ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 4.30ಕ್ಕೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ತಾಯಿ ಪ್ರೇಮಾ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಇಂಜಿನಿಯರ್ ಬಳಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಹರ್ಷ, ಕಳೆದ 5 ವರ್ಷಗಳಿಂದ ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಹರ್ಷ ಗೋ ರಕ್ಷಣೆಯ ಕೆಲಸ ಮಾಡಿದ್ದನು. ಹೀಗಾಗಿ ಮುಸ್ಲಿಂ ಯುಕರಿಗೆ ಹರ್ಷ ಕಂಡರೆ ಆಗುತ್ತಿರಲ್ಲ. ಎಂಕೆಕೆ ರಸ್ತೆಯ (ಆದಿಲ್, ಪಠಾಣ್) ಮುಸ್ಲಿಂ ಯುವಕರು, ಕೆ ಆರ್ ಪುರಂ ರಸ್ತೆ, ಆರ್ ಎಂಎಲ್ ನಗರ ಮತ್ತು ಕ್ಲಾರ್ಕ್ ಪೇಟೆ ಹಾಗೂ ಇತರೆ ಮುಸ್ಲಂ ಯುವಕರಿಂದ ನನಗೆ ಜೀವ ಬೆದರಿಕೆ ಇದೆ. ನನ್ನನ್ನು ಕೆಲವರು ಕೊಲೆ ಮಾಡುತ್ತೇವೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ ಎಂದು ತಾಯಿ ಎದುರು ಕೂಡ ಹರ್ಷ ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.
ನೀನು ಯಾರ ತಂಟೆಗೂ ಹೋಗಬೇಡ ಎಂದು ತಾಯಿ ಹರ್ಷಗೆ ಬುದ್ದಿಮಾತು ಹೇಳಿದ್ದರು. ನಾನು ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡು ಇರುತ್ತೇನೆ, ನಾನು ಯಾರ ತಂಟೆಗು ಹೋಗಲ್ಲ ಎಂದು ಹರ್ಷ ಹೇಳಿದ್ದರು. ನಿನ್ನೆ (20-02-2022) ರಾತ್ರಿ 8 ಗಂಟೆಗೆ ಮನೆಯಿಂದ ಹೊಟೇಲ್ಗೆ ಹೋಗಿ ಊಟ ಮಾಡಿಕೊಂಡು ಬರುವುದಾಗಿ ಹೇಳಿದ್ದ ಹರ್ಷನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಕ್ಕೆ ಕೆಲವರಿಗೆ ಆಗುತ್ತಿರಲಿಲ್ಲ. ಹೀಗಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆಂದು ದೂರು ನೀಡಲಾಗಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಹರ್ಷ ತಾಯಿ ಪದ್ಮಾ ನೀಡಿದ್ದಾರೆ. ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಹಿಂದೂ ಕಾರ್ಯಕರ್ತನ ಹತ್ಯೆ ಘಟನೆ ವಿರೋಧಿಸಿ ತುಮಕೂರು, ಧಾರವಾಡ, ಚಿಕ್ಕಮಗಳೂರು, ಹಾಸನ ಮುಂತಾದೆಡೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಹರ್ಷ ಅಂತ್ಯಕ್ರಿಯೆ
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಹರ್ಷ ಅಂತ್ಯಕ್ರಿಯೆ ನಡೆಸಲಾಗಿದೆ. ವಿದ್ಯಾನಗರದಲ್ಲಿರುವ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ. ತಂದೆ ನಾಗರಾಜ್ ಹರ್ಷನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಮರಾಠ ಭಾವಸಾರ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿದೆ. ಕಾಳಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹರ್ಷ ಅಂತ್ಯಕ್ರಿಯೆಯಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.
ಅಂತ್ಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನ ಮುಕ್ತಾಯಗೊಂಡಿದೆ. ಸಂಪ್ರದಾಯದ ಅನುಗುಣವಾಗಿ ಅಗ್ನಿ ಸ್ಪರ್ಶ ನಡೆಸಲಾಗಿದೆ. ಅಮರ ರಹೇ ಅಮರ ರಹೇ ಹರ್ಷ ಅಮರ ರಹೇ ಎಂದು ಘೋಷಣೆ ಹಾಕಲಾಗಿದೆ. ಹರ ಹರ ಮಹಾದೇವ ಹರಹರ ಮಹಾದೇವ ಜೈ ಶ್ರೀರಾಮ ಎಂದು ಘೋಷಣೆ ಹಾಕಿ ಅಗಲಿದ ಹರ್ಷಗೆ ಕಾರ್ಯಕರ್ತರು ವಂದನೆ ಸಲ್ಲಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ನಾಗರೀಕರು ಭಾವುಕತೆಗೆ ಒಳಗಾಗಬಾರದು ಎಂದು ಮನವಿ ಮಾಡಲಾಗಿದೆ.
ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ ವಹಿಸುವಂತೆ ಶೋಭಾ ಕರಂದ್ಲಾಜೆ ಮನವಿ
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ ವಹಿಸುವಂತೆ ಸಿಎಂ ಬೊಮ್ಮಾಯಿಗೆ ಕೇಂದ್ರ ಸಚಿವೆ ಕರಂದ್ಲಾಜೆ ಪತ್ರ ಬರೆದಿದ್ದಾರೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡವರು ಟಾರ್ಗೆಟ್ ಆಗುತ್ತಿದ್ದಾರೆ. ಬೆಂಗಳೂರಿನ ರುದ್ರೇಶ್ ಹತ್ಯೆ ಹಿಂದೆ PFI ಕೈವಾಡ ಸಾಬೀತಾಗಿದೆ. ಹರ್ಷ ಕೊಲೆ ಹಿಂದಿನ ಪಿತೂರಿ, ಪ್ರಕರಣವನ್ನು NIAಗೆ ವಹಿಸಿ. ತಕ್ಷಣವೇ ಪ್ರಕರಣ NIAಗೆ ವರ್ಗಾಯಿಸುವಂತೆ ಶೋಭಾ ಆಗ್ರಹ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಚಿವೆ ಶೋಭಾ ಪತ್ರ ಬರೆದು ಕೇಳಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಘಟನೆ ಖಂಡಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ. ಹೇಡಿಗಳ ಅಟ್ಟಹಾಸಕ್ಕೆ ಕಾರ್ಯಕರ್ತ ಹರ್ಷ ಬಲಿಯಾಗಿದ್ದಾರೆ. ಹತ್ಯೆ ಎಸಗಿದವರನ್ನು ಸರ್ಕಾರ ಆದಷ್ಟು ಬೇಗ ಬಂಧಿಸಬೇಕು. ಹತ್ಯೆಗೊಳಗಾದ ಹರ್ಷ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಜೋಶಿ ಹೇಳಿದ್ದಾರೆ. ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. 2 ವರ್ಷದ ಹಿಂದೆಯೇ ಬೆದರಿಕೆ ಇತ್ತು ಎಂದು ವರದಿ ಇದೆ. ಆ ಹುಡುಗನನ್ನು ರಕ್ಷಣೆ ಮಾಡಬೇಕಿತ್ತು. ಶಿವಮೊಗ್ಗ ಜಿಲ್ಲೆಯವರೇ ಗೃಹ ಇಲಾಖೆ ಸಚಿವರು ಇದ್ದಾರೆ. ಇಷ್ಟಿದ್ದರೂ ಇಂತಹ ಪ್ರಕರಣ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಆರಗ ಜ್ಞಾನೇಂದ್ರ ಮಾಹಿತಿ
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷ ಮೃತದೇಹ ಮೆರವಣಿಗೆ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ; ಮತ್ತೆ ಬಿಗು ವಾತಾವರಣ ನಿರ್ಮಾಣ