
ಶಿವಮೊಗ್ಗ, ಡಿಸೆಂಬರ್ 05: ಜಮೀನು (land) ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡದ ಜಿಲ್ಲಾಡಳಿತದ ವಿರುದ್ಧ ರೈತನೊಬ್ಬ (farmer) ಆದೇಶ ತಂದಿದ್ದಾನೆ. ಜಿಲ್ಲಾಧಿಕಾರಿ ಕಾರು ಹಾಗೂ ಕಚೇರಿಯ ಪೀಠೋಪಕರಣ ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶದ ಪ್ರತಿ ಹಿಡಿದು ಡಿಸಿ ಕಚೇರಿಗೆ ಬಂದ ರೈತ, ನನ್ನ ಜಮೀನಿನ 95 ಲಕ್ಷ ರೂ. ಪರಿಹಾರ ಕೊಡಿ, ಇಲ್ಲವೇ ಕಾರು ಕೊಡಿ ಅಂತಾ ಪಟ್ಟು ಹಿಡಿದ್ದಾರೆ.
ಶಿವಮೊಗ್ಗದ ಹರಮಘಟ್ಟ ಗ್ರಾಮದ ನಂದ್ಯಪ್ಪ ಎಂಬ ರೈತನಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಕಾರು ಹಾಗೂ ಕಚೇರಿಯ ಪೀಠೋಪಕರಣ ಜಪ್ತಿಗೆ ಶಿವಮೊಗ್ಗ ನ್ಯಾಯಾಲಯ ಆದೇಶ ನೀಡಿದೆ. 1992ರಲ್ಲಿ ಒಂದು ಎಕರೆ ವಶಪಡಿಸಿಕೊಂಡಿದ್ದ ಜಿಲ್ಲಾಡಳಿತ ಈವರೆಗೂ ಪರಿಹಾರ ನೀಡಿಲ್ಲ ಅಂತಾ ನ್ಯಾಯಾಲಯದ ಮೊರೆ ಹೋಗಿದ್ದ ನಂದ್ಯಪ್ಪನಿಗೆ ನ್ಯಾಯಾಲಯ ಆದೇಶ ನೀಡಿದೆ.
ಇದನ್ನೂ ಓದಿ: ನನ್ನ ಜೀವನದ ಅವಿಸ್ಮರಣೀಯ ಕ್ಷಣವನ್ನು ಕಿತ್ತುಕೊಂಡಿದೆ: ಇಂಡಿಗೋ ವಿರುದ್ಧ ಪ್ರಯಾಣಿಕ ಆಕ್ರೋಶ
ಅಷ್ಟಕ್ಕೂ 1992ರಲ್ಲಿ 22 ಲಕ್ಷ ರೂ ಪರಿಹಾರ ನೀಡಬೇಕಿದ್ದ ಸರ್ಕಾರ, ಕೇವಲ 9 ಲಕ್ಷ ರೂ. ಪರಿಹಾರ ನೀಡಿ ಉಳಿದ 13 ಲಕ್ಷಕ್ಕೆ ವಿಳಂಬ ಮಾಡಿದೆ. ಹೀಗಾಗಿ ಇದೀಗ 95 ಲಕ್ಷದ 88,283 ರೂ ಹಣ ಪರಿಹಾರವಾಗಿ ನೀಡುವಂತೆ ಶಿವಮೊಗ್ಗ 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶಿಸಿದೆ.
ಒಂದು ವೇಳೆ ಪರಿಹಾರ ನೀಡದೆ ಹೋದರೆ, ಜಿಲ್ಲಾಧಿಕಾರಿಗಳ ಕಾರು ಮತ್ತು ಕಚೇರಿ ಪಿಠೋಪಕರಣ ಜಪ್ತಿಗೆ ಆದೇಶಿಸಿದೆ. ಹೀಗಾಗಿ ಕೋರ್ಟ್ ಆಮೀನ್ರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತ, ಜಿಲ್ಲಾಧಿಕಾರಿ ಭೇಟಿ ಮಾಡಿ ಮತ್ತೊಮ್ಮೆ ಪರಿಹಾರ ಕೊಡಿ ಅಂತಾ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ನನಗೆ ಮಾಹಿತಿ ಕೊರತೆ ಇದ್ದು, ನೋಟಿಸ್ ಸಹ ನನಗೆ ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದ್ದಾರೆ. ರೈತನಿಗೆ ತೊಂದರೆಯಾಗದಂತೆ ಪರಿಹಾರಕ್ಕಾಗಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು
ಒಟ್ಟಿನಲ್ಲಿ ಶಿವಮೊಗ್ಗದ ಈ ರೈತನ 1 ಎಕರೆ ಜಮೀನಿಗೆ ಪರಿಹಾರವಾಗಿ 22 ಲಕ್ಷ ರೂ. ಮಾತ್ರ ನೀಡಬೇಕಿದ್ದ ಜಿಲ್ಲಾಡಳಿತ, ಈಗ ನ್ಯಾಯಾಲಯದ ಆದೇಶದಂತೆ 95 ಲಕ್ಷ ರೂ. ನೀಡುವಂತಾಗಿದೆ. ರೈತನಿಗೆ ಜಿಲ್ಲಾಧಿಕಾರಿ ನೀಡಿದ ಭರವಸೆಯಂತೆ ಪರಿಹಾರ ಸಿಗುತ್ತಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.