ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನಿನ್ನೆ(ಜ. 19) ಕಲಬುರ್ಗಿ ಜಿಲ್ಲೆಗೆ ಆಗಮಿಸಿ ವಿವಿಧ ಜಿಲ್ಲೆಗಳ 50,000ಕ್ಕೂ ಹೆಚ್ಚು ಬಂಜಾರ ಸಮುದಾಯದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು. ಆದರೆ ಶಿವಮೊಗ್ಗದಂತಹ ರಾಜಕೀಯ ಪ್ರಭುತ್ವ ಇರುವ ಮತ್ತು ಯಡಿಯೂರಪ್ಪ ಅಂತಹ ನಾಯಕರು ಬಂಜಾರ ಸಮುದಾಯದ ಶಾಸಕ ಇರುವಂತಹ ಜಿಲ್ಲೆಯಲ್ಲಿ ತಾಂಡಗಳನ್ನು ಕಂದಾಯ ಭೂಮಿಯಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ನಡೆದಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯೇ ಇಲ್ಲ ಎಂದು ಕೆಪಿಸಿಸಿ ಮುಖಂಡ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನರೇಂದ್ರ ಮೋದಿಯವರ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ಸೇರುತ್ತದೆ. ಆದರೆ ಶಿವಮೊಗ್ಗದ ಪರಿಸ್ಥಿತಿ ಹೇಗಿದೆ? ಇಡೀ ರಾಜ್ಯದಲ್ಲಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುವ ಗುರುತರವಾದ ಜವಾಬ್ದಾರಿ ಸರ್ಕಾರಕ್ಕಿದೆ. ವಿಶೇಷವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಬಂಜಾರ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಹುಸಿ ಭರವಸೆ ಮುಂದುವರಿದಿದೆ. ಸುಮಾರು 89 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕಾಗಿದೆ. ಈಗಾಗಲೇ ಒಂಭತ್ತು ಗ್ರಾಮಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಕೇವಲ ಎರಡು ಗ್ರಾಮಗಳಷ್ಟೇ ಕಂದಾಯ ಗ್ರಾಮಗಳಾಗಿವೆ. ಕಾರಣ ಈ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ತಾಂಡಗಳಿದ್ದು, ವೇಗವಾಗಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಬೇಕಿದೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಶಾಸಕ, ಬಿಜೆಪಿ ಮುಖಂಡ ಕೆಬಿ ಅಶೋಕ್ ನಾಯ್ಕ ಕೂಡ ಬಂಜಾರ ಸಮುದಾಯದವರು. ಆದರೆ ಸಮುದಾಯಕ್ಕೆ ಕಳೆದ 5 ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಅವರಿಗೆ ಇಚ್ಛಾಶಕ್ತಿಯೂ ಇಲ್ಲ. ಅಧಿಕಾರಿಗಳಿಂದ ಈ ಗ್ರಾಮಗಳನ್ನು ಸರ್ವೇ ಮಾಡಿಸುವ ಕೆಲಸವು ಆಗಿಲ್ಲ. ಬಹಳ ಮುಖ್ಯವಾಗಿ ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಆರು ದಶಕಗಳ ಹೋರಾಟ ನಡೆಸುತ್ತಿರುವ ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ಮರೀಚಿಕೆಯಾಗಿದೆ.
ಕಾಂಗ್ರೆಸ್ ಮುಖಂಡರಾದ ಮಧು ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಸಾಕಷ್ಟು ಹಕ್ಕುಪತ್ರಗಳನ್ನು ನೀಡಿದ್ದಾರೆ. ಆದರೆ ಬಿಜೆಪಿ ಸರ್ಕಾರದಲ್ಲಿ ಶಿವಮೊಗ್ಗದಲ್ಲಿ ಯಾವ ಸಂತ್ರಸ್ತರಿಗೂ ಭೂಮಿ ಹಕ್ಕುಪತ್ರಗಳು ಸಿಕ್ಕಿಲ್ಲ. ನ್ಯಾಯಾಲಯಗಳ ಆದೇಶಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಭಯ ಮೂಡಿಸುತ್ತಿರುವುದು ಶೋಚನೀಯ ಸಂಗತಿ. ಚುನಾವಣಾ ಸಮಯದಲ್ಲಿ ಇಂತಹ ಆಶ್ವಾಸನೆಗಳನ್ನು ಕೊಡುವ ಬದಲು ಐದು ವರ್ಷಗಳಲ್ಲಿ ಬಿಜೆಪಿ ಏನೂ ಮಾಡಲಿಲ್ಲ ಅನ್ನೋದು ದುರದಷ್ಟಕರ. ಬಹಳ ಮುಖ್ಯವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರು ತಾಂಡಗಳಿಗೆ ನ್ಯಾಯ ಒದಗಿಸಿಕೊಡಬೇಕು. ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕೆಲಸ ತುರ್ತಾಗಿ ಆಗಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಜೊತೆಗಿನ ಪ್ರತ್ಯೇಕ ಮಾತುಕತೆ ಬಗ್ಗೆ ಮಾಧ್ಯಮಗಳಿಗೆ ಬಿಎಸ್ವೈ ಹೇಳಿದ್ದಿಷ್ಟು
ಮಲೆನಾಡಿನಲ್ಲಿ ದಶಕಗಳಿಂದ ಹಕ್ಕು ಪತ್ರಕ್ಕಾಗಿ ಸಂತ್ರಸ್ತರು ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಕಂದಾಯ ಗ್ರಾಮ ಮತ್ತು ಹಕ್ಕು ಪತ್ರಗಳ ಬಹುದೊಡ್ಡ ಚರ್ಚೆ, ಹೋರಾಟ, ಪ್ರತಿಭಟನೆಗಳು ನಡೆಯುತ್ತವೆ. ಆದರೆ ಚುನಾವಣೆ ಬಳಿಕ ಮತ್ತೆ ಈ ಎಲ್ಲ ಸಮಸ್ಯೆಗಳು ಮಾಯವಾಗಿ ಬಿಡುತ್ತವೆ. ಹೀಗೆ ಮಲೆನಾಡಿನ ಜನಪ್ರತಿನಿಧಿನಗಳು ಮತ್ತು ಅಧಿಕಾರಿಗಳು ಸಮಸ್ಯೆಗಳ ಗಂಭೀರತೆಯನ್ನೇ ಮರೆತು ಬಿಡುತ್ತಾರೆ.
ಈಗ ಮತ್ತೆ ಚುನಾವಣೆಗಳು ಎದುರಾಗುತ್ತಿವೆ. ಅತ್ತ ಮೋದಿ ಸಾವಿರಾರು ಜನರಿಗೆ ಹಕ್ಕು ಪತ್ರ ಕೊಟ್ಟು ಸೈ ಎನಿಸಿಕೊಂಡರೆ, ಇತ್ತ ಮಾಜಿ ಸಿಎಂ ತವರು ಜಿಲ್ಲೆಯ ಜನರು ಇನ್ನೂ ಹಕ್ಕು ಪತ್ರಕ್ಕಾಗಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ಮಲೆನಾಡಿಗೂ ಮೋದಿ ಬಂದರೆ ದಶಕಗಳ ಈ ಬಡ ಜನರ ಕಂದಾಯ ಗ್ರಾಮ ಮತ್ತು ಹಕ್ಕುಪತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ಬಿಸಿ ಬಿಸಿ ಚರ್ಚೆ ಸದ್ಯ ಮಲೆನಾಡಿದ್ಯಾಂತ ಶುರುವಾಗಿದೆ.
ವರದಿ: ಬಸವರಾಜ್ ಯರಗಣವಿ, ಟಿವಿ9, ಶಿವಮೊಗ್ಗ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.