ನನ್ನ ಜತೆ ಕಾಮಗಾರಿ ಪರಿಶೀಲನೆಗೆ ಬರುವ ಅಧಿಕಾರಿಗಳಿಗೆ ಧಮ್ಕಿ ಹಾಕ್ತಿದ್ದಾರೆ: ಮಧು ಬಂಗಾರ ವಿರುದ್ಧ ರಾಘವೇಂದ್ರ ಗಂಭೀರ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 15, 2024 | 7:27 PM

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ನನ್ನ ಜತೆ ಕಾಮಗಾರಿ ಪರಿಶೀಲನೆಗೆ ಬರುವ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಅಭಿವೃದ್ಧಿಗೆ ಬಳ್ಳಿಗಾವಿ ಮಠಕ್ಕೆ ಹಣ ಕೊಟ್ಟಿದ್ದೇವು. ಆದರೆ ಕಾಂಗ್ರೆಸ್ ಸರಕಾರ ಈ ಹಣವನ್ನು ವಾಪಸ್ ನೀಡುವಂತೆ ತಿಳಿಸಿದೆ ಎಂದಿದ್ದಾರೆ.

ಶಿವಮೊಗ್ಗ, ಜನವರಿ 15: ನನ್ನ ಜತೆ ಕಾಮಗಾರಿ ಪರಿಶೀಲನೆಗೆ ಬರುವ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ (BY Raghavendra) ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಸಣ್ಣಮಟ್ಟದ ರಾಜಕಾರಣ ಮಾಡುವುದು ನಮಗೆ ರೂಢಿಯಿಲ್ಲ. ಮಾಜಿ ಸಿಎಂ ಬಂಗಾರಪ್ಪರ ಪುತ್ರನಾಗಿ ಸಣ್ಣತನದ ರಾಜಕಾರಣ ಬಿಡಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

ಸಚಿವರು ಬಳ್ಳಿಗಾವಿಗೆ ಹೋಗಿದ್ದರು. ಆ ಸ್ಥಳಕ್ಕೆ ಹೋದಾಗ ಅಭಿವೃದ್ಧಿ ಆಗಿಲ್ಲ, ನೋವಾಗಿದೆ ಅಂದಿದ್ದಾರೆ. ಶಿಕಾರಿಪುರದ ಜನತೆ ಮತ ಕೊಟ್ಟಾಗ ನೋವು ಆಗಿರಲಿಲ್ಲ. ಈಗ ಅವರಿಗೆ ನೋವಾಗಿದೆ. ಕೇಂದ್ರ ಪುರಾತತ್ವ ಇಲಾಖೆಯಿಂದ ಅಭಿವೃದ್ಧಿಗೆ ಆದೇಶ ಕೊಡಿಸಿದ್ದೇನೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಅಭಿವೃದ್ಧಿಗೆ ಬಳ್ಳಿಗಾವಿ ಮಠಕ್ಕೆ ಹಣ ಕೊಟ್ಟಿದ್ದೇವು. ಆದರೆ ಕಾಂಗ್ರೆಸ್ ಸರಕಾರ ಈ ಹಣವನ್ನು ವಾಪಸ್ ನೀಡುವಂತೆ ತಿಳಿಸಿದೆ.

ಸರ್ಕಾರ ಶಿವಮೊಗ್ಗ ಜಿಲ್ಲೆಯಿಂದ 36 ಕೋಟಿ ರೂ. ಹಣ ಹಿಂಪಡೆದಿದೆ

ರಾಜ್ಯದ ಮಠದ ಅಭಿವೃದ್ಧಿಗೆ ಯಡಿಯೂರಪ್ಪ ಸರಕಾರ 216 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಈ ಹಣವನ್ನು ಕಾಂಗ್ರೆಸ್ ಸರಕಾರ ವಾಪಸ್ ಪಡೆದಿದ್ದಾರೆ. ಸೊರಬ ತಾಲೂಕಿನ ಚಂದ್ರಗುತ್ತಿ ದೇವಸ್ಥಾನಕ್ಕೆ 1 ಕೋಟಿ ರೂ. ಹಣವನ್ನು ಬಿಜೆಪಿ ಸರಕಾರ ನೀಡಿತ್ತು. ಈ ಹಣವನ್ನು ಸಹ ಕಾಂಗ್ರೆಸ್ ಸರಕಾರ ಹಿಂಪಡೆದಿದೆ. ಸಕ್ಕರೆಬೈಲು ಆನೆ ಬಿಡಾರಕ್ಕೆ 17 ಕೋಟಿ ರೂ. ಕೊಟ್ಟಿದ್ದರು. ಸರಕಾರದಿಂದ ಶಿವಮೊಗ್ಗ ಜಿಲ್ಲೆಯಿಂದ 36 ಕೋಟಿ ರೂ. ಹಣ ಹಿಂಪಡೆದಿದ್ದಾರೆ ಎಂದರು.

ಇದನ್ನೂ ಓದಿ: ಮಧು ಬಂಗಾರಪ್ಪ ಸಣ್ಣತನದ ರಾಜಕಾರಣ ಮತ್ತು ಅಧಿಕಾರಿಗಳನ್ನು ಬೆದರಿಸುವುದು ನಿಲ್ಲಿಸಬೇಕು: ಬಿವೈ ರಾಘವೇಂದ್ರ

ಜಿಲ್ಲಾ ಉಸ್ತುವಾರಿ ‌ಸಚಿವರಾದ ನಿಮಗೆ ಗೌರವ ಇದ್ದರೆ ಈ ಹಣವನ್ನು ವಾಪಸ್ ತನ್ನಿ. ವಿಮಾನ ‌ನಿಲ್ದಾಣದ ಬಗ್ಗೆ ತನಿಖೆ ಮಾಡಿಸುತ್ತೇನೆ. ತನಿಖೆ ಮಾಡಿಸುತ್ತೇನೆ ಅಂತಾರೆ, ತನಿಖೆ ಮಾಡಿಸುತ್ತೇನೆ ಎಂದು ಧಮ್ಕಿ ಹಾಕುವುದನ್ನು ಬಿಡಲಿ ಎಂದು ಕಿಡಿಕಾರಿದ್ದಾರೆ.

ಅಭಿವೃದ್ಧಿಗೆ ಕಲ್ಲು ಹಾಕುವಂತಹ ಕೆಲಸ ಮಾಡಿದ್ದಾರೆ

ದೇವರು ಮೆಚ್ಚುವಂತಹ ಕೆಲಸ ಮಾಡಿದ್ದೇವೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಯಡಿಯೂರಪ್ಪ ಅವರ ಕಾಲದಲ್ಲಿ, ಬಿಜೆಪಿ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಆಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಒಂದೇ ಒಂದು ರೂಪಾಯಿ ಬಂದಿಲ್ಲ. ಸರಕಾರ ಬದಲಾದ ನಂತರ ಅಭಿವೃದ್ಧಿ ಕಾರ್ಯ ನಿಲ್ಲುತ್ತಿರಲಿಲ್ಲ. ಆದರೆ ಈ ಸರಕಾರ ಬಂದ ನಂತರ ಅಭಿವೃದ್ಧಿ ಕೆಲಸ ನಿಲ್ಲುತ್ತಿವೆ. ಅಭಿವೃದ್ಧಿಗೆ ಕಲ್ಲು ಹಾಕುವಂತಹ ಕೆಲಸ ಮಾಡಿದ್ದಾರೆ. ಮಲೆನಾಡಿನ ಜಿಲ್ಲೆಗೆ ಕಂಟಕವಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸಲಿ ಎಂದಿದ್ದಾರೆ.

ಭದ್ರಾವತಿಯ ವಿಐಎಸ್​ಎಲ್ ಸಂಬಂಧಿಸಿದಂತೆ ಕಾರ್ಮಿಕರು‌ ಮನವಿ ಕೊಡಲು ಬಂದಿದ್ದರು. ಬಂಡವಾಳ ಹೂಡಿಕೆಗೆ ಯಾರು ಟೆಂಡರ್​ನಲ್ಲಿ‌ ಭಾಗವಹಿಸದ ಕಾರಣ ತಿಂಗಳಲ್ಲಿ 25 ದಿನ ಕೆಲಸ ಕೊಡಬೇಕು ಎಂಬುದು ಕಾರ್ಮಿಕರ ಆಗ್ರಹವಾಗಿದೆ. ಇದು ಭದ್ರಾವತಿಗೆ ಸೀಮಿತವಲ್ಲ, ರಾಷ್ಟ್ರಕ್ಕೆ ಸಂಬಂಧಪಟ್ಟ ವಿಷಯ. ಈ ಭಾಗದ ಜನಪ್ರತಿನಿಧಿಯಾಗಿ‌ ಕಾರ್ಮಿಕರ ಜೊತೆ ಇರುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.