ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ಅತ್ಯಂತ ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆ. ದಕ್ಷಿಣ ಕನ್ನಡ, ಬೆಂಗಳೂರು, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗಿನ ನಂತರ ಕರ್ನಾಟಕದ 6ನೇ ಅತಿ ಹೆಚ್ಚು ಸಾಕ್ಷರತೆಯ ಜಿಲ್ಲೆಯಾಗಿದೆ. ಭದ್ರಾವತಿಯ ವಿದ್ಯಾರ್ಥಿ ರಂಜನ್ ಬಿಎಸ್ ಎಸ್ ಎಸ್ ಎಲ್ ಸಿಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಮಲೆನಾಡು ಪ್ರದೇಶದ ಈ ಜಿಲ್ಲೆಯು ಸುಮಾರು 2,300 ಪ್ರಾಥಮಿಕ ಶಾಲೆಗಳು, 200ಕ್ಕೂ ಹೆಚ್ಚು ಕಾಲೇಜುಗಳು ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಇತರ ವೃತ್ತಿಪರ ಸಂಸ್ಥೆಗಳನ್ನು ಹೊಂದಿದೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಶಿವಮೊಗ್ಗ ರಾಷ್ಟ್ರಕವಿ ಹಾಗೂ ಜ್ಞಾನಪೀಠ ಪುರಸ್ಕೃತ ಮೊದಲ ಸಾಹಿತಿ ಕುವೆಂಪು, ಖ್ಯಾತ ಸಾಹಿತಿಗಳಾದ ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಹಾಮಾ ನಾಯಕ್ ಮುಂತಾದವರು ಹುಟ್ಟಿ, ಬೆಳೆದ ಜಿಲ್ಲೆ. ರಂಗಕರ್ಮಿಗಳು ಮತ್ತು ಬುದ್ಧಿಜೀವಿಗಳಾದ ಟಿ.ಎಸ್. ವೆಂಕಣ್ಣಯ್ಯ, ಕೆ.ವಿ. ಸುಬ್ಬಣ್ಣ, ಕೆ.ವಿ. ಅಕ್ಷರ, ಪ್ರಸನ್ನ, ಗಾಯಕ ಶಿವಮೊಗ್ಗ ಸುಬ್ಬಣ್ಣ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೀಗೆ ಎಲ್ಲ ಕ್ಷೇತ್ರಗಳಿಗೂ ಅನೇಕ ದಿಗ್ಗಜರನ್ನು ನೀಡಿದ ಜಿಲ್ಲೆ ಶಿವಮೊಗ್ಗ. ರಾಜಕೀಯದಲ್ಲೂ ಶಿವಮೊಗ್ಗ ಜಿಲ್ಲೆಯವರದೇ ಸಿಂಹಪಾಲು. ಆದರೆ, ಈ ಶಿವಮೊಗ್ಗ ಇತ್ತೀಚೆಗೆ ಕೋಮು ಗಲಭೆಗಳಿಂದ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ: ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಖಡ್ಗ ಹಿಡಿದ ಟಿಪ್ಪು ಸುಲ್ತಾನ್ ಕಟೌಟ್ ಔಟ್
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕರ್ನಾಟಕದಲ್ಲಿ ಮಲೆನಾಡು ಅತ್ಯಂತ ತೀವ್ರವಾದ ಬ್ರಿಟಿಷ್ ವಿರೋಧಿ ಹೋರಾಟಗಳನ್ನು ನಡೆಸಿತ್ತು. ರೈತರ ಊಳಿಗಮಾನ್ಯ ವಿರೋಧಿ ಹೋರಾಟಗಳನ್ನು ಈ ಜಿಲ್ಲೆ ಕಂಡಿದೆ. ಕರ್ನಾಟಕದ ಅತ್ಯಂತ ಪ್ರಸಿದ್ಧ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ ಗೌಡರು ಕೂಡ ಇದೇ ಜಿಲ್ಲೆಯವರು. ಅತ್ಯಂತ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಸಂಪ್ರದಾಯಗಳು ಮತ್ತು ಜನಪರ ಹೋರಾಟದ ಈ ಶಿವಮೊಗ್ಗ ಜಿಲ್ಲೆ ಈಗ ಕೋಮುಗಲಭೆಯ ಕೇಂದ್ರವಾಗಿ ಮಾರ್ಪಟ್ಟಿರುವುದು ದುರಂತ.
ಕರ್ನಾಟಕದಲ್ಲಿ 2019ರಿಂದ ವರದಿಯಾದ 163 ಕೋಮು ಘಟನೆಗಳಲ್ಲಿ ಅತಿ ಹೆಚ್ಚು ಅಂದರೆ 57 ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿವೆ ಎಂಬುದು ಆತಂಕಕಾರಿ ಸಂಗತಿ. ಹಸಿರು ಹೊದ್ದು ಮಲಗಿರುವ ತಣ್ಣನೆಯ ಈ ಜಿಲ್ಲೆಯಲ್ಲಿ ಈಗೀಗ ನೆತ್ತರಿನೋಕುಳಿ ಹೆಚ್ಚಾಗುತ್ತಿದೆ. ವಿಶ್ವಮಾನವ ಸಂದೇಶ ಸಾರಿದ್ದ ಕುವೆಂಪು ಅವರ ಜಿಲ್ಲೆಯಲ್ಲೇ ಕೋಮುಗಲಭೆಗಳು, ಧಾರ್ಮಿಕ ಸಂಘರ್ಷಗಳು ಹೆಚ್ಚುತ್ತಿರುವುದು ವಿಪರ್ಯಾಸ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ವರ್ಷ ಹರ್ಷ ಎಂಬ ಯುವಕನ ಹತ್ಯೆಯಿಂದ ಕೋಮು ಗಲಭೆ ಏರ್ಪಟ್ಟಿತ್ತು. ಈ ವರ್ಷ ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು ಕೋಮುಗಲಭೆ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಶ್ರೀಮಂತ ಮುಸ್ಲಿಮರು ನಿರ್ಮಿಸಿದ ಮಸೀದಿಗಳ ಸಂಖ್ಯೆ ಹೆಚ್ಚುತ್ತಿರುವುದು ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅಪನಂಬಿಕೆ ಮತ್ತು ಅನುಮಾನಕ್ಕೆ ಕಾರಣವಾಗಿದೆ. ಹಿಂದೂ ಸಮುದಾಯಗಳು ಇದನ್ನು ಖಂಡಿಸುತ್ತಿವೆ.
ಇದನ್ನೂ ಓದಿ: ಶಿವಮೊಗ್ಗ: ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ, 24 ಜನರ ವಿರುದ್ಧ ಎಫ್ಐಆರ್ ದಾಖಲು
ಇನ್ನೊಂದೆಡೆ, ಹಿಂದೂ ಸಮುದಾಯಗಳು ಅದರಲ್ಲೂ ಬಜರಂಗದಳದ ಸದಸ್ಯರು ಪ್ರತಿ ವರ್ಷ ಶಿವಮೊಗ್ಗದಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಪ್ರಾರಂಭಿಸಿದರು. ಶಿವಮೊಗ್ಗ ನಗರದ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಗಣಪತಿಯ ಮೆರವಣಿಗೆಗಳನ್ನು ನಡೆಸತೊಡಗಿದ್ದು, ಉದ್ವಿಗ್ನತೆಯನ್ನು ಹೆಚ್ಚಿಸಿತು. ಹೀಗಾಗಿ, ಪ್ರತಿವರ್ಷ ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಾಯಿತು.
ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬೆನ್ನಲ್ಲೇ 3 ಪ್ರಮುಖ ಹಿಂಸಾಚಾರಗಳು ನಡೆದವು. 1983ರಲ್ಲಿ, 1995ರಲ್ಲಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನಿಗೆ ಇರಿದಿದ್ದಾಗ ಗಲಭೆ ಏರ್ಪಟ್ಟಿತ್ತು. 2010ರಲ್ಲಿ ಪರ್ದಾ ವಿರುದ್ಧ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಬರೆದ ಲೇಖನದ ಪ್ರಕಟಣೆಯ ವಿರುದ್ಧ ಮುಸ್ಲಿಮರು ಬಲವಾಗಿ ಪ್ರತಿಭಟಿಸಿದಾಗ ಪೋಲಿಸ್ ಗುಂಡಿನ ದಾಳಿಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು.
ಇದರ ಬೆನ್ನಲ್ಲೇ 2022ರಲ್ಲಿ ಹಿಜಾಬ್ ವಿವಾದವು ಕರ್ನಾಟಕದಲ್ಲಿ ಹಿಂದೂ- ಮುಸ್ಲಿಮರ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸಿತು. ಈ ಎರಡು ಸಮುದಾಯಗಳ ನಡುವಿನ ವಾದ-ವಿವಾದ ಶಿಕ್ಷಣ ಸಂಸ್ಥೆಗಳಿಗೂ ಕಾಲಿಟ್ಟಿತು. ಈ ಹಿಂದೆ ಈ ರೀತಿಯ ವಿವಾದಗಳು ಉಂಟಾದಾಗ ಎರಡೂ ಸಮುದಾಯದ ನಾಯಕರು ಮುಂದಾಳತ್ವ ವಹಿಸಿಕೊಂಡು ತಮ್ಮ ಸಮುದಾಯಗಳ ಶಾಂತಿ ಕಾಪಾಡಲು ಶಾಂತಿ ಸಮಿತಿಯನ್ನು ರಚಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ಅಂತಹ ಪ್ರಯತ್ನಗಳು ಕಡಿಮೆಯಾಗಿವೆ ಅಥವಾ ಎರಡೂ ಕಡೆಯ ಆಕ್ರಮಣಕಾರಿತನದಿಂದ ಆ ಪ್ರಯತ್ನಗಳು ವಿಫಲವಾಗಿವೆ. ಮುಖ್ಯವಾಗಿ ಸೋಶಿಯಲ್ ಮೀಡಿಯಾ ಈ ರೀತಿಯ ಕೋಮು ಸಂಘರ್ಷಗಳ ಬೆಂಕಿಗೆ ಎಣ್ಣೆ ಎರೆಯುವ ಕೆಲಸ ಮಾಡುತ್ತಿರುವುದು ದುಃಖಕರ ಸಂಗತಿ. ಈ ಹಿನ್ನೆಲೆಯಲ್ಲಿ ಮಲೆನಾಡು ಕೋಮುಗಲಭೆಯ ಕೇಂದ್ರವಾಗಿ ಮಾರ್ಪಡುತ್ತಿದೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Tue, 3 October 23