ಪೊಲೀಸ್ ಅಧಿಕಾರಿಯಾದ ಎಂಟು ವರ್ಷದ ಬಾಲಕ, ಕನಸು ಈಡೇರಿಸಿದ ಶಿವಮೊಗ್ಗ ಪೊಲೀಸರು

ಎಂಟೂವರೆ ವರ್ಷದ ಮಗುವಿಗೆ ಈಗಾಗಲೇ ಹೃದಯ ಕಾಯಿಲೆ ಹಿನ್ನಲೆ ಶಸ್ತ್ರಚಿಕಿತ್ಸೆ ಕೂಡಾ ಆಗಿದೆ. ಈತನ ಜೀವ ಉಳಿಸಲು ಪೋಷಕರು ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಪೊಲೀಸ್ ಅಧಿಕಾರಿಯಾಗುವ ಕನಸು ಕಾಣಿಸುತ್ತಿರುವ ಮಗ ಆಸೆಯನ್ನು ಶಿವಮೊಗ್ಗ ಪೊಲೀಸರ ಸಹಾಯದಿಂದ ಈಡೇರಿಸಿದ್ದಾರೆ.

Follow us
| Updated By: Rakesh Nayak Manchi

Updated on: Aug 17, 2023 | 5:41 PM

ಶಿವಮೊಗ್ಗ, ಆಗಸ್ಟ್ 17: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಎಂಟೂವರೆ ವರ್ಷದ ಆಜಾನ್ ಖಾನ್​ನ ಪೊಲೀಸ್ ಅಧಿಕಾರಿಯಾಗುವ ಕನಸನ್ನು ಮಾನವೀಯ ನೆಲೆಗಟ್ಟಿನಲ್ಲಿ ಶಿವಮೊಗ್ಗ (Shivamogga) ಪೊಲೀಸರು ಈಡೇರಿಸಿದ್ದಾರೆ. ಒಂದು ಗಂಟೆ ಮಟ್ಟಿಗೆ ಆಜಾನ್​ನನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಆಗಿ ಮಾಡಲಾಯಿತು. ಈ ವೇಳೆ ಕಳ್ಳನೊಬ್ಬನಿಗೆ ಬುದ್ಧಿವಾದವೂ ಹೇಳಿ ಗಮನ ಸೆಳೆದಿದ್ದಾನೆ.

ತಾನು ಪೊಲೀಸ್ ಅಧಿಕಾರಿ ಆಗಬೇಕೆನ್ನುವ ಕನಸನ್ನು ಪೋಷಕರ ಜೊತೆ ಆಜಾನ್ ಖಾನ್ ಹಂಚಿಕೊಂಡಿದ್ದನು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಮಗುವಿನ ಬಯಕೆಯನ್ನು ಪೋಷಕರು ಜಿಲ್ಲಾ ಎಸ್​​ಪಿ ಅವರ ಗಮನಕ್ಕೆ ತರಲಾಗಿದೆ. ಮೇಲಾಧಿಕಾರಿಗಳ ಅನುಮತಿ ಮೇರೆಗೆ ಠಾಣೆಯ ಇನ್​ಸ್ಪೆಕ್ಟರ್ ಅಂಜನ್ ಕುಮಾರ್ ಅವರು ಆಜಾನ್ ಖಾನ್ ಕೋರಿಕೆಯನ್ನ ಈಡೇರಿಸಿದ್ದಾರೆ.

ದೊಡ್ಡಪೇಟೆ ಪೊಲೀಸ್ ಠಾಣೆಗೆ ನೂತನ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ಎಂಟೂವರೆ ವರ್ಷದ ಆಜಾನ್ ಖಾನ್ ಅಧಿಕಾರ ಸ್ವೀಕರಿಸಿದ್ದಾನೆ. ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಸಮ್ಮುಖದಲ್ಲಿ ಇನ್​ಸ್ಪೆಕ್ಟರ್ ಸ್ಥಾನದಲ್ಲಿ‌ ಕುಳಿತು ಸಹಿ ಹಾಕಿ ಅಧಿಕಾರ ಸ್ವೀಕರಿಸಿದ್ದಾನೆ. ಅಧಿಕಾರ ಸ್ವೀಕರಿಸಿದ ಆಜಾನ್ ಖಾನ್ ರೋಲ್ ಕಾಲ್ ನಡೆಸಿದ್ದಾರೆ. ರೋಲ್ ಕಾಲ್ ಎಂದರೆ, ಪೊಲೀಸರಿಗೆ ಡ್ಯೂಟಿ ಬದಲಿಸುವುದು. ರೋಲ್ ಕಾಲ್​ನಲ್ಲಿ ಇಬ್ಬರು ಸಿಬ್ಬಂದಿಗೆ ರಜೆ ನೀಡಲಾಗಿದೆ.

ಇದನ್ನೂ ಓದಿ: ಹಿಂಡಲಗಾ ಬಳಿಕ ಶಿವಮೊಗ್ಗ ಕೇಂದ್ರ ಕಾರಾಗೃಹದ ಅಕ್ರಮ ಬಯಲು; ದುಡ್ಡು ಕೊಟ್ರೆ ಸಾಕು ಕೈದಿಗೂ ಸಿಗತ್ತೆ ವಿಐಪಿ ಸೌಲಭ್ಯ

ಇನ್​ಸ್ಪೆಕ್ಟರ್ ಸಮವಸ್ತ್ರ ಧರಿಸಿ ಬಂದ ಆಜಾನ್ ಎಸ್​​ಪಿ ಅವರಿಗೆ ಧನ್ಯವಾದಗಳನ್ನ ಹೇಳಿದ್ದಾರೆ. ನಾನು ನನ್ನ ಅಪ್ಪನಿಗೆ ಒಂದು ದಿನ ಪಿಐ ಆಗಬೇಕು ಎಂದು ಹೇಳಿದ್ದೆ. ಎಸ್​ಪಿ ಸಾಹೇಬ್ರು ಅವಕಾಶ ನೀಡಿದ್ದಾರೆ ಎಂದು ಆಜಾನ್ ಹೇಳಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರಿನ ತಂದೆ ತಬ್ರೇಜ್ ಖಾನ್ ಮತ್ತು ತಾಯಿ ನಗ್ಮಾ ದಂಪತಿ ಪುತ್ರ ಆಜಾನ್ ಖಾನ್. ಮೂರು ತಿಂಗಳ ಮಗು ಇರುವಾಗಲೇ ಹಾಫ್ ಹಾರ್ಟೆಡ್ ಮಗುವಾಗಿ ಹುಟ್ಟಿದ್ದ ಆಜಾನ್, ಇಲ್ಲಿಯವರೆಗೂ ಬದುಕಿ ಬಂದ ಹಾದಿಯೇ ಕಷ್ಟವಾಗಿತ್ತು. ಎಂಟು ವರ್ಷಕ್ಕೆ ಮತ್ತೊಂದು ಶಸ್ತ್ರ ಚಿಕಿತ್ಸೆ ಆಗಿದೆ. ಈ ಶಸ್ತ್ರ ಚಿಕಿತ್ಸೆಯಿಂದ ವೈದ್ಯರು ಹೃದಯ ಮತ್ತು ಲಂಗ್ಸ್ ಕಸಿಯಾಗಬೇಕಿದೆ ಎಂದಿದ್ದಾರೆ.

ಈ ನಡುವೆ ಆಜಾನ್ ನಟ ಸುದೀಪ್ ಅವರನ್ನ ನೋಡಬೇಕು ಎಂದಾಗ ಆಸೆ ಈಡೇರಿಸಿದ್ದಾರೆ. ಈಗ ಮಗು ದೊಡ್ಡವನಾದಾಗ ಇನ್​ಸ್ಪೆಕ್ಟರ್ ಆಗುತ್ತೇನೆ ಎಂದು ಪೋಷಕರ ಬಳಿ ಹೇಳಿದ್ದಾನೆ. ಮಗನ ಆಸೆಯನ್ನ ಪೋಷಕರು ಎಸ್​ಪಿ ಅವರ ಸಹಾಯದಿಂದ ಈಡೇರಿಸಿದ್ದಾರೆ. ಠಾಣೆಗೆ ಹೋಗಿ ಠಾಣಾಧಿಕಾರಿಯ ಚೇರ್ ಮೇಲೆ ಕುಳಿತು ಹೊಸ ಅನುಭವ ಪಡೆದುಕೊಂಡಿದ್ದಾನೆ. ಇದರ ಜೊತೆಗೆ ಮಾಧ್ಯಮದ ಮುಂದೆ ಕುಳಿತು ತಾನೊಬ್ಬ ಪೊಲೀಸ್ ಅಧಿಕಾರಿ ರೀತಿಯಲ್ಲಿ ನಡೆದುಕೊಂಡಿದ್ದಾನೆ.

ಎಂಟೂವರೆ ವರ್ಷದ ಮಗು ಸದ್ಯ ದೊಡ್ಡ ಕಾಯಿಲೆಯಿಂದ ಬಳಲುತ್ತಿದೆ. ಈ ಕಾಯಿಲೆಯಿಂದ ಹೊರಬರಬೇಕೆಂದರೆ ನೂರೆಂಟು ಸವಾಲುಗಳಿವೆ. ಹೃದಯ ಕಾಯಿಲೆ ದುಬಾರಿ ಚಿಕಿತ್ಸೆಯ ಅಗತ್ಯವಿದೆ. ಹೆತ್ತವರು ಮಗುವಿಗೆ ಆಸೆಗಳನ್ನು ತಕ್ಕ ಮಟ್ಟಿಗೆ ಪೂರೈಸುತ್ತಿರುವುದು ಸನ್ನಿವೇಶ ಮಾತ್ರ ಮನಮಿಡಿಯುವಂತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ