ಬಿಡಲು ಹೊರಟಿದ್ದು, ಬಿಲ್ ಬಾಕಿ ಬಾರದೇ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್​ಗಳಿಗೆ ಬೀಗ ಬಿದ್ದಿದೆ.

ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಇಂದಿರಾ ಕ್ಯಾಂಟೀನ್​ ಬಂದ್; ಗುತ್ತಿಗೆದಾರರಿಗೆ ಬರೋಬ್ಬರಿ 40 ಕೋಟಿ ಬಿಲ್ ಬಾಕಿ
ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಇಂದಿರಾ ಕ್ಯಾಂಟೀನ್​ ಬಂದ್
ಶಾಂತಮೂರ್ತಿ
| Updated By: ಆಯೇಷಾ ಬಾನು|

Updated on: Jul 20, 2024 | 7:45 AM

Share

ಬೆಂಗಳೂರು, ಜುಲೈ.20: 2013ರಲ್ಲಿ ಕಾಂಗ್ರೆಸ್ ಸರ್ಕಾರದ (Congress Government) ಅವಧಿಯಲ್ಲಿ ಜಾರಿಯಾದ ಇಂದಿರಾ ಕ್ಯಾಂಟೀನ್ (Indira Canteen) ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು ಸೇರಿದಂತೆ ಅನೇಕರ ಹಸಿದ ಹೊಟ್ಟೆ ತುಂಬಿಸಿತ್ತು. ಅಲ್ಲದೇ ಇತರ ರಾಜ್ಯಗಳಿಗೂ ಈ ಯೋಜನೆ ಸ್ಫೂರ್ತಿ ಆಗಿತ್ತು. ಆದರೆ ಈಗ ಬೆಂಗಳೂರು ದಕ್ಷಿಣದಲ್ಲಿ ಈ ಯೋಜನೆ ಸಂಪೂರ್ಣ ಹಳ್ಳ ಹಿಡಿಯುವಂತಾಗಿದೆ. ಕಳೆದ ಒಂದು ವರ್ಷದಿಂದ ಬಾಕಿ ಹಣ ಪಾವತಿ ಮಾಡಿಲ್ಲ ಎಂದು ಆಹಾರ ಪೂರೈಕೆಯ ಟೆಂಡರ್ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ ಆಹಾರ ಪೂರೈಸುತ್ತಿಲ್ಲ. ಇದರಿಂದ ಪಾಲಿಕೆಯ (BBMP) ದಕ್ಷಿಣ ವಲಯಕ್ಕೆ ಬರುವ 11ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಕಳೆದ 15-20 ದಿನಗಳಿಂದ ಬಾಗಿಲು ಬಂದ್ ಮಾಡಿವೆ.

ಬಡವರ ಪಾಲಿನ ಅಕ್ಷಯ ಪಾತ್ರೆ ಅಂತಲೇ ಕರೆಸಿಕೊಳ್ಳುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಈ ರೀತಿ ಅವನತಿಯ ಹಾದಿ ಹಿಡಿದಿರೋದು ಸಿಎಂ ಸಿದ್ದರಾಮಯ್ಯರಿಗೆ ಮುಜುಗರ ತರಿಸಿದೆ. ಅದರಲ್ಲೂ ನಗರದ ಪ್ರಮುಖ ಆಸ್ಪತ್ರೆಗಳ ಆವರಣ, ಅಕ್ಕಪಕ್ಕದಲ್ಲಿರುವ ಕ್ಯಾಂಟೀನ್‌ಗಳೇ ಮುಚ್ಚಿದ್ದು, ನಿಜವಾಗಿ ಯಾರಿಗೆ ಯೋಜನೆ ತಲುಪಬೇಕಿತ್ತೋ ಅವರೇ ಯೋಜನೆ ಸಿಗದೇ ಪರದಾಡುವಂತಾಗಿದೆ.

ಇದನ್ನೂ ಓದಿ: ದಿನೇ ದಿನೆ ಹೆಚ್ಚುತ್ತಲೇ ಇದೆ ಡೆಂಗ್ಯೂ: ರಾಜ್ಯದಲ್ಲಿ 12 ಸಾವಿರ ಪ್ರಕರಣಗಳು ಪತ್ತೆ

ಇತ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟಿನ್‌ಗಳಿವೆ. ಶುರುವಾದಾಗಿನಿಂದ ಪ್ರತಿ ನಿತ್ಯ ಮೂರೂವರೆ ಲಕ್ಷ ಜನ ಊಟ, ತಿಂಡಿ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಕಂಪನಿಗೆ ಪಾಲಿಕೆ 40 ಕೋಟಿ ಹಣ ನೀಡಬೇಕಿದೆ. ಕ್ಯಾಂಟೀನ್ ಸಿಬ್ಬಂದಿ ಸಂಬಳ, ದಿನಸಿ ಬಿಲ್ ಸಮಸ್ಯೆಯಿಂದಾಗಿ ಟೆಂಡರ್ ಪಡೆದ ಸಂಸ್ಥೆ ಕ್ಯಾಂಟೀನ್‌ಗೆ ಬೀಗ ಹಾಕಿದೆ. ಬಸವನಗುಡಿ, ಪದ್ಮನಾಭನಗರ, ಚಿಕ್ಕಪೇಟೆ, ಜಯನಗರ ಕ್ಷೇತ್ರಗಳಲ್ಲಿ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗಿದೆ. ಇತ್ತ ಬಿಬಿಎಂಪಿಯ ಅಧಿಕಾರಿಗಳನ್ನ ಕೇಳಿದ್ರೆ ಎಲ್ಲವನ್ನೂ ಸರಿಪಡಿಸ್ತೀವೆ ಅಂತಾ ಸಬೂಬು ನೀಡ್ತಿದ್ದಾರೆ

ಸದ್ಯ ಇಂದಿರಾ ಕ್ಯಾಂಟೀನ್ ಬಂದ್ ಆಗಿರೋದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಾರದ ವಿರುದ್ಧ ಚಾಟಿಬೀಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಕ್ಯಾಂಟೀನ್ ಮುಚ್ಚಿದ್ದಾರೆ ಅಂತಿದ್ರೀ, ಈಗ ನಿಮ್ಮದೇ ಸರ್ಕಾರ ಇದ್ರೂ ಯಾಕೆ ಬಂದ್ ಆಗಿದೆ ಅಂತಾ ಪ್ರಶ್ನಿಸಿದ್ದಾರೆ. ಇತ್ತ ಇಂದಿರಾ ಕ್ಯಾಂಟೀನ್ ಬಂದ್ ಆಗಿರೋ ಬಗ್ಗೆ ಸ್ಪಷ್ಟನೆ ಕೊಟ್ಟಿರೋ ಪಾಲಿಕೆ ಎಲ್ಲವನ್ನೂ ಸರಿಪಡಿಸಿ ಪುನಾರಂಭ ಮಾಡ್ತೀವೆ ಅಂತಾ ಪ್ರಕಟಣೆ ಹೊರಡಿಸಿದೆ. ಒಟ್ಟಿನಲ್ಲಿ ಬಡವರ ಹೊಟ್ಟೆ ತುಂಬಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಲಾಕ್ ಆಗಿದ್ದು, ಸರ್ಕಾರ ಹಾಗೂ ಪಾಲಿಕೆಯ ನಿರ್ಲಕ್ಷ್ಯವನ್ನ ಅನಾವರಣ ಮಾಡಿದೆ. ಸದ್ಯ ಇನ್ನಾದ್ರೂ ಇಂದಿರಾ ಕ್ಯಾಂಟೀನ್ ಗಳ ಬಗ್ಗೆ ಸರ್ಕಾರ ಗಮನಹರಿಸುತ್ತಾ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ