ಶಿವಮೊಗ್ಗ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಮೂವರು ಯುವಕರಿಗೆ ಲಕ್ಷಾಂತರ ರೂ. ವಂಚಿಸಿದ ಮಹಿಳೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 01, 2023 | 7:32 PM

ಇಷ್ಟೆಲ್ಲ ಮಾಹಿತಿ ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ. ಎಲ್ಲ ಮಾಹಿತಿಗಳು ಕ್ಷಣದಲ್ಲಿ ಕೈಗೆ ಸಿಕ್ಕಿ ಬಿಡುತ್ತವೆ. ಇಷ್ಟೆಲ್ಲ ಮಾಹಿತಿ ನಡುವೆ ಜನರು ವಂಚನೆ ಆಗುತ್ತಿದ್ದಾರೆ. ರೇಲ್ವೆ ಇಲಾಖೆಯಲ್ಲಿ ಸರಕಾರಿ ಕೆಲಸ ಕೊಡಿಸುವ ನೆಪದಲ್ಲಿ ಲಕ್ಷ ಲಕ್ಷ ವಂಚನೆ ಮಾಡಿದ್ದಾರೆ. ಮಹಿಳೆಯ ಬಣ್ಣದ ಮಾತು ನಂಬಿದ ಯುವಕರು ಲಕ್ಷಾಂತರ ರೂಪಾಯಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

ಶಿವಮೊಗ್ಗ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಮೂವರು ಯುವಕರಿಗೆ ಲಕ್ಷಾಂತರ ರೂ. ವಂಚಿಸಿದ ಮಹಿಳೆ
ಪ್ರಾತಿನಿಧಿಕ ಚಿತ್ರ
Follow us on

ಶಿವಮೊಗ್ಗ, ಸೆ.01:ರೈಲ್ವೆ ಇಲಾಖೆಯಲ್ಲಿ ಸರಕಾರಿ ಕೆಲಸ ಮತ್ತು ಟೆಂಡರ್ ಕೊಡಿಸುವುದಾಗಿ ಮಹಿಳೆಯು ಮೂವರಿಗೆ ಬರೊಬ್ಬರಿ 14 ಲಕ್ಷ ರೂಪಾಯಿ ಟೋಪಿ ಹಾಕಿದ್ದಾಳೆ. ಹೊಸನಗರ (Hosanagara) ತಾಲೂಕಿನ ರಿಪ್ಪನಪೇಟೆ ಪಟ್ಟಣದ ಶ್ವೇತಾ ಎಂಬ ಮಹಿಳೆಯು ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಜೊತೆಗೆ ಸಕ್ರೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಗೃಹ ಸಚಿವ ಆರಗ ಜ್ಷಾನೇಂದ್ರ, ಸಂಸದ ಬಿ. ವೈ ರಾಘವೇಂದ್ರ ಸೇರಿದಂತೆ ಹಲವು ಗಣ್ಯರ ಜೊತೆ ಇವರ ಹಲವಾರು ಫೋಟೋಗಳಿವೆ. ಇನ್ನು ಆರೋಪಿ ಮಹಿಳೆಗೆ ಒಂದು ಮಗು ಕೂಡ ಇದ್ದು, ಪತಿಯ ಜೊತೆ ಡೈವರ್ಸ್ ಆಗಿದೆ. ಈ ನಡುವೆ ಶ್ವೇತಾ ತನ್ನ ಪತಿ ಪ್ರಶಾಂತ ದೇಶಪಾಂಡೆ ರೇಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ರೇಲ್ವೆ ಇಲಾಖೆಯ ಪತಿಯ ಐಡಿ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಯುವಕರಿಗೆ ತೋರಿಸಿದ್ದಾರೆ. ಯುವಕರು ಇವರ ಬಣ್ಣದ ಮಾತಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಕೆಲಸ ಕೊಡಿಸುವುದಾಗಿ ಮೂವರು ಯುವಕರಿಗೆ ಮೋಸ

ರೇಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ರಿಪ್ಪನಪೇಟೆಯ ಅರ್ಜುನ್ , ನವೀನ್ ಮತ್ತು ಆದರ್ಶ ಮೂವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ 14 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಇತ್ತ ಅನೇಕ ಬಾರಿ ಶ್ವೇತಾ ಮನೆ ಬಾಗಿಲಿಗೆ ಹೋದರೆ ನೂರೆಂಟು ಸುಳ್ಳು ಹೇಳುತ್ತಿದ್ದಾರೆ. ಇದೀಗ ಕೆಲಸವು‌ ಇಲ್ಲದೇ, ಕೊಟ್ಟ ಹಣವು ಇಲ್ಲದೇ ಯುವಕರು ಆತಂಕಗೊಂಡಿದ್ದಾರೆ. ವಂಚಕಿ ಶ್ವೇತಾ ಮಹಿಳೆಯ ಬಳಿ ತಾನು ಕೊಟ್ಟಿರುವ ಹಣ ವಾಪಸ್ ಕೇಳಿದರೆ ಹಣ ಕೊಡದೇ ಸತಾಯಿಸುತ್ತಿದ್ದಾಳೆ. ಅಲ್ಲದೇ ಹಣ ಕೇಳಿದರೆ ನಿನ್ನ ಮೇಲೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳಂತೆ. ಈ ಕುರಿತು ವಂಚನೆಗೊಳಗಾದ ಆದರ್ಶ ಮತ್ತು ನವೀನ್ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಪುರಾವೆ ಇಲ್ಲದ ರಾಚೇಶ್ವರರ ಹೆಸರಲ್ಲಿ ಮೋಸ ಆರೋಪ, ಕೊಡೆಕಲ್ ವಿರಕ್ತಮಠದ ಶ್ರೀಗಳ ಪ್ರವಚನಕ್ಕೆ ಬ್ರೇಕ್

ಜಿಲ್ಲೆಯ ಎಂಟಕ್ಕೂ ಹೆಚ್ಚು ಯುವಕರಿಗೆ ಮೋಸ

ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಕಳೆದ ಒಂದು ವರ್ಷದಲ್ಲಿ ರಿಪ್ಪನಪೇಟೆಯ ಮೂವರು ಯುವಕರು 16 ಲಕ್ಷ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ 8ಕ್ಕೂ ಹೆಚ್ಚು ಯುವಕರಿಗೆ ಶ್ವೇತಾ ವಂಚನೆ ಮಾಡಿದ್ದಾರಂತೆ. ಇದು ಶಿವಮೊಗ್ಗ ಜಿಲ್ಲೆಗೆ ಮಾತ್ರ ಸಿಮೀತವಾಗಿಲ್ಲ. ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಅನೇಕ ಯುವಕರಿಗೆ ರೇಲ್ವೆ ಇಲಾಖೆಯಲ್ಲಿ ಉದ್ಯೋಗದ ಹೆಸರಿನಲ್ಲಿ ಶ್ವೇತಾ ಮತ್ತು ಆಕೆಯ ನಕಲಿ ಪತಿ ಪ್ರಶಾಂತ ದೇಶಪಾಂಡೆಯು ವಂಚನೆ ಮಾಡಿದ್ದಾರಂತೆ.

ದೂರು ದಾಖಲಾಗುತ್ತಿದ್ದಂತೆ ಮಹಿಳೆ ಎಸ್ಕೇಫ್​

ಶ್ವೇತಾ ವಿರುದ್ಧ ಎಫ್​ಆರ್​ಐ ದಾಖಲು ಆಗುತ್ತಿದ್ದಂತೆ ಅವಳು ಎಸ್ಕೇಪ್ ಆಗಿದ್ದಾಳೆ. ಸದ್ಯ ಶ್ವೇತಾ ಮತ್ತು ಪ್ರಶಾಂತ ದೇಶಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಶ್ವೇತಾ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಓಡಾಡಿಕೊಂಡಿದ್ದಳು. ಎಲ್ಲರ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ. ಇಂತಹ ಚಾಲಾಕಿ ಶ್ವೇತಾ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾಳಂತೆ. ತಾನು ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಫೋಟೋಗಳನ್ನು ತನ್ನ ಫೇಸ್ ಬುಕ್​ನಲ್ಲಿ ಹಾಕಿಕೊಂಡಿದ್ದಾಳೆ. ರಾಜಕಾರಣಿ, ವ್ಯಾಪಾರಸ್ಥೆ, ರೇಲ್ವೆ ಇಲಾಖೆಯ ಪತ್ನಿ ಸೇರಿದಂತೆ ಹತ್ತು ಹಲವು ರೂಪಗಳಲ್ಲಿ ಶ್ವೇತಾ ಕಂಡು ಬಂದಿದ್ದಾರೆ.

ಇದನ್ನೂ ಓದಿ:ಮೈಸೂರು: ಕೆವೈಸಿ ಅಪ್‌ಡೇಟ್ ನೆಪ ಹೇಳಿ 1.45 ಲಕ್ಷ ರೂ ಮೋಸ, ವ್ಯಕ್ತಿಗೆ ಹೃದಯಾಘಾತ

ಸದ್ಯ ಶ್ವೇತಾ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಶ್ವೇತಾ ಪತ್ತೆಗಾಗಿ ಮುಂದಾಗಿದ್ದಾರೆ. ಸದ್ಯ ನಿರುದ್ಯೋಗಿ ಯುವಕರ ಪರವಾಗಿ ಸಾಮಾಜಿಕ ಹೋರಾಟಗಾರರು ಹೋರಾಟಕ್ಕೆ ಮುಂದಾಗಿದ್ದಾರೆ. ಸರಕಾರಿ ಕೆಲಸ ಅಂದ್ರೆ, ಸಾಕು ಜನರು ಹಿಂದೆ ಮುಂದೆ ನೋಡುವುದಿಲ್ಲ. ವಂಚಕರು ತೊಡುವ ಹಳ್ಳಕ್ಕೆ ಸಲೀಸಾಗಿ ಬಿದ್ದು ಬಿಡುತ್ತಾರೆ. ಇದಕ್ಕೆ ಈ ಘಟನೆಯೇ ಕನ್ನಡಿಯಂತಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ