ಶಿವಮೊಗ್ಗ: ಜಿಲ್ಲೆಯ ಸಾಗರ(Sagara) ತಾಲ್ಲೂಕಿನಲ್ಲಿರುವ ಖಾಸಗಿ ವಸತಿ ಶಾಲೆಯಲ್ಲಿ 13 ವರ್ಷದ ತೇಜಸ್ವಿನಿ ಎಂಬ ಬಾಲಕಿ 8ನೇ ಕ್ಲಾಸ್ ನಲ್ಲಿ ವ್ಯಾಸ್ಯಾಂಗ ಮಾಡುತ್ತಿದ್ದಳು. ವಸತಿ ಶಾಲೆಯಲ್ಲಿ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ವಿದ್ಯಾರ್ಥಿ ಮೃತಪಟ್ಟಿದ್ದು, ವಿದ್ಯಾರ್ಥಿನಿಯು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆಂದು ಪೋಷಕರು, ಮೃತಳ ಸಂಬಂಧಿಗಳು ಆರೋಪಿಸುತ್ತಿದ್ದಾರೆ. ಹೌದು ಮದ್ಯಾಹ್ನ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಖಾಸಗಿ ವಸತಿ ಶಾಲೆಯ ಸಿಬ್ಬಂದಿಗಳು ಕೂಡಲೇ ಸಾಗರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸುವ ಮೊದಲೇ ವಿದ್ಯಾರ್ಥಿನಿಯು ಮೃತಪಟ್ಟಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ. ಇದರಿಂದ ಕುಟುಂಬಸ್ಥರಿಗೆ ದೊಡ್ಡ ಅಚ್ಚರಿ ಮತ್ತು ಆಘಾತವಾಗಿದೆ.
ಆರೋಗ್ಯವಾಗಿದ್ದ ಮಗಳು, ವಸತಿ ಶಾಲೆಗೆ ಹೋದ ಕೆಲವೇ ದಿನದಲ್ಲಿ ಅನಾರೋಗ್ಯಕ್ಕೊಳಗಾಗಿದ್ದು ಹೇಗೆ?. ಈ ಕುರಿತು ವಸತಿ ಶಾಲೆಯವರು ಯಾವುದೇ ಮಾಹಿತಿಯನ್ನು ಪೋಷಕರಿಗೆ ಕೊಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತಳ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಹಾಸ್ಟೇಲ್ ನಲ್ಲಿರುವ ಅವ್ಯವಸ್ಥೆಯಿಂದಲೇ ವಿದ್ಯಾರ್ಥಿನಿಯು ಮೃತಪಟ್ಟಿದ್ಧಾಳೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಾಗರ ತಾಲೂಕಿನ ವನಶ್ರೀ ಎನ್ನುವ ವಸತಿ ಶಾಲೆಯಲ್ಲಿ ನೂರಾರು ಮಕ್ಕಳು ವ್ಯಾಸ್ಯಾಂಗ ಮಾಡುತ್ತಿದ್ದಾರೆ. ಅದರಲ್ಲೂ ಬಡ ಮಕ್ಕಳಿಗೆ ಇಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ. ಹೆಚ್ಚು ಹೊರ ರಾಜ್ಯದ ಬಡಮಕ್ಕಳು ವನಶ್ರೀಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಸ್ಥಳೀಯವಾಗಿ ಬಡ ಹೆಣ್ಣು ಮಕ್ಕಳಿಗೆ ಇಲ್ಲಿ ಉಚಿತವಾಗಿ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಸೊರಬ ತಾಲೂಕಿನ ಶಿವಪುರ ಗ್ರಾಮದ ತೇಜಸ್ವಿನಿಯನ್ನು ಕಳೆದ ಮೂರು ನಾಲ್ಕು ದಿನಗಳ ಹಿಂದೆ ವಸತಿ ಶಾಲೆಗೆ ಸೇರಿಸಲಾಗಿತ್ತು. ಈ ನಡುವೆ ಹಠಾತ್ ಆಗಿ ತೇಜಸ್ವಿನಿ ಮೃತಪಟ್ಟಿದ್ದು, ಪೋಷಕರಿಗೆ ದಿಕ್ಕೇ ತೋಚದಂತಾಗಿದೆ.
ಎಸ್ಸಿ ಸಮಾಜಕ್ಕೆ ಸೇರಿದ ವಿದ್ಯಾರ್ಥಿನಿಯ ಉತ್ತಮ ಭವಿಷ್ಯಕ್ಕಾಗಿ ಖಾಸಗಿ ವಸತಿ ಶಾಲೆಯಲ್ಲಿ ದಾಖಲು ಮಾಡಲಾಗಿತ್ತು. ಶಾಲೆಯ ಆರಂಭದ ಕೆಲವೇ ದಿನದಲ್ಲಿ ವಿದ್ಯಾರ್ಥಿನಿಯು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಹಾಸ್ಟೇಲ್ನಲ್ಲಿ ವಿದ್ಯಾರ್ಥಿನಿಗೆ ಸಮಸ್ಯೆ ಆಗಿದೆ. ಇದರಿಂದ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರಪೇರು ಆಗಿದೆ. ಕೂಡಲೇ ವಿದ್ಯಾರ್ಥಿನಿಯ ಪೋಷಕರಿಗೆ ಮಾಹಿತಿ ಕೊಟ್ಟು, ಅವಳನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿತ್ತು. ಇಲ್ಲಿ ಆರೋಗ್ಯ ಸಮಸ್ಯೆ ಆದ್ರೂ, ಹಾಸ್ಟೇಲ್ನಲ್ಲಿರುವ ಸಿಬ್ಬಂದಿಗಳು ಮತ್ತು ವಾರ್ಡ್ ನ್ಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯ ಸಾವು ಹಾಸ್ಟೇಲ್ನಲ್ಲೇ ಆಗಿದೆ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಅನುಮಾನಸ್ಪದ ಸಾವು ಕುರಿತು ಕೇಸ್ ದಾಖಲಾಗಿದೆ.
ಹಾಸ್ಟೇಲ್ಗೆ ಹೋಗಿ ಕೇವಲ ಮೂರು ನಾಲ್ಕು ದಿನಗಳಾಗಿತ್ತು. ಅಷ್ಟರಲ್ಲೇ ವಿದ್ಯಾರ್ಥಿನಿಯು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಮಗಳ ಸಾವಿನಿಂದ ಪೋಷಕರು ಕಂಗಾಲು ಆಗಿದ್ದಾರೆ. ಸೂಕ್ತ ತನಿಖೆಯ ಬಳಿಕವಷ್ಟೇ ವಿದ್ಯಾರ್ಥಿನಿಯ ಸಾವಿನ ರಹಸ್ಯ ಬಯಲಾಗಬೇಕಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:38 am, Sat, 10 June 23