ಶಿವಮೊಗ್ಗ: ಕಿಮ್ಮನೆ ಗಾಲ್ಫ್ ರೆಸಾರ್ಟ್ನಲ್ಲಿ ವಿಧವೆಯ ಹತ್ಯೆ -ಅನೈತಿಕ ಸಂಬಂಧದ ಜಾಡು ಹಿಡಿದು ಸಾಗಿದ ತುಂಗಾನಗರ ಪೊಲೀಸರಿಗೆ ಹಂತಕ ಸಿಕ್ಕಿದ್ದು ಎಲ್ಲಿ, ಹೇಗೆ?
Kimmane Golf Resort widow murder case: ಬಡ ವಿಧವೆ ಮತ್ತು ಮೂಕಿಯ ಸಾವಿನ ಪ್ರಕರಣದಲ್ಲಿ ತನಿಖೆ ಹಳ್ಳ ಹಿಡಿಯುತ್ತದೆ ಅಂತಾ ಅಂದುಕೊಂಡಿದ್ದ ಎಲ್ಲರಿಗೂ ಬಿಗ್ ಶಾಕ್ ಆಗಿತ್ತು. ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪದಡಿ ಈಗ ಜೋಗಿಂದರ್, ಅಂದರ್ ಆಗಿದ್ದಾನೆ.
ಶಿವಮೊಗ್ಗದ (Shivamogga) ಹೊರವಲಯದಲ್ಲಿರುವ ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ಮಾತುಬಾರದ ವಿಧವೆಯ ಅನುಮಾನಸ್ಪದ ಸಾವು ಆಗಿತ್ತು. ಈ ಪ್ರಕರಣದ ತನಿಖೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ದೈಹಿಕವಾಗಿ ಅನುಭವಿಸಿದ ಬಳಿಕ ವ್ಯಕ್ತಿಯೊಬ್ಬ ಮರ್ಡರ್ (Murder) ಮಾಡಿದ್ದನು. ಕೊನೆಗೂ ಈ ಪ್ರಕರಣವನ್ನು ಶಿವಮೊಗ್ಗದ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಕಿಮ್ಮನೆ ರೆಸಾರ್ಟ್ ನಲ್ಲಿ ವಿಧವೆ ಕೊಲೆ ರಹಸ್ಯ 3 ತಿಂಗಳ ಬಳಿಕ ಬಟಾಬಯಲಾಗಿದ್ದು ಹೇಗೆ? ಅನೈತಿಕ ಸಂಬಂಧದ ಜಾಡು (Illicit relationship) ಹಿಡಿದು ಸಾಗಿದ ತುಂಗಾನಗರ ಪೊಲೀಸರಿಗೆ (Tunga Nagar Police) ಹಂತಕ ಸಿಕ್ಕಿಬಿದ್ದಿದ್ದು ಹೇಗೆ? ಇಲ್ಲಿದೆ ಇಡೀ ವೃತ್ತಾಂತ.
ಶಿವಮೊಗ್ಗ ತಾಲೂಕಿನ ಮಲ್ಲಿಗೆಹಳ್ಳಿಯ ಬಳಿ ಇರುವ ಪ್ರತಿಷ್ಠಿತ ಕಿಮ್ಮನೆ ಗಾಲ್ಫ್ ಮತ್ತು ರೆಸಾರ್ಟ್ ಬಳಿ 14-11-22 ರ ಬೆಳಗ್ಗೆ ಮಾತುಬಾರದ ಪವಿತ್ರಾ ಎಂಬ 46 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಯ ಶವದ ಪಕ್ಕದಲ್ಲೇ ದೊಡ್ಡ ಕಲ್ಲು ಪತ್ತೆಯಾಗಿತ್ತು. ರೆಸಾರ್ಟ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿರುವ ವೇಳೆ ಮಹಿಳೆಯ ಸಾವು ಸಂಭವಿಸಿದೆ. ಅಷ್ಟಕ್ಕೂ ಮಹಿಳೆಯನ್ನು ಅತ್ಯಾಚಾರ ಮಾಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಅನುಮಾನವನ್ನು ಆ ದಿನ ಕುಟುಂಬಸ್ಥರು ಮಾಡಿದ್ದರು.
ಮೃತ ಮಹಿಳೆಯ ಪತಿಯು ಮೃತಪಟ್ಟಿದ್ದಾನೆ. ಮಹಿಳೆಗೆ ಎರಡು ಮಕ್ಕಳಿವೆ. ವಿಧವೆ ತನ್ನ ಕುಟುಂಬ ಹೊಟ್ಟೆ ತುಂಬಿಸಲು ರೆಸಾರ್ಟ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಆ ದಿನ ಕೆಲಸಕ್ಕೆಂದು ಹೋಗಿದ್ದ ಈ ಮಹಿಳೆ ರಾತ್ರಿ ಆದ್ರೂ ವಾಪಸ್ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿ, ನಾಪತ್ತೆ ಕೇಸ್ ದಾಖಲು ಮಾಡಿದ್ದರು. ಆ ದಿನ ಬೆಳಗ್ಗೆ ಮಹಿಳೆಯು ಅದೇ ಗಾಲ್ಫ್ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅಷ್ಟಕ್ಕೂ ಮಹಿಳೆಯನ್ನು ಮರ್ಡರ್ ಮಾಡಿದ್ದು.. ಯಾಕೇ? ಎನ್ನುವುದು ಮುಂದೆ ಮೂರು ತಿಂಗಳು ಕಾಲ ನಿಗೂಢವಾಗಿತ್ತು.
ಪವಿತ್ರಾ ಶವ ಪತ್ತೆಯಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ತುಂಗಾ ನಗರ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಮಹಿಳೆಯ ಸಾವು ಸಾಕಷ್ಟು ಅನುಮಾನಗಳಿಂದ ಕೂಡಿದೆ. ಅದೊಂದು ಸಹಜ ಸಾವು ರೀತಿಯಲ್ಲಿ ಕಂಡು ಬಂದಿಲ್ಲ. ಪವಿತ್ರಳದ್ದು ಅಸಹಜ ಸಾವು ಪ್ರಕರಣವಾಗಿದೆ. ಮಹಿಳೆಯನ್ನು ದುಷ್ಕರ್ಮಿಗಳು ಹಿಂಬಾಲಿಸಿ ಬಳಿಕ ಕೊಲೆ ಮಾಡಿರುವ ಸಾಧ್ಯೆತೆಯಿದೆ. ನೂರಾರು ಎಕೆರೆಯ ವಿಶಾಲ, ನಿರ್ಜನ ಗಾಲ್ಫ್ ಮೈದಾನದಲ್ಲಿ ಜನ ಸಂಪರ್ಕ ಕಡಿಮೆ. ಹೀಗಾಗಿ ಈ ಒಬ್ಬಳೆ ವಿಧವೆಯು ಮನೆಗೆ ಹೋಗುತ್ತಿರುವ ವೇಳೆ ದುಷ್ಕರ್ಮಿಗಳು ಸ್ಕೆಚ್ ಹಾಕಿ ಮರ್ಡರ್ ಮಾಡಿದ್ದಾರೆ ಎನ್ನುವ ನೂರೆಂಟು ಅನುಮಾನಗಳು ಆ ದಿನ ಹುಟ್ಟಿಕೊಂಡಿದ್ದವು.
ಮೃತಳ ಕುಟುಂಬಸ್ಥರು ಇದೊಂದು ಮರ್ಡರ್ ಕೇಸ್ ಅಂತಾ ಅದಾಗಲೇ ದೂರು ಕೊಟ್ಟಿದ್ದರು. ಸದ್ಯ ತುಂಗಾ ನಗರ ಪೊಲೀಸರು ಮಹಿಳೆಯ ಅನುಮಾನಸ್ಪದ ಸಾವು ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು. ಆ ದಿನ ಸಂಜೆ ಹೊತ್ತಿನಲ್ಲಿ ಮಹಿಳೆಯು ಮೃತಪಟ್ಟಿದ್ದು ಹೇಗೆ? ಎನ್ನುವುದು ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಮಹಿಳೆಗೆ ಯಾರೂ ಶತ್ರುಗಳಿರಲಿಲ್ಲ.
ಹೀಗೆ ಏಕಾಏಕಿ ವಿಧವೆ ಮತ್ತು ಮೂಕಿಯಾಗಿದ್ದ ಮಹಿಳೆಯ ಸಾವಿನ ಹಿಂದೆ ನೂರೆಂಟು ಅನುಮಾನಗಳು ಹುಟ್ಟಿಕೊಂಡಿದ್ದವು. ಕುಟುಂಬಸ್ಥರು ಇದೊಂದು ಕೊಲೆ ಅಂತಾ ಗಂಭೀರ ಆರೋಪ ಮಾಡುತ್ತಿದ್ದರು. ತುಂಗಾ ನಗರ ಪೊಲೀಸರು ಸದ್ಯ ಮಹಿಳೆಯ ಅನುಮಾನಸ್ಪದ ಸಾವಿನ ಕುರಿತು ತನಿಖೆಗೆ ಮುಂದಾಗುತ್ತಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಪವಿತ್ರಾ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು.
ತುಂಗಾ ನಗರ ಸಿಪಿಐ ಮಂಜುನಾಥ್ ನೇತೃತ್ವದ ತಂಡವು ಮಹಿಳೆಯ ಸಾವಿನ ತನಿಖೆಯನ್ನು ಎಲ್ಲ ಆಯಾಮಗಳಲ್ಲಿ ಮಾಡುತ್ತಾರೆ. ಈ ನಡುವೆ ಮಹಿಳೆಯದ್ದು ರೆಸಾರ್ಟ್ ನಲ್ಲಿ ಓರ್ವ ವ್ಯಕ್ತಿಯ ಜೊತ ಅನೈತಿಕ ಸಂಬಂಧ ಇರುವ ಸುಳಿಯುವ ಗೊತ್ತಾಗಿತ್ತು. ಇದೇ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸುತ್ತಾರೆ. ಈ ನಡುವೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯು ಯಾರು ಎನ್ನುವುದನ್ನು ಪತ್ತೆ ಮಾಡುತ್ತಾರೆ. ಆತ ಬೇರೆ ಯಾರೋ ಅಲ್ಲ, ಇದೇ ಕಿಮ್ಮನೆ ರೆಸಾರ್ಟ್ ನಲ್ಲಿ ಟೈಲ್ಸ್ ಕೆಲಸಕ್ಕೆಂದು ಉತ್ತರ ಪ್ರದೇಶದಿಂದ ಬಂದಿದ್ದ ಜೋಗಿಂದರ್ ಎನ್ನುವ ವ್ಯಕ್ತಿ!
ಕೆಲವು ತಿಂಗಳಗಳಿಂದ ಟೈಲ್ಸ್ ಕಾರ್ಮಿಕ ಜೋಗಿಂದರ್ ಮತ್ತು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಸಾವಿತ್ರಿ ನಡುವೆ ಅನೈತಿಕ ಸಂಬಂಧವಿತ್ತು. ಇಬ್ಬರು ಇದೇ ರೇಸಾರ್ಟ್ ಕ್ಯಾಂಪಸ್ ನಲ್ಲಿ ಸೇರುತ್ತಿದ್ದರು. ಮೂಕಿ ಸಾವಿತ್ರಿಯನ್ನು ತನ್ನ ಕಾಮಕ್ಕೆ ಜೋಗಿಂದರ್ ನಿರಂತರವಾಗಿ ಬಳಕೆ ಮಾಡಿಕೊಂಡಿದ್ದಾನೆ. ವಿಧವೆ ಆಗಿದ್ದ ಮೂಕಿ ಸಾವಿತ್ರಮ್ಮಳನ್ನು ನಂಬಿಸಿ ಜೋಗಿಂದರ್ ದೈಹಿಕವಾಗಿ ಅವಳನ್ನು ಬಳಕೆ ಮಾಡಿಕೊಂಡಿದ್ದಾನೆ. ಆ ದಿನ ಮತ್ತೆ ಇಬ್ಬರೂ ಸೇರುವುದಕ್ಕೆ ಒಂದಾಗಿದ್ದಾರೆ.
ಮಹಿಳೆಯನ್ನು ಜೋಗಿಂದರ್ ದೈಹಿಕವಾಗಿ ಬಳಿಕೆ ಮಾಡಿಕೊಂಡಿದ್ದಾನೆ. ಬಳಿಕ ಮಹಿಳೆಯು ಜೋಗಿಂದರ್ ಗೆ ಕೈ ಮತ್ತು ಬಾಯಿ ಸನ್ನೆಯಲ್ಲಿ ಹಣ ಕೇಳಿದ್ದಾಳೆ. ಹಣ ಕೊಡುವುದಕ್ಕೆ ಜೋಗಿಂದರ್ ನಿರಾಕರಿಸಿದ್ದಾನೆ. ತಮ್ಮಿಬ್ಬರ ಅನೈತಿಕ ಸಂಬಂಧ ಹಾಗೂ ಮೋಸ ಮಾಡಿರುವ ಕುರಿತು ದೂರು ನೀಡುವುದಾಗಿ ಹೆದರಿಸಿದ್ದಾಳೆ.
ಇದರಿಂದ ಕೋಪಗೊಂಡ ಟೈಲ್ಸ್ ಕಾರ್ಮಿಕ ಜೋಗಿಂದರ್ ಮಹಿಳೆಯನ್ನು ಉಸಿರುಗಟ್ಟಿಸಿ ಮೊದಲು ಕೊಲೆ ಮಾಡಿದ್ದಾನೆ. ಬಳಿಕ ಮುಖದ ಮೇಲೆ ಕಲ್ಲು ಎತ್ತುಹಾಕಿದ್ದಾನೆ. ಮುಖ ಯಾರದ್ದು ಎನ್ನುವುದು ಗೊತ್ತಿಲ್ಲದಂತೆ ಸಂಪೂರ್ಣವಾಗಿ ಜಜ್ಜಿದ್ದಾನೆ. ಬಳಿಕ ಆತ ಶವವನ್ನು ಅಲ್ಲಿಯೇ ಬಿಟ್ಟು, ಎಸ್ಕೇಪ್ ಆಗಿದ್ದನು.
ಹೀಗೆ ಕೊಲೆ ಮಾಡಿದ ಬಳಿಕ ಜೋಗಿಂದರ್ ಟ್ರೇನ್ ಹತ್ತಿಕೊಂಡು ಉತ್ತರ ಪ್ರದೇಶದಲ್ಲಿರುವ ತನ್ನೂರಿಗೆ ತೆರಳುತ್ತಾನೆ. ಈ ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲದಂತೆ ತನ್ನ ಊರಿಗೆ ಹೋಗಿ ಆತ ತಲೆಮರೆಸಿಕೊಂಡಿದ್ದನು. ಯಾವಾಗ ಅನೈತಿಕ ಸಂಬಂಧದ ಜಾಡು ಸಿಕ್ತೋ ಅದರ ಬಳಿಕ ತುಂಗಾ ನಗರ ಪೊಲೀಸರಿಗೆ ಜೋಗಿಂದರ್ ಆ ದಿನದಿಂದ ಕೆಲಸ ಬಿಟ್ಟು ವಾಪಸ್ ಊರಿಗೆ ಹೋಗಿರುವ ಮಾಹಿತಿ ಲಭ್ಯವಾಗುತ್ತದೆ.
ರೆಸಾರ್ಟ್ ನಲ್ಲಿ ಜೋಗಿಂದರ್ ಕುರಿತು ಮಾಹಿತಿ ಕಲೆ ಹಾಕಿದ ತುಂಗಾ ನಗರ ಪೊಲೀಸರ ತಂಡವು ಉತ್ತರ ಪ್ರದೇಶಕ್ಕೆ ಹೋಗಿ ಜೋಗಿಂದರ್ ನನ್ನು ಪತ್ತೆ ಮಾಡಿದೆ. ಈ ಮೂಲಕ ಬಡ ವಿಧವೆ ಮತ್ತು ಮೂಕಿಯ ಸಾವಿನ ಪ್ರಕರಣದಲ್ಲಿ ತನಿಖೆ ಹಳ್ಳ ಹಿಡಿಯುತ್ತದೆ ಅಂತಾ ಅಂದುಕೊಂಡಿದ್ದ ಎಲ್ಲರಿಗೂ ಬಿಗ್ ಶಾಕ್ ಆಗಿತ್ತು.
ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪದಡಿ ಈಗ ಜೋಗಿಂದರ್, ಅಂದರ್ ಆಗಿದ್ದಾನೆ. ಮಹಿಳೆಗ ಮೋಸ ಮಾಡಿದ ಜೋಗಿಂದರನಿಗೆ ಕೊನೆಗೂ ಆತನ ಪಾಪದ ಕೊಡ ತುಂಬಿತ್ತು. ಪೊಲೀಸರು ಮಹಿಳೆಯ ಸಾವಿನ ಪ್ರಕರಣದ ಹಿಂದಿರುವ ಕೊಲೆ ರಹಸ್ಯವನ್ನು ಬೇಧಿಸಿದ್ದಾರೆ. ಈ ಮೂಲಕ ಜೋಗಿಂದರ್ ಈಗ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದಾನೆ.
ತುಂಬಾ ಬುದ್ದಿವಂತಿಕೆಯಿಂದ ಮೂಕಿಯ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಹಂತಕನು ಶಿವಮೊಗ್ಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾತು ಬಾರದ ಮೂಕಿಗೆ ಅನ್ಯಾಯ ಮಾಡಿ ಅವಳ ಜೀವವನ್ನೇ ಟೈಲ್ಸ್ ಕಾರ್ಮಿಕ ಜೋಗಿಂದರ್ ಬಲಿ ಪಡೆದ ತಪ್ಪಿಗೆ ಈಗ ಶಿವಮೊಗ್ಗ ಸೆಂಟ್ರಲ್ ಜೈಲು ಪಾಲಾಗಿದ್ದಾನೆ. ವಿಧವೆ ಸಾವಿನ ಬಳಿಕ ಈಗ ಆಕೆಯ ಎರಡು ಮಕ್ಕಳು ಅನಾಥ ರಾಗಿದ್ದು ಮಾತ್ರ ದೊಡ್ಡ ಅನ್ಯಾಯ.
ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ