ಪ್ರಚೋದನಕಾರಿ ಹೇಳಿಕೆ ಹಿನ್ನೆಲೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನವಸಪ್ಪ ವಿರುದ್ಧ ದೂರು ದಾಖಲು
ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆ ಸಂವಿಧಾನಬಾಹಿರ ಹಿನ್ನೆಲೆ ಕೋರ್ಟ್ ನಿರ್ದೇಶನದಂತೆ ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಾಗೂ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನವಸಪ್ಪನವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ: ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಹಾಗೂ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡಿದ ಆರೋಪದ ಅಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನವಸಪ್ಪನವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ನ್ಯಾಯಾಲಯದ ಪಿಸಿಆರ್ ಮೂಲಕ ಸಾಮಾಜಿಕ ಕಾರ್ಯಕರ್ತ ಶಿವಮೊಗ್ಗ ಪೀಸ್ ಆರ್ಗನೈಜೇಷನ್ ನ ಮುಖಂಡ ರಿಯಾಜ್ ಅಹ್ಮದ್ ಅರ್ಜಿ ಸಲ್ಲಿಸಿದ್ದು ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿರುವ ಮೇರೆಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆ ಸಂವಿಧಾನಬಾಹಿರ ಹಿನ್ನೆಲೆ ಕೋರ್ಟ್ ನಿರ್ದೇಶನದಂತೆ ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಫೆ.20 ರಂದು ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯಾದ ಸಂದರ್ಭದಲ್ಲಿ ಮರುದಿನ ಸಚಿವ ಈಶ್ವರಪ್ಪನವರು ಟಿವಿ ಮಾಧ್ಯಮಗಳಿಗೆ ಮುಸಲ್ಮಾನ್ ಗೂಂಡಾಗಳಿಂದ ಹರ್ಷನ ಕೊಲೆಯಾಗಿದೆ. ಈ ಹಿಂದೆ ಶಿವಮೊಗ್ಗದಲ್ಲಿ ಎಂದೂ ಕೂಡ ಈ ರೀತಿ ಬಾಲಬಿಚ್ಚಿರಲಿಲ್ಲ. ಅವರ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ನ ಡಿಕೆಶಿ ಕುಮ್ಮಕ್ಕು ಇಲ್ಲಿನ ಮುಸ್ಲಿಮರಿಗೆ ಸಿಗುತ್ತಿದೆ. ಮುಸಲ್ಮಾನ್ ಗೂಂಡಾಗಿರಿಯನ್ನ ನಾನು ಯಾವುದೇ ಕಾರಣಕ್ಕೂ ಬೆಳೆಯಲು ಬಿಡುವುದಿಲ್ಲ. ಅದನ್ನ ನಾನು ದಮನಿಸುತ್ತೇನೆ ಎಂದು ಹೇಳಿಕೆ ನೀಡಿದ್ದರ ಕಾರಣ ಫೆ.21 ರಂದು ನಗರ ಕೋಮು ದಳ್ಳುರಿಗೆ ಕಾರಣವಾಗಿದೆ.
ಜೊತೆಗೆ ಪಾಲಿಕೆಯ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪನವರು ಪೊಲೀಸ್ ಇಲಾಖೆಗೆ ಬುದ್ದಿ ಬರುವುದಿಲ್ಲ. ಪ್ರತಿ ಬಾರಿಯೂ ನಮ್ಮ ಹಿಂದೂ ಕಾರ್ಯಕರ್ತನನ್ನ ಕಳೆದುಕೊಳ್ಳುತ್ತಿದ್ದೇವೆ. ಪೊಲೀಸರು ತಮ್ಮವರನ್ನ ಕಳೆದುಕೊಂಡಾಗ ಎಚ್ಚೆತ್ತುಕೊಳ್ಳುವುದಾ ಎನ್ನುವ ಮಟ್ಟಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಲಾಖೆ ನಾಮರ್ಧ ಇಲಾಖೆ ಆಗಿದೆ. ಇಲಾಖೆ ಮುಸ್ಲಿಂ ಗೂಂಡಾಗಳಿಗೆ ಮಂಗಳ ಹಾಡದಿದ್ದರೆ ಹಿಂದೂ ಸಮಾಜ ರಕ್ಷಣೆ ವಿಚಾರದಲ್ಲಿ ತನ್ನ ದಾರಿಯನ್ನ ಕಂಡುಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದರು. ಇದು ಫೆ.21 ರ ಕೋಮುಗಲಭೆಗೆ ಕಾರಣವಾಗಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯದ ಮೊರೆ ಹೋಗಿ ದೂರು ದಾಖಲಿಸಿದ ರಿಯಾಜ್ ಅಹ್ಮದ್ ಈ ಎಲ್ಲಾ ವಿಚಾರವನ್ನ ಇಟ್ಟುಕೊಂಡು ಪೀಸ್ ಆರ್ಗನೈಜೇಷನ್ ಫೆ. 22 ರಂದು ದೊಡ್ಡಪೇಟೆ ಠಾಣೆಗೆ ಕೊಟ್ಟಾಗ ಠಾಣಾಧಿಕಾರಿಗಳು ದೂರು ಸ್ವೀಕರಿಸಿರಲಿಲ್ಲ. ಪೊಲೀಸ್ ರಕ್ಷಣಾಧಿಕಾರಿಗಳಿಗೆ ಈ ಇಬ್ಬರ ವಿರುದ್ಧ ಮನವಿ ನೀಡಿ ಬಂದರೂ ಮನವಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗಿ ಪಿಸಿಆರ್ ಮೂಲಕ ದೂರುದಾಖಲಿಸಲಾಗಿದೆ ಎಂದು ರಿಯಾಜ್ ಅಹ್ಮದ್ ಎಫ್ಐಆರ್ ನಲ್ಲಿ ತಿಳಿಸಿದ್ದಾರೆ. ಇಬ್ಬರೂ ಜನಪ್ರತಿನಿಧಿಗಳಾಗಿದ್ದು ಸಂವಿಧಾನಿಕ ಹುದ್ದೆಯ ಅಲಂಕೃತರಾಗಿದ್ದು ಒಂದು ಕೋಮಿನ ವಿರುದ್ಧ ಪ್ರಚೋದನೆ ಹೇಳಿಕೆ ನೀಡಿರುವುದು ಸಂವಿಧಾನ ಬಾಹಿರ ಹೇಳಿಕೆಯಾಗಿದೆ. ಈ ಹಿನ್ನಲೆಯಲ್ಲಿ ಇಬ್ಬರ ವಿರುದ್ಧ ಕೋರ್ಟ್ ನಿರ್ದೇಶನದಂತೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ನಾವು ಹಿಂದೂ ವಾದಿಗಳು, ಆದ್ರೆ ಯಾವ ಜಾತಿಗೂ ಅನ್ಯಾಯ ಮಾಡಲ್ಲ; ಸಚಿವ ಕೆ.ಎಸ್.ಈಶ್ವರಪ್ಪ