ಶಿವಮೊಗ್ಗ: ನಾಯಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅವುಗಳು ಮಾಡುವ ತುಂಟಾಟಗಳಿಂದ ಪ್ರತಿಯೊಬ್ಬರು ನಾಯಿಗಳನ್ನು ಇಷ್ಟಪಡುತ್ತಾರೆ. ಇನ್ನು ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ‘ಚಾರ್ಲಿ’ ಚಿತ್ರವನ್ನು ನೋಡಿದವರೆಲ್ಲರೂ ಶ್ವಾನ (Dog) ಪ್ರೇಮಿಗಳಾಗಿದ್ದಾರೆಂದರೆ ತಪ್ಪಾಗುವುದಿಲ್ಲ. ಈ ‘ಚಾರ್ಲಿ’ ಚಿತ್ರದಲ್ಲಿ ಒಂದು ದೃಶ್ಯವಿದೆ. ನಾಯಕ ನಟ ತಲೆತಿರುಗಿ ಬಿಳ್ಳುತ್ತಾನೆ. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಚಾರ್ಲಿ(ಶ್ವಾನ) ಕೂಡ ಆತನನ್ನು ನೋಡಲು ಆಸ್ಪತ್ರೆವರೆಗೂ ಹಿಂಬಾಲಿಸಿಕೊಂಡು ಬರುತ್ತದೆ. ಸದ್ಯ ಇದೇ ತರಹ ಒಂದು ಮನಕಲಕುವ (heart touching) ಘಟನೆಯೊಂದು ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.
ತೀರ್ಥಹಳ್ಳಿಯ ಆಸ್ಪತ್ರೆಯೊಂದರ ಮುಂದೆ ತನ್ನ ಮಾಲೀಕನನ್ನು ನೋಡಲು ಶ್ವಾನವೊಂದು ಕಾಯುತ್ತಾ ಕುಳಿತಿರುವಂತಹ ಫೋಟೋ ಒಂದು ವೈರಲ್ ಆಗುತ್ತಿದೆ. ಸಾಕು ಮಾಲೀಕನ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿರುವ ಈ ಶ್ವಾನದ ಮೂಕ ಪ್ರೇಮದ ಫೋಟೋಗಳನ್ನು ಪಶುವೈದ್ಯ ಡಾ.ಯುವರಾಜ್ ಎಂಬುವವರು ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪನ ಹುಟ್ಟುಹಬ್ಬದ ದಿನ ಆತನ ಕನಸಿನ ಕಾರನ್ನು ಕೊಡಿಸಿದ ಮಗಳು
ತನ್ನ ಸಾಕು ಮಾಲೀಕನಿಗಾಗಿ ಆಸ್ಪತ್ರೆ ಹೊರಗಡೆ ಕಾಯುತ್ತಿರುವ ಶ್ವಾನದ ಹೆಸರು ಪಪ್ಪಿ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಎಂಬುವವರು ಈ ಪಪ್ಪಿಯನ್ನು ಸಾಕಿದ್ದಾರೆ. ನಾಗರತ್ನ ಶಾಸ್ತ್ರಿಯವರು ಅನಾರೋಗ್ಯದಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆವಾಗಿನಿಂದಲೂ ಸಾಕುನಾಯಿ ಪುಪ್ಪಿ ಆಸ್ಪತ್ರೆಯ ಬಾಗಿಲು ಕಾಯಲು ಆರಂಭಿಸಿದೆ. ಅಲ್ಲಿಯೇ ಕಾವಲು ಕಾಯುತ್ತಿರುವ ಪಪ್ಪಿಯನ್ನು ನೋಡಿದ ಆಸ್ಪತ್ರೆಯ ಇತರೆ ಸಿಬ್ಬಂದಿಗಳು ಮಮ್ಮಲ ಮರುಗಿದ್ದಾರೆ. ನಾಗರತ್ನ ಶಾಸ್ತ್ರಿ ಅವರು ಬೇಗ ಗುಣವಾಗಿ ಮನೆಗೆ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಆದರೆ ನಾಗರತ್ನ ಶಾಸ್ತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಇತ್ತ ಪಪ್ಪಿಯ ಮೂಕವೇದನೆ ಸಿಬ್ಬಂದಿಗಳ ಕಣಂಚಲಿ ನೀರು ತರಿಸಿದೆ.
ಇನ್ನು ಈ ಕುರಿತಾಗಿ ನಾಗರತ್ನರವರ ಪುತ್ರಿ ಸುಧಾ ಅವರು ಮಾತನಾಡಿ, ಒಂದುವರೆ ತಿಂಗಳಿನ ನಾಯಿಯನ್ನು ತಂದು ಸಾಕಿದ್ದೇವು. ಈಗ ಪಪ್ಪಿಗೆ 8 ತಿಂಗಳು. ಅಮ್ಮನಿಗೆ ವಯಸ್ಸಾಗಿದ್ದು, ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಪಪ್ಪಿ ಕೂಡ ನಮ್ಮ ಜೊತೆಗೆ ಆಸ್ಪತ್ರೆಗೆ ಬರುತ್ತಿತ್ತು. ಅದು ನಮ್ಮನೆ ನಾಯಿ ಎಂಬುದು ಎಲ್ಲರಿಗೂ ಗೊತ್ತಾಗಿ ಹೋಗಿದೆ. ಅಲ್ಲದೆ ಅಮ್ಮನ ನಿಧನದ ಬಳಿಕ ಪಪ್ಪಿಯು ಆಹಾರವನ್ನು ಸೇವಿಸುತ್ತಿಲ್ಲ. ಮನೆಯಲ್ಲಿ ಯಾರಿಗೆ ಆರೋಗ್ಯ ಸಮಸ್ಯೆಯಾದರೂ ಪಪ್ಪಿ ಕೂಡ ಬೇಸರ ಪಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 8ನೇ ಕ್ಲಾಸ್ ವಿದ್ಯಾರ್ಥಿನಿಗೆ ಪ್ರೇಮ ಪತ್ರ, ಮಗಳ ವಯಸ್ಸಿನ ಬಾಲಕಿಯನ್ನು ಮದ್ವೆಯಾಗುವ ಆಸೆ ವ್ಯಕ್ತಪಡಿಸಿದ ಶಿಕ್ಷಕ
ಉಂಡ ಮನೆಗೆ ದ್ರೋಹ ಬಗೆಯುವ ಈ ಕಾಲದಲ್ಲಿ ಮನುಷ್ಯರಿಗಿಂತ ಶ್ವಾನಗಳೇ ಎಷ್ಟೋ ಪಾಲು ಮೇಲು ಎಂದು ಹೇಳಲಾಗುತ್ತಿದೆ. ಸದ್ಯ ತೀರ್ಥಹಳ್ಳಿಯ ಪಪ್ಪಿಯ ನಿಷ್ಠೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಪಪ್ಪಿಯ ಕಥೆ ಓದಿದ ಜನರು ಮನದ ಕದ ತಟ್ಟಿ ಭಾವುಕತೆಯನ್ನು ಎಬ್ಬಿಸಿದೆ ಎಂದು ಹೇಳುತ್ತಿದ್ದಾರೆ. ನಾಯಿ ಎಂದು ಬೈಯ್ದರೂ ಸಹ ಅವುಗಳು ನಮ್ಮನ್ನು ಪ್ರೀತಿಸುವ ಪರಿಯನ್ನು ವಿವರಿಸುವುದು ಕಷ್ಟಸಾಧ್ಯ. ಇದಕ್ಕೆ ಈ ಪಪ್ಪಿ ಎಂಬ ಶ್ವಾನವೇ ಸಾಕ್ಷಿ.
ವರದಿ: ಬಸವರಾಜ್ ಯರಗಣವಿ, ಟಿವಿ9, ಶಿವಮೊಗ್ಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:55 pm, Sun, 8 January 23