ಶಿವಮೊಗ್ಗ, ಜನವರಿ 16: ಕರ್ತವ್ಯ ವಿಚಾರವಾಗಿ ವೈದ್ಯೆ ಮತ್ತು ನರ್ಸ್ ನಡುವೆ ಗಲಾಟೆ (clash) ನಡೆದಿದೆ. ಈ ಹಿನ್ನಲೆ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಬಿಆರ್‌ಪಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ಹಂಸವೇಣಿ ಮತ್ತು ನರ್ಸ್ ಸುಕನ್ಯಾರಿಂದ ಪರಸ್ಪರ ಟಾರ್ಚರ್ ಆರೋಪ ಕೇಳಿಬಂದಿದ್ದು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಭದ್ರಾವತಿ ತಾಲೂಕಿನ ಬಿಆರ್ಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಹಂಸವೇಣಿ ಮತ್ತು ಸ್ಟಾಪ್ ನರ್ಸ್ ಸುಕನ್ಯಾ ಸೇವೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕು ವರ್ಷದಿಂದ ಡಾ. ಹಂಸವೇಣಿ ಅಲ್ಲಿ ಸೇವೆ ಸಲ್ಲಿಸಿದರೆ, ಸುಕನ್ಯಾ ಅಲ್ಲಿಯೇ 8 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಕೆಲ ತಿಂಗಳಿನಿಂದ ಇಬ್ಬರ ನಡುವೆ ಕೆಲ ವಿಚಾರಕ್ಕೆ ಮನಸ್ತಾಪ ಶುರುವಾಗಿತ್ತು. ವೈದ್ಯ ಮತ್ತು ನರ್ಸ್ ನಡುವೆ ಪರಸ್ಪರ ವಾರ್ ಜಾಸ್ತಿ ಆಗುತ್ತಾ ಹೋಗಿದೆ.
ಇದನ್ನೂ ಓದಿ: ತುಂಗಾನದಿ ಪಾತ್ರದಲ್ಲಿ ಸಿಡಿಮದ್ದು ಸ್ಫೋಟ: ಮೂವರ ಪೈಕಿ ಓರ್ವ ಬಾಲಕನ ಸ್ಥಿತಿ ಗಂಭೀರ
ನರ್ಸ್ ಸುಕನ್ಯಾ ಮತ್ತು ಇತರೆ ಸಿಬ್ಬಂದಿಗಳ ಜೊತೆ ಸೇರಿ ವೈದ್ಯೆಗೆ ಕಿರುಕುಳ ಕೊಡುತ್ತಿದ್ದರಂತೆ. ತನ್ನ ಪ್ರಭಾವ ಬಳಸಿಕೊಂಡಿ ನರ್ಸ್ ವೈದ್ಯೆನ್ನು ಬಿಆರ್‌ಪಿ ಸರಕಾರಿ ಆಸ್ಪತ್ರೆಯಿಂದ ಭದ್ರಾವತಿ ತಾಲೂಕಿನ ಸನ್ಯಾಸಿಕೋಡಿಮಗ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ಎತ್ತಂಗಡಿ ಮಾಡಿಸಿದ್ದಾರಂತೆ. ಕಳೆದ ಒಂದು ತಿಂಗಳಿನಿಂದ ವೈದ್ಯೆ ಇದೇ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಎತ್ತಂಗಡಿ ಬಳಿಕವೂ ನರ್ಸ್ ಕಾಲ್ ಮಾಡಿ ವೈದ್ಯೆಗೆ ಅಪಹಾಸ್ಯ ಮಾಡುತ್ತಿದ್ದಳಂತೆ. ಹೇಗೆ ಬಿಆರ್‌ಪಿ ಆಸ್ಪತ್ರೆಯಿಂದ ಓಡಿಸಿದೆ ಅಂತಾ ಕಾಲ್ ಮಾಡಿ ಗೇಲಿ ಮಾಡುತ್ತಿದ್ದರಂತೆ.
ಎತ್ತಂಗಡಿ ಬಳಿಕವೂ ವೈದ್ಯೆಗೆ ಟಾರ್ಚರ್ ದಿನೇ ದಿನೇ ಹೆಚ್ಚಾಗಿದೆ. ಇದರಿಂದ ಮನನೊಂದು ವೈದ್ಯೆಯು ಇಂದು ಸನ್ಯಾಸಿಕೋಡಿಮಗ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರೆಗಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥ ವೈದ್ಯೆಯನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಒಂದೆಡೆ ವೈದ್ಯೆಯೂ ನರ್ಸ್ ಮೇಲೆ ಆರೋಪಿಸಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮತ್ತೊಂದಡೆ ಬಿಆರ್‌ಪಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್ ಸುಕನ್ಯಾ ಕೂಡ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವೈದ್ಯೆ ಹಂಸವೇಣಿ ಅವರು ನಿರಂತರವಾಗಿ ನರ್ಸ್ ಸುಕನ್ಯಾಗೆ ಟಾರ್ಚರ್ ಕೊಡುತ್ತಿದ್ದರಂತೆ. ಸರಿಯಾಗಿ ಒಂದೆಡೆ ಕುಳಿತು ಊಟ ಮಾಡುವುದಕ್ಕೂ ಆಸ್ಪತ್ರೆಯಲ್ಲಿ ಅವಕಾಶ ಕೊಡುತ್ತಿರಲಿಲ್ಲವಂತೆ. ಯಾವುದೇ ಕೆಲಸ ಮಾಡಿದ್ರೂ ಅದಕ್ಕೆ ಕಿರಿಕಿರಿ ಮಾಡುತ್ತಿದ್ದಂತೆ. ಹೀಗೆ ನಿರಂತರವಾಗಿ ವೈದ್ಯೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ನರ್ಸ್ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಸುಕನ್ಯಾ ಕೂಡ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ವಿಷ ಲಡ್ಡು ಪ್ರಕರಣದ ಸ್ಫೋಟಕ ಸತ್ಯ ಬಯಲು: ಲವ್ ಬ್ರೇಕಪ್ ಆಗಿದ್ದಕ್ಕೆ ವಿಷ ಗಿಫ್ಟ್!
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯೆ ಮತ್ತು ನರ್ಸ್ ನಡುವಿನ ಕಿತ್ತಾಟವು ಬೀದಿಗೆ ಬಂದಿದೆ. ಪರಸ್ಪರ ಇಬ್ಬರು ಕಿರುಕುಳದ ಆರೋಪ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸಲಿಗೆ ವೈದ್ಯೆ ಮತ್ತು ನರ್ಸ್ ನಡುವೆ ಜಗಳಕ್ಕೆ ಕಾರಣವೇನು? ವೈದ್ಯೆಯನ್ನು ಬಿಆರ್ ಪಿಯಿಂದ ಎತ್ತಂಗಡಿ ಮಾಡಿದ್ದು ಯಾಕೆ? ಸರಕಾರಿ ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆ ಎನ್ನುವ ಸಂಗತಿಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಬಹಿರಂಗಪಡಿಸಬೇಕಿದೆ. ಇಬ್ಬರ ಆತ್ಮಹತ್ಯೆ ಪ್ರಕರಣವು ಮತ್ತೆ ಏನೆಲ್ಲಾ ಟ್ವಿಸ್ಟ್ ಪಡೆಯುತ್ತಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:46 pm, Thu, 16 January 25