ಶಿವಮೊಗ್ಗದಲ್ಲಿ ಒಂದು ಫೇಕ್ ಗೋಲ್ಡ್ ಗ್ಯಾಂಗ್ ಬ್ಯಾಂಕ್ ಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದೆ. ನಕಲಿ ಚಿನ್ನವಿಟ್ಟು ಗೋಲ್ಡ್ ಲೋನ್ ಪಡೆದು ಕಣ್ಣಾಮುಚ್ಚಾಲೆ ಆಡುತ್ತಿದ್ದ ಗ್ಯಾಂಗ್ ಕೊನೆಗೂ ಸಿಕ್ಕಿ ಬಿದ್ದಿದೆ. ಮಲೆನಾಡಿನಲ್ಲಿ ಫೇಕ್ ಗೋಲ್ಡ್ ಗ್ಯಾಂಗ್ ಬ್ಯಾಂಕ್ ಗೆ ಟೋಪಿ ಕುರಿತು ಒಂದು ವರದಿ ಇಲ್ಲಿದೆ. ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ಗಾಂಧಿ ಬಜಾರ್ ಬ್ಯಾಂಕ್ ನಲ್ಲಿ 62 ಕೋಟಿ ನಕಲಿ ಚಿನ್ನವಿಟ್ಟು ಲೋನ್ ಪಡೆದ ಕೇಸ್ ದೊಡ್ಡ ಸುದ್ದಿ ಮಾಡಿತ್ತು. ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ಸೇರಿ ಈ ಪ್ರಕರಣದಲ್ಲಿ ವಂಚನೆ ಮಾಡಿದ್ದರು. ಈ ಪ್ರಕರಣದ ಬಳಿಕ ಈಗ ಮತ್ತೊಂದು ಫೇಕ್ ಗೋಲ್ಡ್ ಲೋನ್ ಕೇಸ್ ಪತ್ತೆಯಾಗಿದೆ. ಈ ಬಾರಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಕಲಿ ಬಂಗಾರ ಅಡವಿಟ್ಟು ಲಕ್ಷಾಂತರ ರೂಪಾಯಿ ಟೋಪಿ ಹಾಕಿದೆ ಆ ಗ್ಯಾಂಗ್.
ಶಿವಮೊಗ್ಗ ತಾಲೂಕಿನ ಮಲವಗೊಪ್ಪ ಗ್ರಾಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 18 ಖಾತೆಗಳ ಮೂಲಕ ನಕಲಿ ಬಂಗಾರ ಅಡವಿಟ್ಟು ಒಟ್ಟು 80 ಲಕ್ಷ ರೂಪಾಯಿ ಸಾಲ ಪಡೆದಿದ್ದರು. 1,898 ಗ್ರಾಂ ನಕಲಿ ಬಂಗಾರವಿಟ್ಟಿದ್ದರು. ಈ ಬಂಗಾರದಲ್ಲಿ 386 ಗ್ರಾಂ ಮಾತ್ರ ಅಸಲಿ ಬಂಗಾರವಿತ್ತು. ಚಿನ್ನಾಭರಣ ಒಡವೆಗಳಿಗೆ ಬಂಗಾರದ ಲೇಪನ ಮಾಡಿದ್ದರು. ಅಸಲಿ ಬಂಗಾರದಂತೆ ಬಂಗಾರದ ಲೇಪನ ಮಾಡಿದ್ದರು.
ಬ್ಯಾಂಕ್ ಅಧಿಕಾರಿಗಳು ಒಂದಿಷ್ಟು ಚಿನ್ನಾಭರಣ ಉಜ್ಜಿ ಪರೀಕ್ಷೆ ಮಾಡಿದ್ದಾರೆ. ಉಜ್ಜಿದಾಗ ಅದು ಅಸಲಿ ಬಂಗಾರವೆಂದು ಕಂಡು ಬಂದಿದೆ. ಆದನ್ನೇ ನಂಬಿದ ಬ್ಯಾಂಕ್ ಅಧಿಕಾರಿಗಳು ಒಂದಲ್ಲ ಎರಡಲ್ಲ 18 ಖಾತೆಗಳ ಮೂಲಕ 80 ಲಕ್ಷ ರೂಪಾಯಿ ಸಾಲವನ್ನು ಕೆ.ಎಸ್. ಗಗನ್ ಮತ್ತು ಆತನ ಪತ್ನಿ ಎನ್ ನಯನಾ, ಸಹೋದರ ಕೆ.ಎಸ್. ಪವನ್ ಕುಮಾರ್ ಸ್ನೇಹಿತ ಮಂಜುನಾಥ್ ಪಡೆದಿದ್ದರು.
ಇವರ ಜೊತೆಗೆ ಹರೀಶ್ ಎಂಬಾತ ಬ್ಯಾಂಕ್ ನಲ್ಲಿ ಚಿನ್ನದ ಮೌಲ್ಯಮಾಪಕ ಮಾಡುವ ವ್ಯಕ್ತಿ ಇದ್ದಾನೆ. ಈ ಆರು ಜನರು ಸೇರಿ ಬ್ಯಾಂಕ್ ವಂಚನೆ ಮಾಡಲು ಮೊದಲೇ ಪ್ಲ್ಯಾನ್ ಮಾಡಿದ್ದರು. ಅದರಂತೆ ನಕಲಿ ಬಂಗಾರವಿಟ್ಟು ಸಾಲ ಪಡೆದಿದ್ದರು. ಅಡವಿಟ್ಟಿರುವ ಚಿನ್ನದ ಮೇಲೆ ಮತ್ತೆ ವಂಚಕರು 1.5 ಕೋಟಿ ರೂಪಾಲಿ ಸಾಲ ಕೇಳಿದ್ದಾರೆ. ಈ ವೇಳೆ ಚಿನ್ನಾಭರಣ ಮೌಲ್ಯಮಾಪಕ ಮಾಡಿದ್ದು ಮತ್ತೊಬ್ಬ ವ್ಯಕ್ತಿಯಾಗಿದ್ದನು.
ಆತ ಈ ಹಿಂದೆ ಅಡವಿಟ್ಟಿರುವ ಚಿನ್ನಾಭರಣವನ್ನು ಪರೀಕ್ಷೆ ಮಾಡಿದ್ದಾರೆ. ಈ ಮೇಲೆ ಅಡವಿಟ್ಟಿರುವ ಎಲ್ಲ ಚಿನ್ನಾಭರಣ ಬಂಗಾರ ಲೇಪಿತ ನಕಲಿ ಎನ್ನುವುದು ಬೆಳಕಿಗೆ ಬಂದಿದೆ. ಇದರಿಂದ ಶಾಕ್ ಆದ ಬ್ಯಾಂಕ್ ಮ್ಯಾನೇಜರ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ದಂಪತಿ ಮತ್ತು ಅತನ ಸಹೋದರ ಮತ್ತು ಸ್ನೇಹಿತನನ್ನು ಸೇರಿ ನಾಲ್ವರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ
ನಕಲಿ ಚಿನ್ನಾಭರಣವಿಟ್ಟು ಒಟ್ಟು 80 ಲಕ್ಷ ರೂಪಾಯಿ ಗೋಲ್ಡ್ ಲೋನ್ ಪಡೆದಿದ್ದಾರೆ. ಅನೇಕ ತಿಂಗಳನಿಂದ ಲಕ್ಷಾಂತರ ರೂಪಾಯಿ ಪಡೆದು ಗಗನ ಮತ್ತು ಆತನ ಗ್ಯಾಂಗ್ ಎಂಜಾಯ್ ಮಾಡುತ್ತಿದ್ದರು. ಹೀಗೆ ಒಂದಿಷ್ಟು ಅಸಲಿ ಬಂಗಾರ ಲೇಪನ ಮಾಡಿ ಬುದ್ದಿವಂತಿಕೆಯಿಂದ ಬ್ಯಾಂಕ್ ಮ್ಯಾನೇಜರ್ ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ವಂಚನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇಷ್ಟು ಹಣ ಪಡೆಯಲು ಯಶಸ್ವಿಯಾಗಿದ್ದ ಗಗನ ಮತ್ತು ಆತನ ಗ್ಯಾಂಗ್ ಗೆ ದುರಾಸೆ ಶುರುವಾಗಿತ್ತು.
ಅಡವಿಟ್ಟಿರುವ ಚಿನ್ನಾಭರಣದ ಮೇಲೆ ಮತ್ತೆ 1.5 ಕೋಟಿ ಸಾಲವನ್ನು ಇವರು ಡಿಮ್ಯಾಂಡ್ ಮಾಡಿದ್ದರು. ಕಳೆದ ಬಾರಿ ಈ ವಂಚಕರಿಗೆ ಸಾಥ್ ನೀಡಿದ್ದ ವ್ಯಕ್ತಿ ಗೋಲ್ಡ್ ನ ಮೌಲ್ಯಮಾಪಕ ಮಾಡಿದ್ದ. ಇದರಿಂದ ಇವರ ವಂಚನೆಯು ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಾಗಿರಲಿಲ್ಲ. ಅಡವಿಟ್ಟಿರುವ ಅದೇ ಗೋಲ್ಡ್ ಮೇಲೆ ಮತ್ತೆ ಒಂದೂವರೆ ಕೋಟಿ ಸಾಲ ಪಡೆಯಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಮತ್ತೆ ಬ್ಯಾಂಕ್ ಅಧಿಕಾರಿಗೆ ವಂಚನೆ ಮಾಡಲು ಹೋಗಿದ್ದ ಗಗನ್ ಮತ್ತು ಆತನ ಗ್ಯಾಂಗ್ ಆಟ ಈ ಬಾರಿ ನಡೆಯಲಿಲ್ಲ. ಬ್ಯಾಕ್ ಮ್ಯಾನೇಜರ್ ಮುಖೇಶ್ ಈ ಬಾರಿ ಗೋಲ್ಡ್ ಮೌಲ್ಯಮಾಪನಕ್ಕೆ ಹರೀಶ್ ಬದಲು ಶ್ರೀಕಾಂತ್ ಎನ್ನುವರಿಂದ ಗೋಲ್ಡ್ ಪರೀಕ್ಷೆ ಮಾಡಿಸಿದ್ದರು! ಶ್ರೀಕಾಂತ್ ಗೋಲ್ಡ್ ಪರೀಕ್ಷೆ ಮಾಡಿದಾಗ ದೊಡ್ಡ ಅಚ್ಚರಿ ಎದುರಾಗಿತ್ತು. ಸುಮಾರು 1.8 ಕೆ.ಜಿ. ಚಿನ್ನಾಭರಣ ಪೂರ್ಣ ನಕಲಿ ಎನ್ನುವುದು ಗೊತ್ತಾಗಿತ್ತು.
ಈ ಪ್ರಕರಣ ಬಯಲಾದ ಮೇಲೆ ಬ್ಯಾಂಕ್ ನ ಗ್ರಾಹಕರಿಗೆ ದೊಡ್ಡ ಆಘಾತವಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲೇ ಈ ರೀತಿ ವಂಚನೆ ನಡೆದ್ರೆ ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ಬ್ಯಾಂಕ್ ಮ್ಯಾನೇಜರ್ ಮತ್ತು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಗಗನ್ ಮತ್ತು ಆತನ ಗ್ಯಾಂಗ್ ನಕಲಿ ಬಂಗಾರವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು ಸ್ಥಳೀಯರು ಮತ್ತು ಗ್ರಾಹಕರು ಬೇಸರ ಹೊರಹಾಕಿದ್ದಾರೆ.
ಸುಲಭವಾಗಿ ದುಡ್ಡು ಮಾಡುವುದಕ್ಕೆ ವಂಚಕರು ನೂರೆಂಟು ಪ್ಲ್ಯಾನ್ ಗಳನ್ನು ಮಾಡುತ್ತಲೇ ಇರುತ್ತಾರೆ. ಮಲೆನಾಡಿನಲ್ಲಿ ನಕಲಿ ಚಿನ್ನಭಾರಣವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಅಪ್ಪಿತಪ್ಪಿ ಈ ಬಾರಿ ಕೂಡಾ ಬ್ಯಾಂಕ್ ಅಧಿಕಾರಿಗಳು ಗೋಲ್ಡ್ ಲೋನ್ ನೀಡುವ ವೇಳೆ ಗಮನ ಹರಿಸದೇ ಇದ್ದರೆ ಮತ್ತೆ ಒಂದೂವರೆ ಕೋಟಿ ವಂಚನೆ ಆಗುತ್ತಿತ್ತು. ಅಂತೂ ನಕಲಿ ಚಿನ್ನಾಭರಣವಿಟ್ಟು ಸಾಲ ಪಡೆಯುವ ವಂಚಕರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ ಎಂಬುದೇ ಸದ್ಯದ ಸಮಾಧಾನದ ಸಂಗತಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ