ಶಿವಮೊಗ್ಗ, ಆಗಸ್ಟ್ 30: ಶಿವಮೊಗ್ಗ ಜನರ ಬಹು ದಿನಗಳ ಬೇಡಿಕೆ ಈಡೇರಿದೆ. ನೂತನ ವಿಮಾನ ನಿಲ್ದಾಣದಿಂದ (Shivamogga Airport) ಆಗಸ್ಟ್ 31 ರಂದು ವಿಮಾನಯಾನ ಸೇವೆ ಆರಂಭವಾಗುತ್ತಿದೆ. ನಾಳೆ ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಮೊದಲ ವಿಮಾನ ಆಗಮಿಸಲಿದೆ. ಈ ಹಿನ್ನೆಲೆ ನೂತನ ಏರ್ಪೋರ್ಟ್ಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಧು ಬಂಗಾರಪ್ಪಗೆ ಡಿಸಿ ಡಾ.ಸೆಲ್ವಮಣಿ, ಏರ್ಪೋರ್ಟ್ ಅಧಿಕಾರಿಗಳು ಸಾಥ್ ನೀಡಿದರು. ನಾಳೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಆರಂಭಗೊಳ್ಳಲಿದೆ.
ಟರ್ಮಿನಲ್ ಕಟ್ಟಡ, ರನ್ ವೇ, ಎಟಿಸಿ ಕಟ್ಟಡ ವೀಕ್ಷಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿಮಾನ ನಿಲ್ದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಧುನಿಕತೆಯಲ್ಲಿ ಏರ್ಪೋರ್ಟ್ ನಿರ್ಮಾಣಗೊಂಡಿದೆ. ಸದ್ಯ ರಾತ್ರಿ ಲ್ಯಾಂಡಿಂಗ್ ಸಂಬಂಧಿಸಿದಂತೆ ಕೆಲ ಕಾಮಗಾರಿ ನಡೆಯುತ್ತಿವೆ. ಇದರ ಸದ್ಬಳಕೆ ಆಗಬೇಕು, ಜನರ ಸಹಕಾರ ಅಗತ್ಯ. ಶಿವಮೊಗ್ಗದಲ್ಲಿ ಪ್ರವಾಸೋದ್ಯಮ, ಕೈಗಾರಿಕೆ ಬೆಳೆಯಬೇಕು. ಆಗ ವಿಮಾನ ನಿಲ್ದಾಣ ನಿರ್ಮಾಣದ ಪ್ರಯೋಜನ ಸಿಗಲಿದೆ. ಆ ನಿಟ್ಟಿನಲ್ಲಿ ನನ್ನ ಜವಾಬ್ದಾರಿ ಇರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ-ಬೆಂಗಳೂರು ವಿಮಾನಯಾನ ಸೇವೆ ಗುರುವಾರದಿಂದ ಆರಂಭ; ಎಂಬಿ ಪಾಟೀಲ್
ಆ. 31 ರಿಂದ ಶಿವಮೊಗ್ಗ ಏರ್ ಪೋರ್ಟ್ನಲ್ಲಿ ಸಾರ್ವಜನಿಕರಿಗಾಗಿ ವಿಮಾನ ಹಾರಾಟ ಆರಂಭಕ್ಕೆ ಎಲ್ಲ ವ್ಯವಸ್ಥೆಗಳು ಮಾಡಲಾಗಿದೆ. ಇಂಡಿಗೋ ಸಂಸ್ಥೆಯು ಶಿವಮೊಗ್ಗ ಬೆಂಗಳೂರು ನಡುವೆ ವಿಮಾನ ಹಾರಾಟಕ್ಕೆ ಮುಂದಾಗಿದೆ. ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11 ರಿಂದ ಕಾರ್ಯಾರಂಭ: ಎಂಬಿ ಪಾಟೀಲ್
ಮೊದಲ ವಿಮಾನ ಯಾನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ ಪಾಟೀಲ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳೂ ಇರಲಿದ್ದಾರೆ.
ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ 662.2 ಎಕರೆ ವಿಶಾಲ ಪ್ರದೇಶದಲ್ಲಿ ನೂತನ ಏರ್ ಪೋರ್ಟ್ ಸಿದ್ದಗೊಂಡಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆ ಮತ್ತು ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರ ವಿಶೇಷ ವಿಮಾನ ಹಾರಾಟ ಕೂಡಾ ನಡೆದಿದೆ. ಕಳೆದ ಹಲವು ವರ್ಷಗಳಿಂದ ಶಿವಮೊಗ್ಗ ಏರ್ ಫೋರ್ಟ್ ಕಾಮಗಾರಿ ಕುಂಟುತ್ತಾ ಎಡವುತ್ತಾ ಸಾಗಿತ್ತು. ಕೊನೆಗೂ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಏರ್ ಪೋರ್ಟ್ ಕಾಮಗಾರಿಯು ಪೂರ್ಣಗೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.