
ಶಿವಮೊಗ್ಗ, ಡಿಸೆಂಬರ್ 11: ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ (Crop insurance) ಮಾಡಿಸಿದ ರೈತರು (Farmers) ಈಗ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷದ ಬೆಳೆ ವಿಮೆ ಹಣ ಬಿಡುಗಡೆ ಆಗಿದೆ. ಜಿಲ್ಲೆಯ ರೈತರು ಕೋಟ್ಯಂತರ ರೂ. ಬೆಳೆ ವಿಮೆ ಮಾಡಿಸಿದ್ದು ಅವರ ಕೈಗೆ ಸಿಕ್ಕಿದ್ದು ಮಾತ್ರ ಪುಡಿಗಾಸು. ಬೆಳೆವಿಮೆ ಪರಿಹಾರದಲ್ಲಿ ತಾರತಮ್ಯ ಮತ್ತು ಅವೈಜ್ಞಾನಿಕ ಸಮೀಕ್ಷೆಗಳು ಶಾಕ್ ಕೊಟ್ಟಿವೆ. ಮಲೆನಾಡಿನಲ್ಲಿ ಮಳೆ ಮಾಪನ ಯಡವಟ್ಟು ಸೃಷ್ಟಿಸಿದೆ.
ಕಳೆದ ವರ್ಷ ಅಂದರೆ 2024 ಮತ್ತು 25ರಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಹಣವನ್ನು ವಿಮೆ ಕಂಪನಿಯು ಬಿಡುಗಡೆ ಮಾಡಿದೆ. ಬೆಳೆ ವಿಮೆ ಬಿಡುಗಡೆ ಮಾಡಿದ ಬಳಿಕ ರೈತರಿಗೆ ದೊಡ್ಡ ಶಾಕ್ ಎದುರಾಗಿದೆ. ಅದರಲ್ಲೂ ಅಡಿಕೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷ ಮಲೆನಾಡಿನಲ್ಲಿ ಅತೀ ಹೆಚ್ಚು ಮಳೆ ಆಗಿದೆ. ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರ, ಸೊರಬ ಶಿಕಾರಿಪುರ ಭಾಗದಲ್ಲಿ ಜಾಸ್ತಿ ಮಳೆ ಆಗಿದೆ. ಮುಂಗಾರು ಹಾಕಿದ ಬೆಳೆಗಳು ಬಹುತೇಕ ಹಾಳಾಗಿವೆ. ಈ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡುವುದು ಆಯಾ ಭಾಗದಲ್ಲಿ ಎಷ್ಟು ಮಳೆ ಆಗಿದೆ ಎಂಬುದರ ಮೇಲೆ ಬೆಳೆ ಹಾನಿಯನ್ನು ವಿಮೆ ಕಂಪನಿಯು ಲೆಕ್ಕಾಚಾರ ಹಾಕುತ್ತದೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಗುಡ್ ನ್ಯೂಸ್: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಕೇಂದ್ರ ಅಸ್ತು
ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೋಶ (ಕೆಎಸ್ಎನ್ಡಿಎಂಸಿ) ಜಿಲ್ಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ವರದಿಯನ್ನು ನೀಡಿದೆ. ಈ ಮಳೆ ವರದಿ ನೋಡಿ ಬೆಳೆ ವಿಮೆ ಕಂಪನಿಯು ಬೆಳೆವಿಮೆ ಹಣವನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 280 ಮಳೆ ಮಾಪನ ಕೇಂದ್ರಗಳಿವೆ. ಇದರಲ್ಲಿ 168ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ಕೆಟ್ಟಿವೆ. ಅಂದರೆ ಶೇಕಡಾ 70ರಷ್ಟು ಹಾಳಾಗಿವೆ. ಇದರಿಂದ 2024ರ ಬೆಳೆ ಜಿಲ್ಲೆಯಲ್ಲಿ ಒಟ್ಟು 26 ಕೋಟಿ ರೂ. ವಿಮೆ ಕಂತು ರೈತರು ತುಂಬಿದ್ದರು. ಅವರಿಗೆ ವಿಮೆ ಬಂದಿದ್ದು 113 ಕೋಟಿ ರೂ. 2023ರಲ್ಲಿ 21 ಕೋಟಿ ರೂ ವಿಮೆ ಹಣ ತುಂಬಿದ ರೈತರಿಗೆ 150 ಕೋಟಿ ರೂ ವಿಮೆ ಹಣ ಬಂದಿತ್ತು. 2023ಕ್ಕಿಂತ ಜಾಸ್ತಿ 2024ರಲ್ಲಿ ಮಳೆ ಸುರಿದು ಬೆಳೆಗಳು ಹಾಳಾಗಿದ್ದವು. ಕಳೆದ ವರ್ಷದ ವಿಮೆ ಕಡಿಮೆ ಬಂದಿರುವುದಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ. ಇದೊಂದು ಅವೈಜ್ಞಾನಿಕ ಬೆಳೆ ವಿಮೆ ಎಂದು ರೈತರಾದ ಹಾಲೇಶ್ ಮತ್ತು ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಹೇಕ್ಟರ್ಗೆ 80 ರಿಂದ 70 ಸಾವಿರ ರೂ ಪರಿಹಾರ ಬೆಳೆ ವಿಮೆ ಕಂಪನಿಗಳು ನೀಡಬೇಕು. ಆದರೆ 2024ರಲ್ಲಿ ಒಂದು ಹೇಕ್ಟರ್ಗೆ 10 ರಿಂದ 20 ಸಾವಿರ ರೂ. ಮಾತ್ರ ನೀಡಿದ್ಧಾರೆ. ಜಿಲ್ಲೆಯ ಕೆಲವು ಪಂಚಾಯಿತಿಯಲ್ಲಿ ಹೆಚ್ಚು ವಿಮೆ ನೀಡಿದರೆ, ಅದೇ ಪಕ್ಕ ಪಕ್ಕದ ಗ್ರಾಮ ಪಂಚಾಯಿತಿಗಳಗೆ ಅತೀ ಕಡಿಮೆ ವಿಮೆ ಹಣ ಬಿಡುಡೆಯಾಗಿದೆ. ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ವಿಮೆ ಹಣ ಬಂದರೆ ಬಹುತೇಕ ಪಂಚಾಯಿತಿಗಳಲ್ಲಿ ಕಡಿಮೆ ವಿಮೆ ಹಣ ಬಿಡುಗಡೆಯಾಗಿದೆ.
ಮಳೆಮಾಪನ ಕೇಂದ್ರಗಳು ಜಿಲ್ಲೆಯಲ್ಲಿ ಕೆಟ್ಟು ಹೋಗಿವೆ. ಕಾಟಾಚಾರಕ್ಕೆ ಅಕ್ಕಪಕ್ಕದ ಮಳೆ ಮಾಪನ ಕೇಂದ್ರದ ಮಾಹಿತಿ ಪಡೆದು ಅದನ್ನು ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳಲ್ಲಿ ಅಷ್ಟೇ ಮಳೆ ಆಗಿತ್ತು ಎನ್ನುವ ವರದಿ ನೀಡಿದ್ದಾರೆ. ಇದರಿಂದ ರೈತ ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಬೆಳೆ ಒಂದಡೆ ಹಾಳಾಗಿ ಹೋಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆದ ರೈತರು ಕೈ ಸುಟ್ಟುಕೊಂಡಿದ್ದಾರೆ. ಅತೀಯಾದ ಮಳೆಗೆ ಕೊಳೆ ರೋಗ, ಎಲೆ ಚುಕ್ಕಿ ರೋಗ, ಹಳದಿ ರೋಗ ಬಂದು ಅಡಿಕೆ ಫಸಲು ಬಾರದೇ ಅಡಿಕೆ ಗಿಡಗಲು ಹಾಳಾಗಿ ಹೋಗಿವೆ. ಹೀಗೆ ಹಾಳಾಗಿರುವ ಅಡಿಕೆ ಮತ್ತು ಭತ್ತದ ರೈತರಿಗೆ ಸೂಕ್ತ ಬೆಳೆವಿಮೆ ನೀಡದೆ ಕಂಪನಿ ಮತ್ತು ರಾಜ್ಯ ಸರ್ಕಾರವು ರೈತರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ರೈತರ ಮುಖಂಡರ ಆರೋಪ.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳ ಸಭೆ ಮಾಡಿದ್ದು, 2024ಕ್ಕೆ ಕಡಿಮೆ ಬೆಳೆ ವಿಮೆ ಬರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಳೆ ಮಾಪನ ಕೆಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆ ವೇಳೆ ಗರಂ ಆಗಿದ್ದರು. ಜಿಲ್ಲೆಯಲ್ಲಿ ಬಹುತೇಕ ಕೆಟ್ಟ ಮಳೆ ಮಾಪನದಿಂದ ಬೆಳೆವಿಮೆಯಲ್ಲಿ ರೈತರಿಗೆ ಮೋಸ ಮತ್ತು ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಮಧು ಭರವಸೆ ನೀಡಿದ್ದಾರೆ.
ಸಂಸದ ರಾಘವೇಂದ್ರ ಕೂಡ ಅಧಿಕಾರಿಗಳ ಸಭೆ ನಡೆಸಿ ವಿಮೆ ಕಂಪನಿ ಮತ್ತು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೋಶದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಏಕೆ ಬೆಳೆವಿಮೆ ಕಡಿಮೆ ಎನ್ನುವುದಕ್ಕೆ ಅಧಿಕಾರಿಗಳ ಬಳಿ ಸೂಕ್ತ ಉತ್ತರವಿಲ್ಲ. ಹೀಗಾಗಿ ರೈತರಿಗೆ ಆಗಿರುವ ಬೆಳೆ ವಿಮೆ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕೆಂದು ಸಂಸದ ರಾಘವೇಂದ್ರ ಎಚ್ಚರಿಕೆ ನಿಡಿದ್ದಾರೆ. ಅಧಿವೇಶನ ನಡೆಯುತ್ತಿದೆ, ಅಲ್ಲಿ ವಿಪಕ್ಷದ ಶಾಸಕರು ಈ ಕುರಿತು ಚರ್ಚೆ ಮಾಡುತ್ತಾರೆ. ಶೀಘ್ರದಲ್ಲೇ ಜಿಲ್ಲೆ ಮತ್ತು ರಾಜ್ಯದಲ್ಲಿ ಆಗಿರುವ ಬೆಳೆವಿಮೆ ಅನ್ಯಾಯವನ್ನು ಸರಿಪಡಿಸಬೇಕೆಂದು ಸಂಸದರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹೋಗಿ ಮೋದಿ, ಅಮಿತ್ ಶಾನ ಕೇಳು: ತೊಗರಿ ಬೆಳೆ ಹಾಳಾಯ್ತು ಎಂದಿದ್ದಕ್ಕೆ ರೈತ ಯುವಕನ ಮೇಲೆ ಮಲ್ಲಿಕಾರ್ಜುನ ಖರ್ಗೆ ಗರಂ
ಕಳೆದ ವರ್ಷ ಬೆಳೆ ವಿಮೆಗೆ ಹಣ ಕಟ್ಟಿದ ರೈತರಿಗೆ ವಿಮೆ ಕಂಪನಿಯು ಅನ್ಯಾಯ ಮಾಡುತ್ತಿದೆ. ಬಿಡಿಕಾಸಿನ ವಿಮೆ ಹಣ ಬಿಡುಗಡೆ ಮಾಡುತ್ತಿದೆ. ಮಳೆ ಮಾಪನ ಕೇಂದ್ರ ಕೆಟ್ಟು ಹೋಗಿದ್ದರಿಂದ ಬೆಳೆವಿಮೆ ವಿತರಣೆಯಲ್ಲಿ ದೊಡ್ಡ ಯಡವಟ್ಟು ಉಂಟಾಗಿದೆ. ಬೆಳೆವಿಮೆ ಮಾಡಿಸಿದ ರೈತರು ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ. ಈ ಸಮಸ್ಯೆಗೆ ಸರಕಾರವೇ ಸೂಕ್ತ ಪರಿಹಾರಕಂಡುಕೊಳ್ಳುವ ಮೂಲಕ ರೈತರ ನೆರವಿಗೆ ಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.