ಶಿವಮೊಗ್ಗಕ್ಕಿಂದು ಮೊದಲ ವಿಮಾನ, ಕೆಂಪೇಗೌಡ ಏರ್ ಪೋರ್ಟ್ನಲ್ಲಿ ಫ್ಲೈಟ್ ಹತ್ತುವ ಮುನ್ನ ರೈತರನ್ನು ಅಭಿನಂದಿಸಿದ ಮಾಜಿ ಸಿಎಂ ಯಡಿಯೂರಪ್ಪ
Shivamogga Airport: ಶಿವಮೊಗ್ಗಕ್ಕೆ ಮೊದಲ ವಿಮಾನವೇರಲು ಡಾಲರ್ಸ್ ಕಾಲೋನಿ ನಿವಾಸದಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ತೆರಳಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಅವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಬಿ.ವೈ. ವಿಜಯೇಂದ್ರಯಾಗಿದ್ದಾರೆ. ಇದೇ ವೇಳೆ, ಬೆಳಗ್ಗೆ 9.50ಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ.ಬಿ. ಪಾಟೀಲ್ ಮೊದಲ ವಿಮಾನದಲ್ಲಿ ಶಿವಮೊಗ್ಗಕ್ಕೆ ಪ್ರಯಾಣ ಮಾಡಲಿದ್ದಾರೆ.
ಬೆಂಗಳೂರು/ಶಿವಮೊಗ್ಗ, ಆಗಸ್ಟ್ 31: ಶಿವಮೊಗ್ಗದ (Shivamogga) ಜನತೆಗೆ ಇಂದು ಸಂಭ್ರಮದ ದಿನ. ಇಂದಿನಿಂದ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನಯಾನ (Shivamogga Airport) ಆರಂಭವಾಗಿದೆ. ಇದಕ್ಕೆ ಕಾರಣಕರ್ತರಾದವರು ಆ ಭಾಗದ ರೈತರು. ಶಿವಮೊಗ್ಗ ಏರ್ಪೋರ್ಟ್ ನಿರ್ಮಾಣಕ್ಕೆ ಕೃಷಿ ಜಮೀನುಗಳ ಸ್ವಾಧೀನದಿಂದ ಹಿಡಿದು ಯಾವುದೇ ಅಡ್ಡಿ ಆತಂಕವಿಲ್ಲದೆ, ತಕರಾರು ಇಲ್ಲದೆ ಸುಗಮವಾಗಿ ನಡೆದಿದೆ. ಹಾಗಾಗಿ ಎಲ್ಲಾ ಗೌರವ ಆ ಭಾಗದ ರೈತರಿಗೆ ಸಲ್ಲಬೇಕು. ಬೆಂಗಳೂರು ನಂತರ ದೊಡ್ಡ ವಿಮಾನ ನಿಲ್ಥಾಣ ಶಿವಮೊಗ್ಗದಲ್ಲಿ ಆಗಿದೆ. ಸಹಕಾರ ಕೊಟ್ಟ ರೈತರಿಗೆ (Farmers) ಧನ್ಯವಾದ ತಿಳಿಸುತ್ತೇನೆ, ಅಭಿನಂದನೆ ತಿಳಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಈ ಸಂದರ್ಭದಲ್ಲಿ ಹೇಳಿದ್ದಾರೆ. ಗಮನಾರ್ಹವೆಂದರೆ ಇಂದು ಶಿವಮೊಗ್ಗೆಕ್ಕೆ ಮೊದಲ ವಿಮಾನ ಹತ್ತಿರುವ ಯಡಿಯೂರಪ್ಪ ಅವರು ತಮ್ಮ ಜೊತೆ ಕೆಲ ರೈತರನ್ನು ಸಹ ವಿಮಾನದಲ್ಲಿ ಕರೆದುಕೊಂಡು ಹೋಗ್ತಿದ್ದಾರೆ.
ಶಿವಮೊಗ್ಗಕ್ಕೆ ವಿಮಾನವೇರಲು ಡಾಲರ್ಸ್ ಕಾಲೋನಿಯ ಖಾಸಗಿ ನಿವಾಸದಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ತೆರಳಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಜೊತೆ ತೆರಳಿದ್ದಾರೆ. ಇದೇ ವೇಳೆ, ಬೆಳಗ್ಗೆ 9.50ಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ.ಬಿ. ಪಾಟೀಲ್ ಮೊದಲ ವಿಮಾನದಲ್ಲಿ ಶಿವಮೊಗ್ಗಕ್ಕೆ ಪ್ರಯಾಣ ಮಾಡಲಿದ್ದಾರೆ.
Also Read: ಇಂದಿನಿಂದ ಶಿವಮೊಗ್ಗಕ್ಕೆ ವಿಮಾನಗಳ ಹಾರಾಟ ಶುರು: ಮೊದಲ ಪ್ರಯಾಣಿಕರು ಯಾರು ಗೊತ್ತಾ?
ಪ್ರಧಾನಿ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ್ದರು
ಇಂದಿನಿಂದ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಹಾರಾಟ ಶುರುವಾಗಲಿದ್ದು, ಬೆಂಗಳೂರಿನಿಂದ ಬೆಳಗ್ಗೆ 9.55ಕ್ಕೆ ಹೊರಡಲಿರುವ ಮೊದಲ ವಿಮಾನ ಬೆಳಗ್ಗೆ 11.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಮೊದಲ ವಿಮಾನದಲ್ಲಿ ಬಿಎಸ್ವೈ, ಸಚಿವ ಎಂ.ಬಿ.ಪಾಟೀಲ್ ಪ್ರಯಾಣ ಮಾಡಲಿದ್ದು, ಈಗಾಗಲೇ ವಿಮಾನ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ಸಹ ಜೊತೆಯಾಗಲಿದ್ದಾರೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27ರಂದು ವಿಮಾನ ನಿಲ್ದಾಣ ಉದ್ಘಾಟಿಸಿದ್ದರು.
ತಂದೆಯವರ ಕನಸನ್ನು ನನಸು ಮಾಡಿದ್ದು ರಾಘವೇಂದ್ರ: ಇಂದಿನಿಂದ ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆ ಆರಂಭ ಹಿನ್ನೆಲೆ ಬೆಂಗಳೂರಿನಲ್ಲಿ ಮಾತನಾಡಿದ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರು 2011 ರಲ್ಲಿ ಸಿಎಂ ಸ್ಥಾನದಿಂದ ಇಳಿದಾಗ ಶಿವಮೊಗ್ಗ ಏರ್ ಪೋರ್ಟ್ ಪೂರ್ಣಗೊಳಿಸಲು ಆಗಲಿಲ್ವಲ್ಲಾ ಅಂತಾ ತಂದೆಯವರು ಬಹಳ ನೊಂದುಕೊಂಡಿದ್ದರು. ಮತ್ತೆ ಸಿಎಂ ಆದ ಮೇಲೆ ರಾಘವೇಂದ್ರ ಅಧಿಕಾರಿಗಳ ಬೆನ್ನು ಹತ್ತಿ ಕೆಲಸ ಮಾಡಿದರು. ಇವತ್ತು ಅಧಿಕೃತವಾಗಿ ವಿಮಾನಯಾನ ಶುರುವಾಗುತ್ತಿದೆ. ಯಡಿಯೂರಪ್ಪನವರು, ರಾಘವೇಂದ್ರ ಅವರು ನಾನು ಪ್ರಯಾಣ ಮಾಡುತ್ತಿದ್ದೇವೆ. ತಂದೆಯವರ ಕನಸನ್ನು ನನಸು ಮಾಡಿದ್ದು ರಾಘವೇಂದ್ರ ಅವರು. ಮಲೆನಾಡು ಭಾಗದ ಜನರ ಬಹಳ ದಿನಗಳ ನಿರೀಕ್ಷೆ ಇದಾಗಿತ್ತು. ವಾಣಿಜ್ಯ, ಪ್ರವಾಸೋದ್ಯಮ ಎಲ್ಲದಕ್ಕೂ ಅನುಕೂಲ ಅಗಲಿದೆ. ಬಹಳ ಸಂತೋಷದಿಂದ ಮೊದಲ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ತಂದೆಯವರ ಜೊತೆ ರಾಘವೇಂದ್ರ, ನಾನು ಹೋಗುತ್ತಿರುವುದು ಕನಸು ನನಸಾದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂದು ಬೆಂಗಳೂರಿನಿಂದ ಮುಂದೆ ಗೋವಾ, ತಿರುಪತಿ ಇನ್ನಿತರ ಕಡೆಯಿಂದ ಶಿವಮೊಗ್ಗಕ್ಕೆ ಪ್ರಯಾಣ: ಸಚಿವ ಎಂಬಿ ಪಾಟೀಲ್
ಇಂದು ಶಿವಮೊಗ್ಗಕ್ಕೆ ಮೊದಲ ವಿಮಾನ ಬರ್ತಿದ್ದು ಐತಿಹಾಸಿಕ ಕ್ಷಣವಾಗಿದೆ. ಇಂದಿನಿಂದ ಒಂದೊಂದೆ ವಿಮಾನಗಳು ಶಿವಮೊಗ್ಗಕ್ಕೆ ಹಾರಾಟ ನಡೆಸಲಿವೆ. ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಡಲಿದ್ದು, ಮುಂದೆ ಗೋವಾ, ತಿರುಪತಿ ಸೇರಿದಂತೆ ಇನ್ನಿತರ ಕಡೆ ಶಿವಮೊಗ್ಗದಿಂದ ಪ್ರಯಾಣ ಬೆಳೆಸಲಿದೆ. ವಿಮಾನಗಳ ಹಾರಾಟದಿಂದ ಸುತ್ತಮುತ್ತಲಿನ 200 ಕಿಲೋ ಮೀಟರ್ ವರೆಗೂ ಅನುಕೂಲವಾಗಲಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಶಿವಮೊಗ್ಗ ಭಾಗದಲ್ಲಿ ಅನುಕೂಲವಾಗಲಿದೆ. ಇಂದು ನಾನು ನಮ್ಮ ಭಾಗದ ಕೆಲ ಶಾಸಕರು ಮತ್ತು ಮಾಜಿ ಸಿಎಂ ಯಡಿಯೂರಪ್ಪ ಎಲ್ಲರೂ ಹೋಗ್ತಿದ್ದೇವೆ ಎಂದು ಕೆಂಪೇಗೌಡ ಏರ್ಪೊಟ್ ನಲ್ಲಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದರು.
ಶಿವಮೊಗ್ಗ ಏರ್ಪೋರ್ಟ್ನಿಂದ ಮಧ್ಯ ಕರ್ನಾಟಕಕ್ಕೆ ಬಹಳ ಅನುಕೂಲ ಆಗಲಿದೆ- ಅರಗ ಜ್ಞಾನೇಂದ್ರ
ಶಿವಮೊಗ್ಗಕ್ಕೆ ಇದೊಂದು ಐತಿಹಾಸಿಕ ಕ್ಷಣ. ಶಿವಮೊಗ್ಗ ಜನ ಖುಷಿ ಪಡುವ ದಿನ. ವಿಮಾನ ನಿಲ್ಥಾಣ ಆರಂಭದಿಂದ ಕೈಗಾರಿಕೆ ಸ್ಥಾಪನೆಗೆ ಅನುಕೂಲವಾಗಲಿದೆ. ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ. ಈ ಏರ್ಪೋರ್ಟ್ ನಿಂದ ಮಧ್ಯ ಕರ್ನಾಟಕಕ್ಕೆ ಬಹಳ ಅನುಕೂಲ ಆಗಲಿದೆ. ಕೆಂಪೇಗೌಡ ಏರ್ಪೋಟ್ ನಲ್ಲಿ ಮಾಜಿ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)
Published On - 9:32 am, Thu, 31 August 23