ಸುಡಾನ್​​ಗೆ ತೆರಳಿದ್ದ ಶಿವಮೊಗ್ಗದ ವ್ಯಕ್ತಿ ನಾಪತ್ತೆ: 20 ದಿನಗಳಿಂದ ಸಂಪರ್ಕಕ್ಕೆ ಸಿಗದ ಸುಹೇಲ್

| Updated By: Ganapathi Sharma

Updated on: Dec 30, 2023 | 5:58 PM

Shivamogga man missing in Sudan: ಸದ್ಯ ಪತಿ ನಾಪತ್ತೆ ಕುರಿತು ಭದ್ರಾವತಿಯ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪತ್ನಿ ಮೆಕ್ಸಿಯಾ ದೂರು ದಾಖಲಿಸಿದ್ದಾರೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ ಶಿವಮೊಗ್ಗ, ಸುಹೇಲ್ ಅವರನ್ನು ಪತ್ತೆ ಮಾಡಿಕೊಡಬೇಕೆಂದು ಸಂತ್ರಸ್ತರ ಕುಟುಂಬದ ಜೊತೆ ಸೇರಿ ಡಿಸಿ ಮತ್ತು ಎಸ್ಪಿ ಸೇರಿದಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಸುಡಾನ್​​ಗೆ ತೆರಳಿದ್ದ ಶಿವಮೊಗ್ಗದ ವ್ಯಕ್ತಿ ನಾಪತ್ತೆ: 20 ದಿನಗಳಿಂದ ಸಂಪರ್ಕಕ್ಕೆ ಸಿಗದ ಸುಹೇಲ್
ನಾಪತ್ತೆಯಾಗಿರುವ ಸುಹೇಲ್ ಪತ್ನಿ ಮೆಕ್ಸಿಯಾ
Follow us on

ಶಿವಮೊಗ್ಗ, ಡಿಸೆಂಬರ್ 30: ಶಿವಮೊಗ್ಗದಿಂದ (Shivamogga) ಸುಡಾನ್​ಗೆ (Sudan) ಸಣ್ಣ ಪುಟ್ಟ ವ್ಯಾಪಾರಕ್ಕೆಂದು ತೆರಳಿದ್ದ ವ್ಯಕ್ತಿಯು 20 ದಿನಗಳಿಂದ ನಾಪತ್ತೆಯಾಗಿದ್ದಾರೆ. ಇತ್ತ ಶಿವಮೊಗ್ಗದಲ್ಲಿರುವ ಪತ್ನಿ ಮತ್ತು ಮಕ್ಕಳು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಸುಡಾನ್ ದೇಶಕ್ಕೆ ಹೋಗಿರುವ ಭಾರತೀಯ ಪ್ರಜೆಗೆ ಏನಾಗಿದೆ ಎನ್ನುವ ಆತಂಕ ಕುಟುಂಬಸ್ಥರನ್ನು ಕಾಡುತ್ತಿದೆ.

ಮಲೆನಾಡಿನಿಂದ ಸುಡಾನ್ ದೇಶದ ಕಾರ್ಟೂಮ್ ಮತ್ತು ದಮಜೈನ್​​ಗೆ ಆಯುರ್ವೇದಿಕ್ ತೈಲ ಮಾರಾಟಕ್ಕೆಂದು ಕಳೆದ 9 ತಿಂಗಳ ಹಿಂದೆ ಸುಡಾನ್ ದೇಶಕ್ಕೆ ಹೋಗಿದ್ದ ಭದ್ರಾವತಿ ತಾಲೂಕಿನ ಹಕ್ಕಿಪಿಕ್ಕಿ ಕ್ಯಾಂಪ್ ಗ್ರಾಮದ ಗೌತಮ ನಗರದ ನಿವಾಸಿ ಸುಹೇಲ್ ಎನ್ನುವ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಸುಹೇಲ್ ಎರಡು ಮೂರು ದಿನಕ್ಕೊಮ್ಮೆ ಪತ್ನಿ ಮೆಕ್ಸಿಯಾಗೆ ಕಾಲ್ ಮಾಡುತ್ತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಯಾವುದೇ ಕರೆ ಬಂದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಪತಿಯ ಜೊತೆ ಇದ್ದ ಸ್ನೇಹಿತರನ್ನು ಕೇಳಿದಾಗ ಸುಹೇಲ್ ಇದ್ದ ಸ್ಥಳದಿಂದ ಹೋಗಿ ಕೆಲವು ದಿನಗಳು ಆಗಿವೆ. ದೇಶದಿಂದ ತೆಗೆದುಕೊಂಡು ಬಂದಿರುವ ಆರ್ಯರ್ವೇದ ತೈಲವನ್ನು ಸಂಗ್ರಹ ಮಾಡಿ ಇಟ್ಟಿರುವ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿಂದ ಬಂದಿಲ್ಲ ಎನ್ನುವ ಉತ್ತರ ಕೊಟ್ಟಿದ್ದಾರೆ.

ಸುಡಾನ್​​ನಲ್ಲಿ ಯಾವಾಗಲೂ ಅನಿಶ್ಚಿತತೆ ಇರುತ್ತದೆ. ಅಲ್ಲಿ ಗಲಾಟೆ ಮತ್ತು ಅಂತರಿಕ ಯುದ್ಧಗಳು ನಡೆಯುತ್ತಿರುತ್ತವೆ. ಈ ನಡುವೆ ಸುಹೇಲ್ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನುವ ಒಂದು ಫೋಟೋ ಅಲ್ಲಿಯವರು ಪತ್ನಿಗೆ ಕಳುಹಿಸಿದ್ದಾರೆ. ಮೃತಪಟ್ಟಿರುವ ವ್ಯಕ್ತಿಯ ಫೋಟೋ ತನ್ನ ಪತಿಯದ್ದು ಅಲ್ಲ. ಒಂದು ವೇಳೆ ಪತಿಯದ್ದೇ ಆಗಿದ್ದರೇ ಅದನ್ನು ಅಲ್ಲಿಯ ಸರಕಾರ ದೃಢಪಡಿಸಿ ಮೃತದೇಹವನ್ನು ಶಿವಮೊಗ್ಗಕ್ಕೆ ಕಳುಹಿಸಬೇಕೆನ್ನುವುದು ಪತ್ನಿ ಮತ್ತು ಸಂಬಂಧಿಕರ ಒತ್ತಾಯವಾಗಿದೆ. ಮೃತಪಟ್ಟಿರುವ ವ್ಯಕ್ತಿಯ ಫೋಟೋ ತನ್ನ ಪತಿಗೂ ಹೋಲಿಕೆಯಾಗುತ್ತಿಲ್ಲ. ತನ್ನ ಪತಿ ಜೀವಂತವಾಗಿದ್ದಾರೆ. ಅವರನ್ನು ಪತ್ತೆ ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರವು ಸಹಾಯ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಸುಹೇಲ್ ನಾಪತ್ತೆಯಿಂದ ಆತನ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಮಾಡಿರುವ ಕಾಲ್ ಕೊನೆಯದಾಗಿದೆ. ಇದರ ಬಳಿಕ ಪತಿ ಬಗ್ಗೆ ಯಾವುದೇ ಮಾಹಿತಿ ಸುಡಾನ್​​ನ ಕಾರ್ಟೂಮ್ ನಗರದಿಂದ ಸಿಗುತ್ತಿಲ್ಲ. ಸದ್ಯ ಪತಿ ನಾಪತ್ತೆ ಕುರಿತು ಭದ್ರಾವತಿಯ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪತ್ನಿ ಮೆಕ್ಸಿಯಾ ದೂರು ದಾಖಲಿಸಿದ್ದಾರೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ ಶಿವಮೊಗ್ಗ, ಸುಹೇಲ್ ಅವರನ್ನು ಪತ್ತೆ ಮಾಡಿಕೊಡಬೇಕೆಂದು ಸಂತ್ರಸ್ತರ ಕುಟುಂಬದ ಜೊತೆ ಸೇರಿ ಡಿಸಿ ಮತ್ತು ಎಸ್ಪಿ ಸೇರಿದಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪರ್ಸ್ ಹುಡುಕಲು ನೆರವಾಗಲಿಲ್ಲವೆಂದು ಬಾಂಬ್ ಬೆದರಿಕೆ ಕರೆ ಮಾಡಿದ ವಿಮಾನ ಪ್ರಯಾಣಿಕ ಅರೆಸ್ಟ್

ಸುಹೇಲ್ ಮಿಸ್ಸಿಂಗ್ ಆದ ಬಳಿಕ ಈಗ ಕುಟುಂಬಸ್ಥರಿಗೆ ಸರಿಯಾದ ಮಾಹಿತಿಯೂ ಸಿಗುತ್ತಿಲ್ಲ. ನಿತ್ಯವು ಪತಿ ಎಲ್ಲಿದ್ದಾರೆ ಏನಾಗಿದೆ ಎನ್ನುವ ನೋವಿನಲ್ಲಿ ಕುಟುಂಬಸ್ಥರು ಇದ್ದಾರೆ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸುಹೇಲ್ ಎಲ್ಲಿದ್ದಾರೆ, ಆತ ಬದುಕಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎನ್ನುವ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ