
ಶಿವಮೊಗ್ಗ, ಆಗಸ್ಟ್ 7: ಭಾರಿ ಮಳೆಗೆ ಮಣ್ಣು ಕುಸಿತವಾದ ಕಾರಣ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ಬಾಳೆಬರೆ ಘಾಟ್‌ನಲ್ಲಿ (Balebare Ghat) ಘನ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಆದೇಶ ಹೊರಡಿಸಿದ್ದಾರೆ. ಭಾರಿ ವಾಹಮಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಅವರು ಸೂಚನೆ ನೀಡಿದ್ದಾರೆ. ಪರ್ಯಾಯ ಮಾರ್ಗಗಳ ವಿವರವನ್ನೂ ಆದೇಶದಲ್ಲಿ ತಿಳಿಸಲಾಗಿದೆ. ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳಬರೆ ಘಾಟ್ 42.10 ರಿಂದ 42.20 ರಲ್ಲಿನ ಹೇರ್ ಪಿನ್ ತಿರುವಿನಲ್ಲಿ ಮೇ ಅಂತ್ಯದಲ್ಲಿ ಬಿದ್ದಂತಹ ಮಳೆಯಿಂದ ಕಾಂಕ್ರಿಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಪ್ರಸ್ತುತ ಮಣ್ಣು ಕುಸಿತವಾಗಿರುವ ಭಾಗದಲ್ಲಿ ತಾತ್ಕಾಲಿಕವಾಗಿ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಮತ್ತೆ ಮಳೆ ಚುರುಕುಗೊಂಡಿರುವುದರಿಂದ ಮಣ್ಣು ಮತ್ತೆ ಕುಸಿಯುವ ಸಂಭವವಿರುವುದರಿಂದ, ಸುರಕ್ಷತಾ ದೃಷ್ಟಿಯಿಂದ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟಿ ಮಾರ್ಗ ವ್ಯಾಪ್ತಿಯಲ್ಲಿ (ಮಾಸ್ತಿಕಟ್ಟೆಯಿಂದ ಹೊಸಂಗಡಿಯವರೆಗೆ) ತಾತ್ಕಾಲಿಕವಾಗಿ ಮಳೆಗಾಲದವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಭಾರಿ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಅಧಿಸೂಚನೆ ಹೊರಡಿಸಲು ಲೋಕೋಪಯೋಗಿ ಇಲಾಖೆಯ ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕೋರಿರುತ್ತಾರೆ. ಅದರಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಪ್ರಸ್ತಾವನೆಯಂತೆ ಶಿವಮೊಗ್ಗ ಜಿಲ್ಲೆ ಪೊಲೀಸ್ ಅಧಿಕ್ಷಕರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಮತ್ತು ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಇವರ ಉಲ್ಲೇಖ (2) (3) (4) ವರದಿಗಳನ್ವಯ, SH-52 ರ ಬಾಳೆಬರೆ ಘಾಟ್ ನಲ್ಲಿ ಮಳೆ ಚುರುಕುಗೊಂಡಿರುವುದರಿಂದ ಮಣ್ಣು ಮತ್ತೆ ಕುಸಿಯುವ ಸಂಭವವಿರುವುದರಿಂದ ಭಾರಿ ವಾಹನಗಳ ಸಂಚಾರ ನಿಷೇದ ಮಾಡಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬಹುದಾಗಿ ವರದಿ ಸಲ್ಲಿಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಆದೇಶಲ್ಲಿ ಉಲ್ಲೇಖಿಸಿದ್ದಾರೆ.