ಶಿವಮೊಗ್ಗ: ಸ್ಯಾಂಟ್ರೋ ರವಿ(Santro Ravi) ಬಗ್ಗೆ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅನೇಕ ವಿವಾದ ಎತ್ತಿದ್ದಾರೆ. ಇದಕ್ಕೆ ನಮ್ಮದೇನು ತೊಂದರೆಯಿಲ್ಲ ಎಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಯಾಂಟ್ರೋ ರವಿ ವಿಚಾರಣೆಗೆ ಮೈಸೂರು ಕಮಿಷನರ್ಗೆ ಸೂಚಿಸಿದ್ದೇನೆ. ಆತನ ಹಿನ್ನೆಲೆ, ಎಷ್ಟು ಕೇಸ್ಗಳಿವೆ, ಯಾರಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.
ಸ್ಯಾಂಟ್ರೋ ರವಿ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಕುಮಾರಸ್ವಾಮಿ ಅವರಿಗೆ ನಾನು ಹೇಳೋದಿಷ್ಟೇ. ಯಾರ್ಯಾರೋ ನನ್ನ ಮನೆಗೆ ಬರುತ್ತಾರೆ, ಆತನೂ ಸಹ ಬಂದಿರಬಹುದು. ಸಮಸ್ಯೆ ಹೇಳಿಕೊಂಡು ಮನೆಗೆ ಬರ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ. ಕುಮಾರಸ್ವಾಮಿ ಕೂಡ ಸಿಎಂ ಆಗಿದ್ದವರು. ಸಾವಿರಾರು ಜನರು ನಿಂತುಕೊಂಡು ಫೋಟೋ ತಗೋಳ್ತಾರೆ. ಕುಮಾರಸ್ವಾಮಿ ಅವರು ಪೊಲೀಸ್ ಸರ್ಟಿಫಿಕೇಟ್ ತಗೋಂಡು ಬಾ ಎಂದು ಕೇಳಿದ್ದು ನಾನು ನೋಡಿಲ್ಲ.
ನಾವು ಕೂಡ ಸಾರ್ವಜನಿಕ ಜೀವನದಲ್ಲಿ ಇರೋರು. ಅವನ ಜೊತೆ ನನ್ನ ಫೋಟೋ ಇರೋದನ್ನ ತೋರಿಸಿ, ತೇಜೋವಧೆ ಮಾಡ್ತಾ ಇದ್ದಾರೆ. ಇದರಿಂದ ಕುಮಾರಸ್ವಾಮಿ ಅವರಿಗೆ ಏನು ಲಾಭ ಆಗುತ್ತೋ ಗೊತ್ತಿಲ್ಲ. ನನ್ನ ಮನೆಗೆ ಈವರೆಗೆ ಬಂದವರು ಹಣದ ಗಂಟು ಬಿಚ್ಚಿ, ಆಮಿಷ ತೋರುವ ಧೈರ್ಯ ಮಾಡಿಲ್ಲ. ಸಾರ್ವಜನಿಕ ಜೀವನದಲ್ಲಿ ಒಂದು ನೈತಿಕತೆ ಇಟ್ಕೊಂಡು ಬದುಕ್ತಿದ್ದೇನೆ. ಸ್ಯಾಂಟ್ರೋ ರವಿ ಫೋಟೋ ಇಟ್ಟುಕೊಂಡು, ತೇಜೋವಧೆ ಸಾಧನೆ ಮಾಡಿದ್ರೇ. ಕುಮಾರಸ್ವಾಮಿಗೆ ಏನು ಲಾಭ ಇಲ್ಲ ಎಂದು ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇನ್ನು ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಆರಗ ಜ್ಞಾನೇಂದ್ರ ಬಗ್ಗೆ ನಾನು ಇಲ್ಲಸಲ್ಲದ ಆರೋಪ ಮಾಡಿಲ್ಲ. ರಾಜ್ಯದಲ್ಲಿ ಅತಿಹೆಚ್ಚು ಜನರು ನನ್ನ ಜೊತೆ ಫೋಟೋ ತೆಗೆಸಿಕೊಳುತ್ತಾರೆ. ನನ್ನಷ್ಟು ಯಾವ ರಾಜಕಾರಣಿ ಜತೆಗೂ ಜನ ಫೋಟೋ ತೆಗೆಸಿಕೊಂಡಿಲ್ಲ. ಗೃಹಸಚಿವರ ಜತೆ ಫೋಟೋ ತೆಗೆಸಿಕೊಂಡಿದ್ದು ತಪ್ಪಲ್ಲ. ಆದರೆ ಸ್ಯಾಂಟ್ರೋ ರವಿ ಸರ್ಕಾರದ ಅಧಿಕಾರದಲ್ಲಿ ಭಾಗಿಯಾಗಿದ್ದಾನೆ. ಯಾವ್ಯಾವ ಇಲಾಖೆಗಳಲ್ಲಿ ಎಷ್ಟು ವರ್ಗಾವಣೆ ಆಗಿದೆ ತನಿಖೆ ಮಾಡಿಸಿ. ಆತನೇ ತಾನು ಡಿಜಿ&ಐಜಿಪಿ ಜತೆ ನೇರ ಸಂಪರ್ಕದಲ್ಲಿದ್ದೇನೆ ಅಂತಾನೆ. ಹೀಗಿರುವಾಗ ಪೊಲೀಸ್ ಇಲಾಖೆಯಿಂದ ಹೇಗೆ ತನಿಖೆ ಮಾಡುತ್ತೀರಿ? ಬಿಜೆಪಿ ನಾಯಕರು ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾರೆ. ಆದ್ರೆ ಸ್ಯಾಂಟ್ರೋ ರವಿ ಪ್ರಕರಣ ಅದಕ್ಕಿಂತ ದೊಡ್ಡ ಟೆರರಿಸಂ. ಭಯೋತ್ಪಾದನೆ ಅಮಾಯಕರ ಪ್ರಾಣ ತೆಗೆದುಕೊಳ್ಳುತ್ತದೆ. ಸಮಾಜಘಾತುಕ ಕೃತ್ಯಗಳು ಸಮಾಜವನ್ನೇ ಬಲಿ ತೆಗೆದುಕೊಳ್ಳುತ್ತದೆ. ನೀವು ಪೊಲೀಸರಿಂದ ಈ ವ್ಯಕ್ತಿ ಬಗ್ಗೆ ಏನು ತನಿಖೆ ಮಾಡಿಸುತ್ತೀರಿ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಲಿ. ಸ್ಯಾಂಟ್ರೋ ರವಿ ಜಾಮೀನು ತೆಗೆದುಕೊಳ್ಳುವವರೆಗೂ ಬಿಟ್ಟುದ್ದು ಯಾಕೆ? ಆತ ಜಾಮೀನು ತೆಗೆದುಕೊಂಡ ಮೇಲೆ ಏನ್ ಅರೆಸ್ಟ್ ಮಾಡೋದು? ಎಂದು ಕಲಬುರಗಿಯ ಖಜೂರಿ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸ್ಯಾಂಟ್ರೋ ರವಿ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಯಾರು ಏನು ಬೇಕಾದರೂ ಹೇಳಬಹುದು. ಸ್ಯಾಂಟ್ರೋ ರವಿ ವಿರುದ್ಧ ತನಿಖೆ ಬಳಿಕ ಸತ್ಯ ಹೊರಬರಲಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ರು.
ಇದನ್ನೂ ಓದಿ: Santro Ravi: ತನಿಖೆ ಚುರುಕುಗೊಳಿಸಿರುವ ಪೊಲೀಸರು, ರವಿ ಮದುವೆ ಮಾಡಿಸಿದ ಪುರೋಹಿತರ ವಿಚಾರಣೆ
ಇನ್ನು ಮತ್ತೊಂದೆಡೆ ಸ್ಯಾಂಟ್ರೋ ರವಿ ಕುರಿತು ಸಮಗ್ರ ತನಿಖೆ ಆಗುತ್ತದೆ ಎಂದು ಮೈಸೂರಿನಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕ್ರಮ ಕೈಗೊಳ್ತೇವೆ. ನಮ್ಮ ಸರ್ಕಾರ ಯಾವತ್ತೂ ತಪ್ಪಿತಸ್ಥರ ರಕ್ಷಣೆ ಮಾಡುವುದಿಲ್ಲ. ವಿಪಕ್ಷ ಏನೇ ಆರೋಪ ಮಾಡಲಿ, ನಾವು ತನಿಖೆ ಮಾಡಿಸ್ತೇವೆ ಎಂದಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:47 pm, Mon, 9 January 23