ಶಿವಮೊಗ್ಗ: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ (Shivamogga Bajrang Dal Activist) ಕೊಲೆ ಪ್ರಕರಣದ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ಬೇಕಾದ ಅನುಕೂಲಕರ ವ್ಯವಸ್ಥೆ ಕಲ್ಪಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಗೃಹ ಸಚಿವರ ವಿರುದ್ಧ ಹರ್ಷ ಕುಟುಂಬಸ್ಥರು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಶಿವಮೊಗ್ಗ ನಗರದಲ್ಲಿ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home minister Araga Jnanendra) ಪ್ರತಿಕ್ರಿಯೆ ನೀಡಿದ್ದು, ಹರ್ಷ ಕುಟುಂಬದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಂತಕರು ಏನೆಲ್ಲಾ ಮಾಡುತ್ತಿದ್ದಾರೆ. ಘಟನೆ ಕುರಿತು ಎಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಹರ್ಷ ಕುಟುಂಬಸ್ಥರಿಗೆ ಅಷ್ಟೇ ಅಲ್ಲ, ಯಾರಿಗೂ ಅಗೌರವ ತೋರಿಲ್ಲ ಎಂದು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾರೋಶವಾಗಿ ಜೀವನ ನಡೆಸುತ್ತಿರುವ ಬಗ್ಗೆ ಅದರಲ್ಲೂ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಆರೋಪಿಗಳು ಮೋಜುಮಸ್ತಿಯಲ್ಲಿ ತೊಡಗಿರುವುದನ್ನು ಆಕ್ಷೇಪಿಸಿ, ಹರ್ಷ ಸೋದರಿ ಧ್ವನಿಯೆತ್ತಿದ್ದರು. ತಮ್ಮ ಆ ದುಗುಡವನ್ನು ತೋಡಿಕೊಳ್ಳಲು ಗೃಹ ಸಚಿವರ ಮನೆಗೆ ರಾತ್ರಿ ವೇಳೆ ಹೋಗಿದ್ದಾಗ ಹೆಣ್ಣು ಮಗಳು ಎಂಬ ಕನಿಷ್ಠ ಸೌಜನ್ಯವೂ ಇಲ್ಲದೆ ತಮ್ಮನ್ನು ಅಗೌರವಿಸಿದರು ಎಂದು ಅಲವತ್ತುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ನನ್ನ ಜೊತೆ ಹರ್ಷ ಸಹೋದರಿ ಸಮಾಧಾನದಿಂದ ಮಾತನಾಡಿಲ್ಲ. ಯಾಕೋ ಹರ್ಷ ಕುಟುಂಬಕ್ಕೆ ಸಮಾಧಾನ ಇಲ್ಲ. ಇದಕ್ಕೆ ನಾನು ಏನೂ ಹೇಳುವುದಿಲ್ಲ. ಮೊನ್ನೆ ಶ್ರೀರಾಮಸೇನೆಯ 20 ಕಾರ್ಯಕರ್ತರ ಜೊತೆ ಅವರು ಬಂದಿದ್ದರು. ಅಶ್ವಿನಿ ವರ್ತನೆಯಿಂದ ಶ್ರೀರಾಮಸೇನೆ ಅವರಿಗೇ ಬೇಜಾರು ಆಗಿದೆ. ಅವರೆಲ್ಲ ನನ್ನ ಜೊತೆ ಸಮಾಧಾನದಿಂದ ಮಾತಾಡಿ ಹೋಗಿದ್ದಾರೆ ಎಂದು ಶಿವಮೊಗ್ಗ ನಗರದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.