
ಶಿವಮೊಗ್ಗ, ನವೆಂಬರ್ 18: ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಭಗವದ್ಗೀತೆ (Bhagavad Gita) ಮತ್ತು ಅಪರಾಧ ನಿಯಂತ್ರಣ’ ಎಂಬ ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಇದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (KDSS)ಯಿಂದ ಪ್ರತಿಭಟನೆ ಮಾಡಲಾಗಿತ್ತು. ಆದರೆ ಸಾಕಷ್ಟು ವಿರೋಧ ಮಧ್ಯೆ ವಿಚಾರಗೋಷ್ಠಿ ಮಾಡಲಾಗಿದೆ. ಮಹಾತ್ಮ ಗಾಂಧೀಜಿಯವರು ಭಗವದ್ಗೀತೆಯನ್ನು ಅಪಾರವಾಗಿ ಗೌರವಿಸುತ್ತಿದ್ದರು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಎಂಬ ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಈ ವಿಚಾರಗೋಷ್ಠಿ ಬಲಪಂಥೀಯ ಅಜೆಂಡಾ ಮತ್ತು ಕುವೆಂಪು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (KDSS)ಯಿಂದ ಪ್ರತಿಭಟಿಸಲಾಗಿತ್ತು. ವಿರೋಧದ ಮಧ್ಯೆಯೇ ವಿಚಾರಗೋಷ್ಠಿ ನಡೆದಿದೆ.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅರವಿಂದೋ ಘೋಷ್, ಸ್ವಾಮಿ ವಿವೇಕಾನಂದ, ಸುಭಾಶ್ಚಂದ್ರ ಬೋಸ್, ಮಹಾತ್ಮ ಗಾಂಧೀಜಿ ಮೊದಲಾದವರ ಮೇಲೆ ಭಗವದ್ಗೀತೆ ಪ್ರಭಾವ ಬೀರಿದ್ದು, ಅವರಿಗೆ ಆತ್ಮಶಕ್ತಿಯನ್ನು ನೀಡಿತ್ತು. ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್ ಕೂಡ ಭಗವದ್ಗೀತೆಯಿಂದ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಜೀವನ ಪಥವನ್ನು ದರ್ಶನ ಮಾಡಿಸುವುದೇ ಭಗವದ್ಗೀತೆ ಎಂದು ಹೇಳಿದ್ದಾರೆ.
ಕುಲಸಚಿವ ಪ್ರೊ.ಎ.ಎಲ್.ಮಂಜುನಾಥ್ ಮಾತನಾಡಿ, ಭಗವದ್ಗೀತೆಯಲ್ಲೂ ಚಾತುರ್ವರ್ಣ ವ್ಯವಸ್ಥೆ ಇದೆ, ಅದೇ ಕಾರಣಕ್ಕೆ ಇಂದು ಆಚೆ ಪ್ರತಿಭಟನೆ ನಡೆಯುತ್ತಿದೆ. ದಲಿತ ಸಂಘರ್ಷ ಸಮಿತಿ ಅವರು ಆಚೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ಒಳಗೆ ಬಿಡುವ ಇಚ್ಛೆ ನನಗಿದೆ, ಆದರೆ ಇದೆ ಸೂಕ್ತ ವೇದಿಕೆ ಅಲ್ಲ. ಅದಕ್ಕೂ ಪ್ರತ್ಯೇಕವಾದ ವೇದಿಕೆಯನ್ನು ಕಲ್ಪಿಸಿಕೊಡುತ್ತೇವೆ. ರಾಜಕೀಯದವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ; ವಿಚಾರಗೋಷ್ಠಿಗೆ KDSS ವಿರೋಧ
ಮುಂದಿನ ದಿನಗಳಲ್ಲಿ ಇಂತಹ ಅವಕಾಶಗಳು ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ಆದರೆ ಇದು ಚರ್ಚೆಯ ರೂಪದಲ್ಲಿ ನಡೆಯಲಿ. ಇಂದು ಲೇಬಲ್ಗಳನ್ನು ಕಟ್ಟಿ ಮಾತನಾಡುತ್ತಾರೆ, ವಿಚಾರಗಳ ಕುರಿತು ಮಾತ್ರ ಮಾತನಾಡಬೇಕು. ಅಂಬೇಡ್ಕರ್ ಅವರಿಗೆ ಭಗವದ್ಗೀತೆಯ ಬಗ್ಗೆ ದ್ವಂದ್ವಗಳು ಇದಾವೆ. ಸ್ವಾಮೀಜಿಗಳಲ್ಲಿ ನಾನು ವಿನಮ್ರವಾಗಿ ವಾದವನ್ನು ಮಾಡುತ್ತೇನೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.