Shivamogga Violence: ಕಾಮಾಲೆ ಕಣ್ಣು; ಶಿವಮೊಗ್ಗ ಗಲಭೆಗೆ ಕಾಂಗ್ರೆಸ್ ಕಾರಣ ಎಂದ ಈಶ್ವರಪ್ಪಗೆ ಸಿದ್ದರಾಮಯ್ಯ ತಿರುಗೇಟು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 16, 2022 | 11:53 AM

Siddaramaiah: ಸಾವರ್ಕರ್ ಫೋಟೊ ಹಾಕಿದ್ದೇನೋ ಸರಿ, ಆದರೆ ಟಿಪ್ಪು ಫೋಟೋ ತೆಗೆದದ್ದು ಏಕೆ? ಈ ರೀತಿ ಮಾಡಿದರೆ ಗಲಭೆಗಳು ಆಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Shivamogga Violence: ಕಾಮಾಲೆ ಕಣ್ಣು; ಶಿವಮೊಗ್ಗ ಗಲಭೆಗೆ ಕಾಂಗ್ರೆಸ್ ಕಾರಣ ಎಂದ ಈಶ್ವರಪ್ಪಗೆ ಸಿದ್ದರಾಮಯ್ಯ ತಿರುಗೇಟು
ಸಿದ್ದರಾಮಯ್ಯ
Follow us on

ಬೆಂಗಳೂರು: ಶಿವಮೊಗ್ಗ ಗಲಭೆಗೆ (Shivamogga Violence) ಕಾಂಗ್ರೆಸ್ ಕಾರಣ ಎನ್ನುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿಕೆಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ  (Siddaramiah) ಸಾರಾಸಗಟಾಗಿ ನಿರಾಕರಿಸಿದ್ದಾರೆ. ಈಶ್ವರಪ್ಪ ವಿರುದ್ಧ ಕಿಡಿಕಾರಿರುವ ಅವರು, ‘ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಹಾಗಾಗಿ ಕಾಂಗ್ರೆಸ್​ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೊದಲು ಕಿತಾಪತಿ ಮಾಡುವವರು ಬಿಜೆಪಿಯವರೇ. ಬಳಿಕ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಾರೆ. ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಸಾವರ್ಕರ್​ ಫೋಟೋ ಹಾಕಿದ್ದಾರೆ. ಹೀಗ್ಯಾಕೆ ಮಾಡಬೇಕಿತ್ತು ಎಂದು ಅವರು ಪ್ರಶ್ನಿಸಿದರು.

ಸಾವರ್ಕರ್ ಫೋಟೊ ಹಾಕಿದ್ದೇನೋ ಸರಿ, ಆದರೆ ಟಿಪ್ಪು ಫೋಟೋ ತೆಗೆದದ್ದು ಏಕೆ? ಈ ರೀತಿ ಮಾಡಿದರೆ ಗಲಭೆಗಳು ಆಗುವುದಿಲ್ಲವೇ? ಈ ಘಟನೆಯಲ್ಲಿ ಎಸ್​ಡಿಪಿಐ ಪಾತ್ರವಿದ್ದರೆ, ಎಸ್​ಡಿಪಿಐ ಮತ್ತು ಪಿಎಫ್​ಐಗಳಿಂದ ಕೋಮು ಸೌಹಾರ್ದ ಹಾಳಾಗುತ್ತಿದೆ ಎನಿಸಿದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಿ. ಸರ್ಕಾರ ಹೇಗೂ ಬಿಜೆಪಿಯವರದೇ ಇದೆ ಅಲ್ಲವೇ ಎಂದು ಕೇಳಿದರು.

ಮೊದಲು ಕಿತಾಪತಿ ಮಾಡುವವರು ಬಿಜೆಪಿಯವರೇ, ನಂತರ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದೂ ಅವರೇ. ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಕೈಬಿಟ್ಟು ದೊಡ್ಡ ತಪ್ಪು ಮಾಡಿದರು. ಅತ್ತ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೆಹರು ಸ್ಮರಣೆ ಮಾಡುತ್ತಾರೆ. ಆದರೆ ಇವರಿಗೆ ಇತಿಹಾಸವೇ ಸರಿಯಾಗಿ ಗೊತ್ತಿಲ್ಲ. ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರಾ? ಯಾವ ಹೋರಾಟದಲ್ಲಿ ಅವರು ಭಾಗಿಯಾಗಿದ್ದಾರೆ? ಬಿಜೆಪಿಯವರದ್ದು ನಕಲಿ ದೇಶಭಕ್ತಿ. ಇವರು ಆರ್​ಎಸ್​ಎಸ್ ಕೈಗೊಂಬೆ ಆಗಿರುವುದಲ್ಲೆ ಮತ್ತೇನು ಎಂದು ಕೇಳಿದರು.

ಇದನ್ನೂ ಓದಿ: Shivamogga Violence: ಹಿಂದೂ ಸಮಾಜ ಎದ್ದರೆ ಮುಸ್ಲಿಂ ಗೂಂಡಾಗಳು ಉಳಿಯಲ್ಲ: ಈಶ್ವರಪ್ಪ

ಅವಕಾಶ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂಬ ಶ್ರೀರಾಮುಲು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಶ್ರೀರಾಮುಲು, ಈ ಈಶ್ವರಪ್ಪ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದರು.

ಸುರ್ಜೆವಾಲಾ ಸಭೆ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಚುನಾವಣೆಗೆ ತಂತ್ರ ಹೆಣೆಯುವ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್, ಬಿ.ಕೆ.ಹರಿಪ್ರಸಾದ್ ಸೇರಿಂತೆ ವಿವಿಧ ಸಮಿತಿಗಳ ಮುಖ್ಯಸ್ಥರು ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: Shivamogga Violence: ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ; ಪ್ರಮುಖ ಆರೋಪಿಯ ಮೇಲೆ ಪೊಲೀಸರ ಫೈರಿಂಗ್

Published On - 11:48 am, Tue, 16 August 22